ಶಬರಿ ಅರಣ್ಯದ ಬೇಡರ ನಾಯಕನ ಮಗಳಾಗಿದ್ದಳು. ಇವಳ ಮದುವೆ ತಯಾರಿ ನಡೆಯುತ್ತಿತ್ತು. ಆ ಸಮಯದ ಭೋಜನಕ್ಕೆಂದು, ಸಾವಿರಾರು ಸಂಖ್ಯೆಯಲ್ಲಿ ಕುರಿ, ಕೋಳಿ, ಮೇಕೆ, ಜಿಂಕೆ, ಮೊಲ ಮೊದಲಾದ ಪ್ರಾಣಿಗಳನ್ನು ತಂದರು.
ಇದನ್ನು ನೋಡಿದ ಶಬರಿಯು, ಇಷ್ಟೊಂದು ಪ್ರಾಣಿಗಳು ಏಕೆಂದು ಕೇಳಿದಳು. ಇವೆಲ್ಲ ನಿನ್ನ ಮದುವೆಯ ದಿನ ಕಾಡಿನನ ವರಿಗೆಲ್ಲ ಭೋಜನಕ್ಕೆ ಖಾದ್ಯ ತಯಾರಿಸಲು ತರಿಸಲಾಗಿದೆ ಎಂದು ತಿಳಿಯಿತು. ಇದನ್ನು ಕೇಳಿದ ಶಬರಿಯ ಮನಸ್ಸಿಗೆ ತುಂಬಾ ನೋವಾಯಿತು, ಅವಳು ಪ್ರಾಣಿ ಹಿಂಸೆಯನ್ನು ವಿರೋಧಿಸುತ್ತಿದ್ದಳು. ಅದರಲ್ಲೂ ಪಾಪದ ಪ್ರಾಣಿಗಳಾದ ಜಿಂಕೆ, ಮೊಲ, ಕುರಿ, ಕೋಳಿ ಇವುಗಳನ್ನೆಲ್ಲ ಕೊಂದು ಖಾದ್ಯ ತಯಾರಿಸುವುದಾದರೆ, ನನಗೆ ಎಂದೆಂದಿಗೂ ಮದುವೆ ಬೇಡ ನಾನು ಹಾಗೆ ಇರುತ್ತೇನೆ ಎಂದು, ಅವಳು ಮದುವೆಯನ್ನೇ ಮಾಡಿಕೊಳ್ಳದೆ ವೈರಾಗ್ಯದಿಂದ ಅರಮನೆ ಬಿಟ್ಟು ಹೊರಟೇಬಿಟ್ಟಳು.
ಹಾಗೆ ಸಂಚರಿಸುತ್ತಾ ಋಷ್ಯಮೂಕ ಪರ್ವತಕ್ಕೆ ಬಂದಳು. ಅಲ್ಲಿ ತಪಸ್ವಿಗಳಾದ ಮಾತಂಗ ಮಹರ್ಷಿಗಳಿದ್ದರು. ಇಂತಹ ತಪಸ್ವಿಗಳಾದ ಮಹಾಮಹಿಮರ ಸೇವೆಯನ್ನು ಮಾಡುತ್ತಾ ಶಬರಿಯು ಅಲ್ಲಿಯೇ ನೆಲೆಸಿದಳು.
ಯಾವುದೇ ಅಪೇಕ್ಷೆ ಇಲ್ಲದೆ ಸೇವೆ ಮಾಡುತ್ತಾ ಸಂತೋಷದಿಂದ ಇದ್ದಳು. ಮಾತಂಗ ಮಹಾಮುನಿಗಳಿಗೆ ವಯಸ್ಸಾಗಿ ನಿರ್ವಾಣಹೊಂದಿದರು.
