ದೊಡ್ಡಬಳ್ಳಾಪುರ : ತಾಲೂಕಿನ ದೊಡ್ಡತುಮಕೂರು ಗ್ರಾಮದ ಜನವಸತಿ ಪ್ರದೇಶದಲ್ಲಿ ಎಂಎಸ್‌ಐಎಲ್ ರಿಟೇಲ್ ಮದ್ಯ ಮಾರಾಟ ಘಟಕ ತೆರೆಯಲು ಪ್ರಯತ್ನ ನಡೆದಿದ್ದು, ಇದಕ್ಕೆ ಪರವಾನಗಿ ನೀಡದಂತೆ ಒತ್ತಾಯಿಸಿ ಇಲ್ಲಿನ ಗ್ರಾಮಸ್ಥರು ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಗ್ರಾಮಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಿ,ತಾಲೂಕು ಪಂಚಾಯಿತಿ ಇಒ ಮುರುಡಯ್ಯ ಹಾಗೂ ಪಿಡಿಒ ಸೌಮ್ಯ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಗ್ರಾಪಂ ಮಾಜಿ ಉಪಾಧ್ಯಕ್ಷ ರವಿಕುಮಾರ್,ದೊಡ್ಡತುಮಕೂರು ವ್ಯಾಪ್ತಿಯಲ್ಲಿನ ಜನತೆ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.ರಿಟೇಲ್ ಮದ್ಯ ಮಾರಾಟ ಘಟಕ ತೆರೆಯಲು ಅನುಮತಿ ನೀಡಿದಲ್ಲಿ ಇಲ್ಲಿನ ಜನರ ನೆಮ್ಮದಿ ಹಾಳಾಗಲಿದೆ.ಯಾವುದೆ ಕಾರಣಕ್ಕು ಘಟಕ ಸ್ಥಾಪನೆ ಅವಕಾಶ ನೀಡಬಾರದೆಂದರು.
ನಿವೃತ್ತ ಶಿಕ್ಷಕ ಚಿಕ್ಕಣಪ್ಪ ಮಾತನಾಡಿ, ಈ ಭಾಗದ ಜನರು ಬಹುತೇಕ ಕೂಲಿ ಕಾರ್ಮಿಕರಿದ್ದು, ನಿತ್ಯ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈಗಾಗಲೇ ಹಲವೆಡೆ ಚಿಕ್ಕ ಮಕ್ಕಳಿಂದ ಹಿಡಿದು ಹಲವರು ಕುಡಿತದ ಚಟಕ್ಕೆ ಬಲಿಯಾಗಿದ್ದು,ಪ್ರತಿ ನಿತ್ಯ ಕುಟುಂಬಗಳು ಕಣ್ಣಿರಿನಲ್ಲಿ ಕೈತೊಳೆಯುವಂತಾಗಿದೆ. ಮದ್ಯದ ಅಂಗಡಿ ತೆರೆಯುವುದರಿಂದ ಗ್ರಾಮದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇರುವುದರಿಂದ ಅನುಮತಿ ನೀಡಬಾರದೆಂದು ಒತ್ತಾಯಿಸಿದರು.
ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ಜಿ.ಮಂಜುನಾಥ್ ಮಾತನಾಡಿ,ಮದ್ಯದಂಗಡಿ ತೆರೆಯಲು ಗೊತ್ತುಪಡಿಸಿದ ಸ್ಥಳ ಮುಖ್ಯ ರಸ್ತೆಯಲ್ಲಿದ್ದು, ಇಲ್ಲಿ ಮಹಿಳೆಯರು,ವಿದ್ಯಾರ್ಥಿಗಳು ಇದೇ ಸ್ಥಳದಲ್ಲಿ ಸಂಚರಿಸುವುದರಿಂದ ಭವಿಷ್ಯದಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಮದ್ಯದಂಗಡಿ ಸ್ಥಾಪಿಸಲು ಪರವಾನಗಿ ನೀಡಬಾರದು. ಒಂದೊಮ್ಮೆ ಅವಕಾಶ ನೀಡಿದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಸ್ತ್ರೀ ಶಕ್ತಿ ಸಂಘದ ನರಸಮ್ಮ,ಕಮಲ,ಭಾಗ್ಯಮ್ಮ,ಅಂಬುಜಮ್ಮ,ಆಶಾ,ವೆಂಕಟೇಶಮ್ಮ,ಮರಿಯಮ್ಮ,ಗ್ರಾಮಪಂಚಾಯಿತಿ ಅಧ್ಯಕ್ಷ ನರಸಿಂಹಮೂರ್ತಿ,ವಿಎಸ್ ಎಸ್ ಎನ್ ಅಧ್ಯಕ್ಷ ಪ್ರಭಾಕರ್,ನಿರ್ದೇಶಕ ಶಿವಕುಮಾರ್,ಮುಖಂಡರಾದ ಚನ್ನಗೌಡ,ಆಂಜಿನಪ್ಪ,ಟಿ.ಎಲ್ ರಘು,ಲೋಕೇಶ್, ಟಿ.ಕೆ.ಶಿವಕುಮಾರ್ ,ವಸಂತ್ ಕುಮಾರ್, ಅಜಯ್ ಕುಮಾರ್,ನಾರಾಯಣಸ್ವಾಮಿ ಮತ್ತಿತರಿದ್ದರು.