ದೊಡ್ಡಬಳ್ಳಾಪುರ: ಹೂವು ಹಣ್ಣು ಅಗತ್ಯ ವಸ್ತುಗಳ ಬೆಲೆಏರಿಕೆ ನಡುವೆಯೂ ತಾಲೂಕಿನಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಜನತೆ ಶ್ರದ್ಧಾ ಭಕ್ತಿಗಳಿಂದ ಆಚರಿಸಿದರು.
ಈ ಬಾರಿ ಕೊವಿಡ್-19 ಹಿನ್ನಲೆಯಲ್ಲಿ ಕೆಲವು ಪ್ರದೇಶಗಳನ್ನು ಕಂಟೈನ್‌ಮೆಂಟ್ ಪ್ರದೇಶ ಎಂದು ಘೋಷಿಸಿದ್ದರಿಂದ ಹಬ್ಬದ ಸಂಭ್ರಮ ಕೊಂಚ ಕಡಿಮೆಯಾಗಿತ್ತು. ಆದರೆ ಮನೆಗಳಲ್ಲಿ ಎಂದಿನಂತೆ ಸಂಪ್ರದಾಯಗಳನ್ನು ಪಾಲಿಸುವ ಮೂಲಕ ವರಮಹಾಲಕ್ಷ್ಮೀ ವ್ರತವನ್ನು ಆಚರಿಸಲಾಯಿತು.
ಮಹಾಲಕ್ಷ್ಮಿಯ ಕಳಶ ಸ್ಥಾಪಿಸಿ ತಿರು ತೋರಣ ಹೂಗಳಿಂದ ಸಿಂಗರಿಸಿದ ಲಕ್ಷ್ಮೀ ಪ್ರತಿಮೆಗಳಿಗೆ ಅಲಂಕಾರ ಮಾಡುವ ಮೂಲಕ ಮಾನಿನಿಯರು ಪೂಜೆ ನೆರವೇರಿಸಿದರು. ಕಳಸಕ್ಕೆ ಲಕ್ಷ್ಮೀ ಮುಖವಾಡ ಹಾಕಿ ಅಲಂಕಾರಿಕ ಆಭರಣಗಳನ್ನು ಧರಿಸಿ, ಬಾಳೆಕಂದು, ವಿದ್ಯುತ್ ದೀಪಾಲಂಕಾರಗಳಿಂದ ಶೃಂಗರಿಸಲಾಗಿತ್ತು. ಸುಮಂಗಲಿಯರಿಗೆ ಹರಿಶಿನ ಕುಂಕುಮ ನೀಡುವ ಆಚರಣೆ ಎಲ್ಲೆಡೆ ಕಂಡು ಬಂದಿತು.
ವರಮಹಾಲಕ್ಷ್ಮೀ ಹಬ್ಬದ ಅಂಗವಾಗಿ ನಗರದ ಕನಕದಾಸನಗರದಲ್ಲಿನ ಶ್ರೀ ಲಕ್ಷ್ಮೀ ದೇವಾಲಯ, ರಾಮಲಿಂಗ ಚೌಡೇಶ್ವರಿ, ಅಭಯ ಚೌಡೇಶ್ವರಿ, ಗಂಗಮ್ಮ ಮೊದಲಾದ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.
ಲಕ್ಷ್ಮೀದೇವಿ ದೇವಾಲಯದಲ್ಲಿ ವಿಶೇಷತೆ :
ನಗರದ ಕನಕದಾಸನಗರದಲ್ಲಿನ 200 ವರ್ಷಗಳ ಇತಿಹಾಸ ಪ್ರಸಿದ್ಧ ಶ್ರೀಮಹಾಲಕ್ಷ್ಮಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಭಕ್ತಾದಿಗಳು ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ದೇವಾಲಯದಲ್ಲಿ ಸ್ವಾನಿಟೈಸರ್ ಹಾಕಿ ಭಕ್ತರಿಗೆ ಅಂತರ ಕಾಪಾಡಿಕೊಂಡು ದರ್ಶನ ಪಡೆಯುವ ವ್ಯವಸ್ಥೆ ಮಾಡಲಾಗಿತ್ತು. ಕೊವಿಡ್-19 ಹಿನ್ನಲೆಯಲ್ಲಿ ಈ ಬಾರಿ ಊರಿನಲ್ಲಿ ಉತ್ಸವ ನಡೆಸದೇ ಪ್ರಕಾರೋತ್ಸವ ನಡೆಸಲಾಯಿತು.