ಪ್ರಾಣ ಹೋಗುವ ಸ್ವಲ್ಪ ಸಮಯದ ಮೊದಲು ಶಬರಿಗೆ, ನೀನು ಫಲಾಪೇಕ್ಷೆ ಇಲ್ಲದೆ ನನ್ನ ಸೇವೆಯನ್ನು ಮಾಡಿರುವೆ ಶ್ರೀಮನ್ನಾರಾಯಣನು ರಾಮನಾಗಿ ಅವತರಿಸಿ ಈ ಪರ್ವತಕ್ಕೆ ಬರುತ್ತಾನೆ. ಆಗ ನಿನಗೆ ದರ್ಶನ ನೀಡುತ್ತಾನೆ. ಅಲ್ಲಿಯವರೆಗೂ ನೀನು ಶ್ರೀರಾಮ ನಾಮ ಸ್ಮರಣೆಯನ್ನು ಮಾಡುತ್ತಾ ಇಲ್ಲೇ ಕಾಯುತ್ತಿರು ಎಂದು ಹೇಳಿದ್ದರು. ಆದರೆ ಅದಾಗಲೇ ಶಬರಿಗೆ ವಯಸ್ಸಾಗಿ ಮುದುಕಿಯಾಗಿದ್ದಳು. ಮಾತಂಗ ಮುನಿಯ ಮಾತಿನಂತೆ ಶಬರಿ ರಾಮನ ಬರುವಿಕೆಗಾಗಿ ಕಾಯುತ್ತಿದ್ದಳು.
ಶ್ರೀರಾಮನು ಬಂದಾಗ ಅವನಿಗೆ ಏನು ಕೊಡುವುದು ಎಂದು ಯೋಚಿಸಿದ ಶಬರಿ, ಪ್ರತಿದಿನವೂ ಮುಂಜಾನೆ ಎದ್ದು ಕೋಲೂರಿಕೊಂಡು ಕಾಡಿಗೆ ಹೋಗಿ ಸಿಹಿಯಾದ ಹಣ್ಣುಗಳನ್ನು ಸಂಗ್ರಹಿಸಿ ಮನೆಗೆ ತಂದು ಅದನ್ನು ಸ್ವಲ್ಪ ಕಚ್ಚಿ ರುಚಿ ನೋಡಿ ಚೆನ್ನಾಗಿದ್ದು, ಸಿಹಿಯಾಗಿರುವುದನ್ನು ಆರಿಸಿ ರಾಮನಿಗೆ ಇಡುತ್ತಿದ್ದಳು.
ಈ ಅಭ್ಯಾಸವನ್ನು ಅವಳೆಂದಿಗೂ ತಪ್ಪಿಸಲಿಲ್ಲ ಅಂತೂ ಸಾರ್ಥಕವಾದ ಆ ದಿನ ಬಂದೇಬಿಟ್ಟಿತು. ಅಂದು ಶ್ರೀರಾಮನು ತಮ್ಮ ಲಕ್ಷ್ಮಣನೊಂದಿಗೆ, ಸೀತೆಯನ್ನು ಹುಡುಕುತ್ತಾ ಋಷ್ಯಮೂಕ ಪರ್ವತಕ್ಕೆ ಬಂದನು.
ಅಲ್ಲಿ ಅನೇಕ ಋಷಿಮುನಿಗಳು ತಪಸ್ಸಿನಲ್ಲಿ ನಿರತರಾಗಿದ್ದರು. ಅವರೆಲ್ಲ ರಾಮನ ಬರುವಿಕೆಗಾಗಿ ಕಾಯುತ್ತಿದ್ದರು. ಆದರೆ ರಾಮನು ಲಕ್ಷ್ಮಣನೊಡನೆ ಶಬರಿಯ ಬಡ ಗುಡಿಸಿಲಿಗೆ ಬಂದನು. ರಾಮನನ್ನು ನೋಡಿ ಆನಂದ ಭಾಷ್ಪ ಸುರಿಸುತ್ತಾ ರಾಮಾ ನಿನಗಾಗಿ ಕಾಯುತ್ತಿದ್ದೆ. ಮಾತಂಗ, ಪರ್ವತದಲ್ಲಿರುವ ಋಷಿಮುನಿಗಳ ದರ್ಶನ ಮಾಡಿ, ಎಲ್ಲಿಯೂ ನಿಲ್ಲದೆ, ನನ್ನಂಥ ಮುದುಕಿಯ ಗುಡಿಸಲಿಗೆ ಬಂದಿದೆಯಲ್ಲ ರಾಮಾ ನಿನ್ನ ದರ್ಶನ ಭಾಗ್ಯದಿಂದ ನನ್ನ ಜನ್ಮ ಪಾವನವಾಯಿತು. ಮಾತಂಗ ಮುನಿಗಳು ತಿಳಿಸಿದಂತೆ ನಿನಗಾಗಿ ಕಾಯುತ್ತಿದ್ದೆ. ನನಗೆ ನಿನ್ನ ದರ್ಶನವಾಯಿತು.
