ಬೆಂಗಳೂರು: ವಯಕ್ತಿಕ ನೋವು ಎಷ್ಟೇ ಇದ್ದರು ನುಂಗಿ, ಸಮಾರಂಭಗಳಲ್ಲಿ ಸ್ಮೈಲ್ ಪ್ಲೀಸ್ ಎನ್ನುತ್ತಾ ಸಮಾರಂಭಗಳಲ್ಲಿ ಎಲ್ಲರ ನಗುವನ್ನ ಬಯಸುವ ಏಕೈಕ ವೃತ್ತಿಯಾದ ಛಾಯಾಗ್ರಹಣ ಕ್ಷೇತ್ರ ಕರೊನಾ ಕಾರಣ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ.
ರಾಜ್ಯದಲ್ಲಿ ಸಾವಿರಾರು ಮಂದಿ ಛಾಯಾಗ್ರಾಹಕ ವೃತ್ತಿಯನ್ನೇ ನಂಬಿ ಬದುಕುತ್ತಿದ್ದಾರೆ, ಇವರಲ್ಲಿ ಬಹುತೇಕರಿಗೆ ಛಾಯಾಗ್ರಹಣ ಬಿಟ್ಟರೆ ಬೇರೆ ಉದ್ಯೋಗ ತಿಳಿದಿಲ್ಲ. ಆದರೆ ಮಹಾಮಾರಿ ಕರೊನಾ ಸದಾ ಸ್ಮೈಲ್ ಪ್ಲೀಸ್ ಎನ್ನುತ್ತಿದ್ದವರ ನಗುವನ್ನೆ ಕಸಿದುಕೊಂಡು ಬಿಟ್ಟಿದೆ.
ಮೊದಲನೇ ಅಲೆಯ ಲಾಕ್ಡೌನ್ ನಿಂದ ಉಂಟಾದ ತೊಂದರೆಯಿಂದ ಉಸಿರಾಡುವ ಮುನ್ನವೇ, ಎರಡನೇ ಅಲೆ ಒಕ್ಕರಿಸಿ ಛಾಯಾಗ್ರಹಕರನ್ನು ಮತ್ತಷ್ಟು ಸಮಸ್ಯೆಗೆ ತಳ್ಳಿದೆ.
ಕ್ಯಾಮೆರಾ ಮತ್ತಿತರ ಉಪಕರಣಗಳಿಗೆ ಸಾಲಮಾಡಿ ಲಕ್ಷಾಂತರ ಬಂಡವಾಳ ಹಾಕಿ ಮದುವೆ ಸಮಾರಂಭಗಳು ನಡೆಯುವ (ಮೇ.ಜೂನ್) ತಿಂಗಳಿಗಾಗಿ ಕಾಯುತ್ತಿದ್ದ ಛಾಯಾಗ್ರಾಹಕರಿಗೆ, ಎರಡನೇ ಅಲೆಯ ಕಾರಣ ಘೋಷಿಸಲಾದ ಕರೊನಾ ಕರ್ಫ್ಯೂಯಿಂದಾಗಿ ಜೀವನ ನಿರ್ವಹಣೆಗೆ ಕಷ್ಟಗಳು ಎದುರಾಗಿದೆ.
ಎಷ್ಟೋ ವಯಕ್ತಿಕ ತೊಂದರೆ – ನೋವಿದ್ದರು ಎಲ್ಲರ ಮುಖದಲ್ಲಿ ನಗುವನ್ನು ಬಯಸುತ್ತಿದ್ದ, ಛಾಯಾಗ್ರಾಹಕರು ತಮ್ಮ ಸಮಸ್ಯೆಗಳನ್ನು ಯಾರಿಗೂ ಹೇಳಿಕೊಳ್ಳಲಾಗದೆ ಬಸವಳಿಯುತ್ತಿದ್ದಾರೆ.
