ದೊಡ್ಡಬಳ್ಳಾಪುರ, (ನ.30): ತಾಲೂಕಿನ ಸರ್ಕಾರಿ ಶಾಲೆಗಳ ಮುಕುಟ ಮಣಿಯಂತೆ, ತಾಲೂಕಿನ ಕೀರ್ತಿ ಸಾರಿರುವ ಬಾಶೆಟ್ಟಿಹಳ್ಳಿ ಸರ್ಕಾರಿ ಶಾಲೆಯ ವಿರುದ್ಧ ಷಡ್ಯಂತ್ರ ನಡೆಯುತ್ತಿರುವ ಆರೋಪಗಳು ಕೇಳಿಬಂದಿವೆ.
ಖಾಸಗಿ ಕಂಪನಿ ಸುಮಾರು 8ಕೋಟಿ ವೆಚ್ಚದಲ್ಲಿ ನಿರ್ಮಿಸಿಕೊಟ್ಟಿರುವ ಬಾಶೆಟ್ಟಿಹಳ್ಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ದಾಖಲಿಸಲು ಪೋಷಕರು ಸರದಿ ಸಾಲಿನಲ್ಲಿ ನಿಲ್ಲುವ ಮಟ್ಟಕ್ಕೆ ಶಾಲೆಯ ಕೀರ್ತಿ ಬೆಳಗಿದೆ.
ಇಲ್ಲಿನ ಅಚ್ಚುಕಟ್ಟಾದ ವ್ಯವಸ್ಥೆ, ಖಾಸಗಿ ಸಂಸ್ಥೆಯ ನೆರವು, ಎಸ್.ಡಿ.ಎಂ.ಸಿ ಬೆಂಬಲ, ಜಿಲ್ಲಾಡಳಿತ, ಶಾಸಕ ಟಿ.ವೆಂಕಟರಮಣಯ್ಯ, ಸ್ಥಳೀಯ ಮುಖಂಡರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರ ಕಾಳಜಿಯಿಂದಾಗಿ ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುತ್ತಿದ್ದ ಪೋಷಕರಲ್ಲಿ ಆಸಕ್ತಿ ಕೆರಳಿಸಿ, ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ಮಟ್ಟಕ್ಕೆ ಸರ್ಕಾರಿ ಶಾಲೆ ಮಕ್ಕಳಿಗೆ ಶಿಕ್ಷಣ ನೀಡುತ್ತಾ, ರಾಜ್ಯಮಟ್ಟದ ಅನೇಕ ಪ್ರಶಸ್ತಿಗಳಿಗೆ ಪಾತ್ರವಾಗಿದೆ.
ಪೋಷಕರ ಸಹಭಾಗಿತ್ವ: ಖಾಸಗಿ ಶಾಲೆಗೆ ಸ್ಪರ್ಧೆ ನೀಡುವಂತೆ ಬೆಳೆದಿರುವ ಶಾಲೆಯಲ್ಲಿ ಶಿಕ್ಷಣ ಇಲಾಖೆಯ ಅನುಮತಿಯ ಮೇರೆಗೆ ಎಸ್.ಡಿ.ಎಂ.ಸಿ ನಿರ್ಣಯ ಕೈಗೊಂಡಿದ್ದು, ಪೋಷಕರ ಆರ್ಥಿಕ ನೆರವಿನೊಂದಿಗೆ ಮಕ್ಕಳಿಗೆ ಹೆಚ್ಚುವರಿ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಿದೆ.
ಹುನ್ನಾರದ ಆರೋಪ: ಸರ್ಕಾರಿ ಶಾಲೆಯೊಂದು ಗುಣಮಟ್ಟದ ಸೌಲಭ್ಯ, ಶಿಕ್ಷಣದೊಂದಿಗೆ ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಿರುವ ಬೆನ್ನಲ್ಲೇ ಇದರ ವಿರುದ್ಧ ಶಡ್ಯಂತ್ರ ನಡೆಯುತ್ತಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದ್ದು, ಪೋಷಕರ ಸಹಭಾಗಿತ್ವ ವಿಚಾರವನ್ನು ವಿವಾದವನ್ನಾಗಿಸುವ ಹುನ್ನಾರ ಕಂಡುಬರುತ್ತಿದೆ.
ಪೋಷಕರ ಸಹಭಾಗಿತ್ವದ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ರಂಗಪ್ಪ ಕಾರಣ ಕೇಳಿ ಶಾಲೆಗೆ ಪತ್ರ ಬರೆದಿದ್ದು, ಇದನ್ನೆ ದೊಡ್ಡ ಹಗರಣವಾಗಿದೆ ಎಂದು ಹುಯ್ಯಿಲೆಬ್ಬಿಸುವ ಮೂಲಕ ಸರ್ಕಾರಿ ಶಾಲೆಯ ಪ್ರಗತಿಯನ್ನು ನಿಯಂತ್ರಿರಿಸುವ ಆತಂಕಕಾರಿ ಬೆಳವಣಿಗೆ ಕಂಡುಬರುತ್ತಿದೆ.
ಈ ಕುರಿತಂತೆ ಹರಿತಲೇಖನಿ ಸ್ಥಳೀಯ ಪೋಷಕರು, ಎಸ್.ಡಿ.ಎಂ.ಸಿ ಅಧ್ಯಕ್ಷರೊಂದಿಗೆ ಮಾಹಿತಿ ಪಡೆದಿದ್ದು, ಖಾಸಗಿ ಶಾಲೆಗಳಿಗೆ ಸೆಡ್ಡುಹೊಡೆದು ಮಕ್ಕಳು ದಾಖಲಾಗುತ್ತಿರುವುದರಿಂದ ವದಂತಿ ಹರಡಿಸಿ, ಶಾಲೆಯ ಆಡಳಿತ ಮಂಡಳಿ, ಶಿಕ್ಷಕರ ಮನೋಸ್ಥೈರ್ಯ ಕುಸಿಯುವಂತೆ ಮಾಡುವ ಹುನ್ನಾರ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.
