ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರತಿದಿನ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ,ಸೋಂಕಿತರ ಸಂಖ್ಯೆಯನ್ನು ಅವಲೋಕಿಸಿ, ಆಸ್ಪತ್ರೆಗಳಲ್ಲಿ ಹಾಸಿಗೆ ವ್ಯವಸ್ಥೆ, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸೇರಿದಂತೆ ಸಕಲ ಸಿದ್ಧತೆ ಕೈಗೊಳ್ಳುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಹೇಮಲತ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿಂದು ನಡೆದ “ಕರೊನಾ ವೈರಾಣು(ಕೋವಿಡ್-19 )ಸೋಂಕು ತಡೆಯಲು ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ತೆಗೆದುಕೊಂಡ ಕ್ರಮಗಳ ಕುರಿತ ಪರಿಶೀಲನಾ ಸಭೆಯ” ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೊಬೈಲ್ ಸ್ವ್ಯಾಬ್ ಸಂಗ್ರಹ ಸೇರಿದಂತೆ ಫೀವರ್ ಕ್ಲಿನಿಕ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಅವರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮೊಬೈಲ್ ಸ್ವ್ಯಾಬ್ ಸಂಗ್ರಹಗಳನ್ನು ಹೆಚ್ಚಿಸುವಂತೆ ಹಾಗೂ ಜಿಲ್ಲೆಯಲ್ಲಿ ಯಾವುದೇ ಲೋಪದೋಷವಿಲ್ಲದೆ ಖಾಸಗಿ ಹಾಗೂ ಸಾರ್ವಜನಿಕ ಆಸ್ಪತ್ರೆಗಳು ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು.
ತಾಲ್ಲೂಕುಗಳಲ್ಲಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ರೋಗಿಗಳು ಸೇರಿದಂತೆ ಇತರೆ ಕಾಯಿಲೆಯುಳ್ಳ ರೋಗಿಗಳಿಗೆ ಚಿಕಿತ್ಸೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ಕಾರ್ಯನಿರ್ವಹಿಸಬೇಕು. ಔಷಧಿ ವಿತರಣೆಯಲ್ಲಿ ಕೊರತೆ ಉಂಟಾಗದಂತೆ ಎಚ್ಚರವಹಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸರಾಸರಿಯಾಗಿ 120 ಪ್ರಕರಣಗಳು ಕಂಡು ಬರುತ್ತಿದ್ದು ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುವ ಸೂಚನೆಯಿರುವುದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಪಡೆಯಲು ಕಾರ್ಯಪ್ರವೃತ್ತರಾಗುವಂತೆ ಸೂಚಿಸಿದರು.
ಅಗತ್ಯ ಸಮಯದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಿ ಕರೊನಾ ಸೋಂಕಿತರ ಮರಣ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದರಲ್ಲದೆ ಗೃಹ ದಿಗ್ಭಂದನದಲ್ಲಿರುವ (ಹೋಂಕ್ವಾರಟೈನ್) ಸೋಂಕಿತರನ್ನು ಕ್ವಾರಂಟೈನ್ ವಾರ್ಡ್ ವಾಚ್ ಅ್ಯಪ್‌ನಲ್ಲಿ ನಿಗವಹಿಸುವಂತೆ ಹೇಳಿದರು.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗಿದ್ದು ಶೇ. 64% ಕೃಷಿ ಭೂಮಿಯಲ್ಲಿ ಬಿತ್ತನೆಯಾಗಿದೆ ಎಂದು ಕೃಷಿ ಇಲಾಖೆ ಉಪ ನಿರ್ದೇಶಕರು ಸಭೆಯಲ್ಲಿ ತಿಳಿಸಿದಾಗ, ಜಿಲ್ಲೆಯಲ್ಲಿ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಕೊರತೆ ಉಂಟಾಗದಂತೆ ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಣೆ ಮಾಡಿ, ರೈತರಿಗೆ ಸರಿಯಾದ ಸಮಯದಲ್ಲಿ ವಿತರಿಸಬೇಕೆಂದು ನಿರ್ದೇಶಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಎಂ.ನಾಗರಾಜ, ಅಪರ ಜಿಲ್ಲಾಧಿಕಾರಿ ಜಗದೀಶ್.ಕೆ.ನಾಯಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾದೇವಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಧರ್ಮೇಂದ್ರ ಸೇರಿದಂತೆ ತಹಶೀಲ್ದಾರ್‌ಗಳು, ಸಂಬಂಧಿಸಿದ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.