ಕರೊನಾ ಸೋಂಕು ತಡೆಗಟ್ಟಲು ಮದುವೆ ಸಮಾರಂಭಗಳಿಗೆ ಸರ್ಕಾರ 50 ಮಂದಿಯನ್ನು ಸೀಮಿತ ಮಾಡಿದ ಪರಿಣಾಮ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಸೀಮಿತ ಮಂದಿಯ ಅವಕಾಶದ ಕಾರಣ ಮೋಬೈಲ್ ಗಳಲ್ಲಿಯೇ ಪೊಟೋ / ವಿಡಿಯೋ ಮಾಡಿಕೊಂಡು ಸಮಾರಂಭ ಮುಗಿಸುತ್ತಿದ್ದು ಛಾಯಾಗ್ರಾಹಕರ ಅಸ್ಥಿತ್ವಕ್ಕೆ ಕೊಡಲಿ ಪೆಟ್ಟು ಬಿದ್ದು, ಅವರ ಹಾಗೂ ಕುಟುಂಬದ ಬದುಕನ್ನು ದುಸ್ತರವಾಗಿಸಿದೆ. ಅಲ್ಲದೆ ಛಾಯಾಗ್ರಾಹಕರ ನಂಬಿ ನಡೆಸುತ್ತಿದ್ದ ಅನೇಕ ವ್ಯಾಪಾರ ವಹಿವಾಟುಗಳ ಮೇಲೂ ವ್ಯತಿರಿಕ್ತವಾದ ಪರಿಣಾಮ ಎಂದುರಾಗಿದ್ದು ಸರ್ಕಾರದಿಂದ ತ್ವರಿತ ನೆರವು ಅಗತ್ಯವಿದೆ.
ಛಾಯಾಗ್ರಹಕರ ಪರಿಗಣಿಸದ ಸರ್ಕಾರ: ಕರೊನಾ ತುರ್ತು ಪರಿಸ್ಥಿತಿಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅನೇಕರಿಗೆ ಆರ್ಥಿಕ ನೆರವು ಘೋಷಿಸಿತು. ಆದರೆ ಸರ್ಕಾರಗಳಿಗೆ ಸದಾ ನಗುವಿಗಾಗಿ ಹಂಬಲಿಸುವ ಛಾಯಾಗ್ರಾಹಕರ ಕುಟುಂಬದವರ ಹಸಿವು ಕಾಣದಾಗಿದ್ದು ಮಾತ್ರ ವಿಪರ್ಯಾಸ.
ಬಡ ಛಾಯಾಗ್ರಾಹಕರಿಗೆ ಸರ್ಕಾರ ನೆರವಾಗಲಿ: ಮಧುಗಿರಿ ತಾಲೂಕಿನಲ್ಲಿ 180 ಮಂದಿ ಛಾಯಾಗ್ರಾಹಕರು ಉದ್ಯಮ ನಂಬಿ ಬದುಕುದತ್ತಿದ್ದಾರೆ. ಲಾಕ್ಡೌನ್ ನಂತರದ ಕರ್ಫ್ಯೂ ಮತ್ತೆ ಅವರ ಬದುಕನ್ನು ಸಂಕಷ್ಟಕ್ಕೆ ತಳ್ಳಿದೆ. ಕೂಡಲೇ ರಾಜ್ಯ ಸರ್ಕಾರ ಬಡ ಛಾಯಾಗ್ರಾಹಕರ ನೆರವಿಗಾಗಿ ಪ್ಯಾಕೇಜ್ ಘೋಷಿಸಬೇಕೆಂದು ಮಧುಗಿರಿ ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಪಾಂಡುರಂಗಯ್ಯ ಒತ್ತಾಯಿಸಿದ್ದಾರೆ.