ಈ ಕುರಿತಂತೆ ಸವಿಸ್ತಾರವಾದ ಮಾಹಿತಿ ನೀಡಿದ ಎಸ್.ಡಿ.ಎಂ.ಸಿ ಅಧ್ಯಕ್ಷ ಮುನಿಯಪ್ಪ, ಗೌರವ ಅಧ್ಯಕ್ಷ ಕೃಷ್ಣಪ್ಪ, ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಅವರು, ಶಾಲೆಯ ಬಗ್ಗೆ ಮಾಹಿತಿ ತಿಳಿದು ನಮ್ಮ ಶಾಲೆಗೆ ಭೇಟಿ ನೀಡಿದ್ದ ಆಗಿನ ಶಿಕ್ಷಣ ಸಚಿವ ಆರ್.ಸುರೇಶ್ ಕುಮಾರ್ ಅವರು ಒಂದು ಸಲಹೆ ನೀಡಿದ್ದರು. ಕೇವಲ ಉತ್ತಮ ಕಟ್ಟಡವಾದರೆ ಸಾಲದು, ಮಕ್ಕಳಿಗೆ ಉತ್ತಮ ಶಿಕ್ಷಣ, ಶಿಸ್ತು ಮೈಗೂಡಿಸಬೇಕು ಎಂದಿದ್ದರು.
ಈ ನಿಟ್ಟಿನಲ್ಲಿ ಹಲವು ಬಾರಿ ಪೋಷಕರ ಸಭೆ ನಡೆಸಿ ಚರ್ಚಿಸಿ, ಉತ್ತಮ ಸೌಲಭ್ಯ ಕಲ್ಪಿಸಲು ಹಾಗೂ ಮಕ್ಕಳಲ್ಲಿ ಶಿಸ್ತು ಬೆಳೆಸಲು, ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶೂ, ಟೈ, ಬೆಲ್ಟ್ ನೀಡುವುದು, ನುರಿತ ಸ್ಪೋಕನ್ ಇಂಗ್ಲಿಷ್ ಶಿಕ್ಷಕರ ನೇಮಕ ಮಾಡಿಕೊಳ್ಳುವುದು, ಖಾಸಗಿ ಶಾಲೆಯಲ್ಲಿದ್ದಂತೆ ಮೂಲಭೂತ ಸೌಕರ್ಯಗಳಾದ ಆಯಾಗಳ ನೇಮಕ, ಶೌಚಾಲಯಗಳ ಸ್ವಚ್ಚತೆ, ವಿದ್ಯುತ್ ಬಿಲ್ ಕಟ್ಟುವುದು ಸೇರಿದಂತೆ ಶಾಲೆಯಲ್ಲಿ ಮತ್ತಷ್ಟು ಸೌಲಭ್ಯ ಕಲ್ಪಿಸಲು ತೀರ್ಮಾನಿಸಿ, ಪೋಷಕರ ಸಹಭಾಗಿತ್ವದಲ್ಲಿ ಈ ಎಲ್ಲಾ ಕಾರ್ಯಗಳನ್ನು ಮಾಡಲಾಗುತ್ತಿದೆ. ಆದರೆ ಏಕಾಏಕಿ ಈ ವದಂತಿ ಹರಡಿ, ಅಧಿಕಾರಿಗಳಿಗೆ ಒತ್ತಡ ಹೇರುತ್ತಿರುವ ಮೂಲಕ ರಾಜ್ಯಮಟ್ಟದಲ್ಲಿ ಪ್ರಶಂಸೆ ಪಡೆದಿರುವ ಶಾಲೆಗೆ ಕಪ್ಪು ಚುಕ್ಕೆ ಮಾಡಲು ಮುಂದಾಗಿರುವುದು ವಿಪರ್ಯಾಸ.
ಸರ್ಕಾರಿ ಶಾಲೆಯ ಅಭಿವೃದ್ಧಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಪೋಷಕರು, ಎಸ್.ಡಿ.ಎಂ.ಸಿ ಹಾಗೂ ಶಿಕ್ಷಕರು ಯಾವುದೇ ರಾಜಿಯಿಲ್ಲ. ಸಹಭಾಗಿತ್ವದ ಲೆಕ್ಕವನ್ನು ಪಾರದರ್ಶಕವಾಗಿ ಇಡಲಾಗಿದ್ದು, ಯಾವ ಒತ್ತಡಕ್ಕು ಮಣಿಯುವುದಿಲ್ಲ. ಖಾಸಗಿ ಶಾಲೆಗಳಿಗೆ ಸಾವಿರಾರು ಡೋನೇಷನ್, ಪೀಸ್ ನೀಡಬೇಕಿದೆ. ಅದನ್ನು ತಪ್ಪಿಸಿ ನಮ್ಮ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ನಾವೆಲ್ಲ ಕೈಜೋಡಿಸಿದ್ದೇವೆ. ಇಂತಹ ಎಷ್ಟೇ ಅಪಪ್ರಚಾರ ನಡೆಸಿದರು ಎದೆಗುಂದುವುದಿಲ್ಲವೆಂದು. ನಮ್ಮ ಶಾಲೆಯ ಬಗ್ಗೆ ಪ್ರಶ್ನೆ ಮಾಡುವ ಮುನ್ನ ಖಾಸಗಿ ಶಾಲೆಗಳ ಸುಲಿಗೆಯ ಬಗ್ಗೆ ಮಾತನಾಡಲಿ ಎಂದಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

