ದೊಡ್ಡಬಳ್ಳಾಪುರ: ಕಚ್ಚಾ ಬಾಂಬ್ ಅನ್ನು ಆಹಾರವೆಂದು ಕಚ್ಚಿ ತಿಂದ ನಾಯಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ನಗರದ ಪ್ರಿಯದರ್ಶಿನಿ ಬಡಾವಣೆಯಲ್ಲಿ ನಡೆದಿದೆ.
ಎಪಿಎಂಸಿ ಮಾರುಕಟ್ಟೆ ಬಳಿ ಕಸದ ರಾಶಿಯಲ್ಲಿದ್ದ ಪ್ಲಾಸ್ಟಿಕ್ ಕವರಿನ ಉಂಡೆಯನ್ನು ಆಹಾರ ಎಂದು ತಿಳಿದ ನಾಯಿ ಅದನ್ನು ಕಚ್ಚಿಕೊಂಡು ಪ್ರಿಯದರ್ಶಿನಿ ಬಡಾವಣೆಗೆ ಬಂದಿದೆ. ಅದನ್ನು ತಿನ್ನುವ ಸಮಯದಲ್ಲಿ ಸ್ಫೋಟಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದೆ.
ಈ ಕುರಿತು ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಮಾಹಿತಿ ಪ್ರಕಾರ ಕಾಡು ಹಂದಿಗಳನ್ನು ಬೇಟೆಯಾಡಲು ಈ ಸ್ಫೋಟಕವನ್ನು ಬಳಸುತ್ತಾರೆ.
ರೈತನೊಬ್ಬ ಈ ಸ್ಫೋಟಕವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡದೆ ಬೇಕಾಬಿಟ್ಟಿ ಬೀಸಾಕಿದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.