ಛಾಯಾಗ್ರಾಹಕರ ಬೇಡುವ ಸ್ಥಿತಿಗೆ ತರಬೇಡಿ: ಇಷ್ಟು ವರ್ಷಗಳ ಕಾಲ ಸರ್ಕಾರದಿಂದಾಗಲಿ ಯಾವುದೇ ನೆರವು ಕೇಳದೆ, ತಮ್ಮ ಜೀವನ ತಾವು ನಡೆಸುತ್ತಿರುವ ಛಾಯಾಗ್ರಾಹಕರ ವೃತ್ತಿ ನಡೆಸಲು ಸರ್ಕಾರ ಅವಕಾಶ ನೀಡಬೇಕು. ಕೋವಿಡ್-19 ನಿಯಮ ಉಲ್ಲಂಘನೆಯಾಗುವ ಎಷ್ಟೋ ಉದ್ಯಮಗಳಿಗೆ ಸರ್ಕಾರ ಅವಕಾಶ ನೀಡಿದೆ. ಆದರೆ ಸಾಮಾಜಿಕ ಅಂತರ ಕಾಪಾಡುವ, ಯಾರಿಗೂ ತೊಂದರೆ ಮಾಡದ ಛಾಯಾಗ್ರಾಹಕ ಕ್ಷೇತ್ರಕ್ಕೆ ಅವಕಾಶ ನೀಡದೆ ಫೋಟೋಗ್ರಾಫರ್ ಗಳನ್ನು ಬೇಡುವ ಸ್ಥಿತಿಗೆ ತರಬಾರದೆಂದು ಅಂತರರಾಷ್ಟ್ರೀಯ ಛಾಯಾಗ್ರಾಹಕ ಜಿ.ರಾಜು ಒತ್ತಾಯಿಸಿದ್ದಾರೆ.
ಪೊಟೋಗಾಗಿ ಮುಂದೆ ಬರೋರಿಗೆ, ಪೊಟೋ ತಗೆಯುವವನ ಕಷ್ಟವೇಕೆ ಅರಿವಾಗುತ್ತಿಲ್ಲ: ಕರೊನಾದಿಂದ ಜೀವನ ಉಳಿಸಿಕೊಳ್ಳಬೇಕು ನಿಜ. ಆದರೆ ಕರೊನಾ ನಿಯಮ ಪಾಲಿಸುವ ಛಾಯಾಗ್ರಾಹಕರ ಬದುಕಿನ ಮೇಲೆ ಸರ್ಕಾರದ ಗದಾ ಪ್ರಹಾರವೇಕೆ. ಹೋಟೆಲ್, ದಿನಸಿ ಎಲ್ಲಕ್ಕು ಅವಕಾಶ ನೀಡಿದೆ ಅಲ್ಲಿ ಸಮಾಜಿಕ ಅಂತರ ಇರುವುದೇ ಇಲ್ಲ. ಆದರೆ ಯಾರ ಸನಿಹಕ್ಕೆ ತೆರಳುವ ಅಗತ್ಯತೆಯೇ ಇಲ್ಲದೆ ಕಾರ್ಯ ನಿರ್ವಹಿಸುವ ಛಾಯಾಗ್ರಾಹಕರ ಕ್ಷೇತ್ರಕ್ಕೆ ಅನುಮತಿ ನೀಡದೆ ಛಾಯಾಗ್ರಾಹಕರ ಜೀವನವನ್ನು ರಾಜ್ಯ ಸರ್ಕಾರವೇ ಕಷ್ಟಕ್ಕೆ ದೂಡಿದೆ. ಕೂಡಲೇ ಛಾಯಾಗ್ರಾಹಕರ ನೆರವಿಗೆ ಸರ್ಕಾರ ಧಾವಿಸಬೇಕಿದ್ದು ಪ್ಯಾಕೇಜ್ ಘೋಷಿಸುವುದು ಹಾಗೂ ಸ್ಟುಡಿಯೋ ನಡೆಸಲು ಅನುಮತಿ ನೀಡಬೇಕೆಂದು ದೊಡ್ಡಬಳ್ಳಾಪುರದ ಮಹೇಶ್ ಸ್ಟುಡಿಯೋ ಗುರುಶಂಕರಾಚಾರ್ ಒತ್ತಾಯಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….