ಬೆಂಗಳೂರು: ಕೃಷಿಕರು ಮತ್ತು ಕೃಷಿ ಇಲಾಖೆ ನಡುವೆ ಇನ್ನಷ್ಟು ಉತ್ತಮ ಬಾಂಧವ್ಯ ವೃದ್ಧಿಸಲು ರೈತರ ಅನುಕೂಲಕ್ಕಾಗಿ ರಾಜ್ಯ ಇ ಆಡಳಿತ ಮತ್ತು ಕೃಷಿ ಇಲಾಖೆ ಸಹಯೋಗದಲ್ಲಿ ಕೃಷಿ ಸಚಿವರಾದ ಬಿ.ಸಿ.ಪಾಟೀಲರ ಮಹತ್ವಾಕಾಂಕ್ಷಿಯ “ರೈತ ಬೆಳೆ ಸಮೀಕ್ಷೆ ಆಪ್ ” ಅನ್ನು ಕೃಷಿ ಸಚಿವರಾದ ಬಿ.ಸಿ.ಪಾಟೀಲರು ಆನ್ಲೈನ್ ಮೂಲಕ ಲೋಕಾರ್ಪಣೆಗೊಳಿಸಿದರು.
ಈ ಆಪ್ ಮೂಲಕ ಅಂತರ್ಜಾಲದ ಸಹಾಯದಿಂದ ಕೃಷಿಕರು ಲಾಭ ಪಡೆಯಲು ತಮ್ಮಅಂಗೈನಲ್ಲಿಯೇ ಇನ್ನುಮುಂದೆ ಬೆಳೆ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿ ಹಾಗೂ ಸಮೀಕ್ಷೆ ನಡೆಸುವವರ ವಿವರ ಲಭ್ಯವಾಗಲಿದೆ.
ಹೌದು, ರೈತರ ಅನುಕೂಲಕ್ಕಾಗಿ ಇಲಾಖೆ ಹಾಗೂ ಕೃಷಿ ಸಚಿವರು ಹೊಸಹೊಸ ಯೋಜನೆ ರೈತರಿಗೆ ಲಾಭದಾಯಕವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಲು ಕಾರ್ಯತತ್ಪರರಾಗಿದ್ದು, ಅದರ ಫಲವಾಗಿ ಈ ಆಪ್ ಸಿದ್ಧವಾಗಿದೆ.
ಈ ಮೊಬೈಲ್ ಅಪ್ಲೀಕೇಷನ್ ಅನ್ನು ರೈತರು ಆಂಡ್ರೈಡ್ ಮೊಬೈಲ್ ಸಹಾಯದಿಂದ ಪ್ಲೇ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಸುಮಾರು 60 ಎಂಬಿ ಸಾಮರ್ಥ್ಯವುಳ್ಳ ಈ ಆಪ್ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ನೋಡುವುದಾದರೆ,
ರೈತರು ತಮ್ಮ ಅಂಡ್ರೈಡ್ ಮೊಬೈಲ್ನಲ್ಲಿ ಪ್ಲೇಸ್ಟೋರ್ ಮೂಲಕ ಬೆಳೆ ಸಮೀಕ್ಷೆ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಮೊಬೈಲ್ ನಂಬರ್ ಅನ್ನು ಓಟಿಪಿ ಮೂಲಕ ರಿಜಿಸ್ಟರ್ ಮಾಡಿಕೊಳ್ಳಬೇಕು. ನೋಂದಣಿಯಾದ ನಂತರ ತಮ್ಮ ಜಮೀನಿನ ಜಿಲ್ಲೆ, ತಾಲೂಕು, ಗ್ರಾಮ, ಸರ್ವೆ ನಂಬರ್ ಸೇರಿದಂತೆ ಜಮೀನಿನ ವಿವರಗಳುನ್ನು ನಮೂದಿಸಿ ಜಮೀನಿನ ಮಾಹಿತಿ ಹಾಗೂ ತಮ್ಮ ಗ್ರಾಮದ GIS ನಕ್ಷೆಯನ್ನು ಡೌನ್ಲೋಡ್ ಮಾಡಿ ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ಹಾಗೂ ಇತರೆ ವಿವರಗಳನ್ನು ಮತ್ತು ಛಾಯಾಚಿತ್ರಗಳನ್ನು ಮೊಬೈಲ್ ಆಪ್ ನಲ್ಲಿಸಂಗ್ರಹಿಸಿ ಅಪ್ಲೋಡ್ ಮಾಡಬೇಕು. ಆಗ ರೈತರ ಸರ್ವೆ ನಂಬರ್ ವಾರು ಜಮೀನಿನ ಬೆಳೆಯ ವಿವರಗಳನ್ನು “ಕರ್ನಾಟಕ ಸ್ಟೇಟ್ ಡಾಟಾ ಸೆಂಟರ್” ನಲ್ಲಿ ಸಂಗ್ರಹಣೆ ಮಾಡಿ ವಿವಿಧ ಯೋಜನೆಗಳಿಗೆ ಬಳಸಲಾಗುತ್ತದೆ.
ರೈತರ ಅನುಕೂಲಕ್ಕಾಗಿ ಹಾಗೂ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಈ ಆಪ್ ಅನ್ನು ಪರಿಚಯಿಸಲಾಗುತ್ತಿದ್ದು, ರೈತರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಕೃಷಿ ಸಚಿವರಾದ ಬಿ.ಸಿ.ಪಾಟೀಲ್ ರೈತರಲ್ಲಿ ಮನವಿ ಮಾಡಿದ್ದಾರೆ.