ರಾಮ- ಲಕ್ಷ್ಮಣರನ್ನು ಕೂರಿಸಿ, ತಾನು ಸಂಗ್ರಹಿಸಿ ತಂದಿದ್ದ ಹಣ್ಣುಗಳನ್ನು ಕೊಟ್ಟಳು. ರಾಮನು ಶಬರಿಯ ಭಕ್ತಿಗೆ ಮೂಕನಾಗಿದ್ದನು. ಆ ಹಣ್ಣುಗಳನ್ನು ಶಬರಿ ಕಚ್ಚಿ ಎಂಜಲು ಮಾಡಿದ್ದಾಳೆಂದು ಅವನಿಗೆ ಅನ್ನಿಸಲೇ ಇಲ್ಲ. ರುಚಿರುಚಿಯಾಗಿ ತಿಂದನು. ತಿಳಿದವರು ಹೇಳುತ್ತಾರೆ ಭಕ್ತರು ಭಕ್ತಿಯಿಂದ ಏನೇ ಕೊಟ್ಟರು ದೇವರು ಸ್ವೀಕರಿಸುತ್ತಾನೆ. ಅವನಿಗೆ ಭಕ್ತಿ ಮುಖ್ಯವೇ ಹೊರತು ವಸ್ತುಗಳಲ್ಲ. ಆದರೆ ಲಕ್ಷ್ಮಣ ಮಾತ್ರ ಇದು ಎಂಜಲು ಮಾಡಿದ ಹಣ್ಣುಗಳು ಎಂದು ಆಕ್ಷೇಪಿಸಿದನು. ರಾಮನು ಶಬರಿಯ ಭಕ್ತಿಗೆ ಸೋತು ಅವುಗಳನ್ನು ತಿಂದನು.
ರಾಮನು ಈ ಕಾಡಿನ ಮಾರ್ಗವಾಗಿ ಬಂದ ಕಾರಣವೇನೆಂದು ಶಬರಿ ವಿಚಾರಿಸಿದಳು. ತನ್ನ ಪತ್ನಿ ಸೀತೆಯನ್ನು ರಾವಣ ಕದ್ದೊಯ್ದ ಸಂಗತಿಯನ್ನು ತಿಳಿಸಿ, ಸೀತೆಯನ್ನು ಹುಡುಕುತ್ತಿರುವ ವಿಚಾರವನ್ನು ರಾಮ ತಿಳಿಸಿದನು. ಶಬರಿಯು ಅವನಿಗೆ, ರಾಮ ತುಂಗಭದ್ರಾ ದಡದಲ್ಲಿ ‘ಕಿಷ್ಕಿಂದೆ’ ಎಂಬ ಪಟ್ಟಣವಿದೆ. ಅಲ್ಲಿ ಒಳ್ಳೆಯ ಗುಣಗಳುಳ್ಳ ಶಕ್ತಿಶಾಲಿಯಾದ ಸುಗ್ರೀವನು ತನ್ನ ಸಹಾಯಕರೊಂದಿಗೆ ಅಲ್ಲಿ ನೆಲೆಸಿದ್ದಾನೆ. ಸೀತಾಮಾತೆಯನ್ನು ಹುಡುಕಲು ನಿನಗೆ ಅವನಿಂದ ಸಹಾಯ ಆಗುತ್ತದೆ. ನೀನು ಸೀತೆಯನ್ನು ಮರಳಿ ಪಡೆದು ಅಯೋಧ್ಯೆಯ ಚಕ್ರವರ್ತಿ ಆಗುತ್ತೀಯ. ಎಂದು ಹೇಳುತ್ತಾ ರಾಮನ ಪಾದದ ಮೇಲೆ ಕುಸಿದಳು. ಶ್ರೀರಾಮುಲು ಶಬರಿಗೆ ಮುಕ್ತಿ ಕೊಟ್ಟನು.
ಬರಹ: ಆಶಾ ನಾಗಭೂಷಣ. ಸಂಗ್ರಹ ವರದಿ: ನರಸಿಂಹಮೂರ್ತಿ ಬರಗೂರು. (ಕಾಲ್ಪನಿಕ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

