ದೊಡ್ಡಬಳ್ಳಾಪುರ, (ಏ.26): ನಗರದ ಚಿಕ್ಕಪೇಟೆಯ ಹೊಸ ಕರಗದ ಗುಡಿ ಎದುರು, ಗಾಂಧಿ ವೃತ್ತದ ಬಳಿಯಿರುವ ಭಾರತ್ ಮೋಟಾರ್ಸ್ ಗ್ಯಾರೇಜ್‍ನಲ್ಲಿ ಬುಧವಾರ ಬೆಳಗಿನ ಜಾವ ಬೆಂಕಿ ಹತ್ತಿಕೊಂಡು ಲಕ್ಷಾಂತರ ರೂ ಮೌಲ್ಯದ ವಸ್ತುಗಳು ನಾಶವಾಗಿರುವ ಘಟನೆ ನಡೆದಿದೆ.
ಬೆಳಗಿನ ಜಾವ 4 ಗಂಟೆ ವೇಳೆಯಲ್ಲಿ ಬೆಂಕಿ ವ್ಯಾಪಿಸಿ ಗ್ಯಾರೇಜ್‍ನಲ್ಲಿದ್ದ ಸಿಲೆಂಡರ್ ಸ್ಪೋಟಗೊಂಡು ಅಪಾರ ಶಬ್ದ ಬಂದಿದೆ. ಇದರಿಂದ ಬೆಚ್ಚಿ ಬಿದ್ದ ಸ್ಥಳೀಯರು, ಬೆಂಕಿ ಹತ್ತಿಕೊಂಡಿರುವುದನ್ನು ನೋಡಿ ತಕ್ಷಣವೇ ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಪೋಟದ ತೀವ್ರತೆಗೆ ಕಾಂಪೌಂಡ್‍ನ ಚಪ್ಪಡಿ ಕಲ್ಲುಗಳು ಚೂರಾಗಿವೆ.
ಸ್ಥಳಕ್ಕೆ ತಕ್ಷಣವೇ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಸುಮಾರು 3 ಗಂಟೆಗಳ ಕಾಲ ಬೆಂಕಿಯನ್ನು ನಂದಿಸಿದ್ದಾರೆ. ಪಯಾಜ್ ಎನ್ನುವವರಿಗೆ ಸೇರಿದ ಭಾರತ್ ಮೋಟಾರ್ಸ್ ಗ್ಯಾರೇಜ್‍ನಲ್ಲಿದ್ದ ಕಾರುಗಳು, ಆಟೋ ಹಾಗೂ ದ್ವಿಚಕ್ರವಾಹನಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಹೋಗಿವೆ. ಇಷ್ಟೇ ಅಲ್ಲದೇ ಪಕ್ಕದ ನಯಾಜ್ ಎನ್ನುವವರಿಗೆ ಸೇರಿದ ಪೀಠೋಪಕರಣಗಳ ಅಂಗಡಿಯಲ್ಲಿದ್ದ ಪೀಠೋಪಕರಣಗಳು ಸುಟ್ಟು ಹೋಗಿವೆ. ಗ್ಯಾರೇಜ್‍ನ ಪಕ್ಕದ ಕಟ್ಟಡದ ಒಂದನೇ ಮಹಡಿಯಲ್ಲಿದ್ದ, ಆಟೋ ಮೊಬೈಲ್ಸ್ ಬಿಡಿ ಭಾಗಗಳ ಗೋದಾಮಿಗೆ ಸಹ ಬೆಂಕಿ ತಗುಲಿ, ಲಕ್ಷಾಂತರ ರೂ ಹಾನಿಯಾಗಿದೆ. ಗ್ಯಾರೇಜ್ ಪಕ್ಕದ ಮನೆಯ ಕಟ್ಟಡದ ಗೋಡೆಗಳು ಸಹ ಬೆಂಕಿ ಕಾವಿಗೆ ಕರಕಲಾಗಿವೆ.
ಬೆಂಕಿ ಹತ್ತಿಕೊಳ್ಳಲು ಕಾರಣ ತಿಳಿದು ಬಂದಿಲ್ಲವಾದರೂ ಶಾರ್ಟ್ ಸಕ್ರ್ಯೂಟ್ ಆಗರಿಬಹುದೆಂದು ಶಂಕಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗ್ಯಾರೇಜ್‍ನಲ್ಲಿದ್ದ ಆಯಿಲ್ ಟ್ಯಾಂಕರ್‌ಗಳಿಗೆ ಹಾಗೂ ಸಮೀಪದ ಮರಕ್ಕೆ ಬೆಂಕಿ ತಗುಲಿದ್ದರೆ ಹೆಚ್ಚಿನ ಅನಾಹುತವಾಗುತ್ತಿತ್ತು. ಸಮಯಕ್ಕೆ ಸರಿಯಾಗಿ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿದ್ದರಿಂದ ಬೆಂಕಿ ತಹಬದಿಗೆ ಬಂದಿತು.
ಸ್ಥಳಕ್ಕೆ ಪೊಲೀಸ್ ಹಾಗೂ ನಗರಸಭೆ ಸಿಬ್ಬಂದಿ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದರು.
ಶಾಸಕ ಟಿ.ವೆಂಕಟರಮಣಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಭೇಟಿ ನೀಡಿ ಪರಿಶೀಲಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….