ಕಲಬುರಗಿ: ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಿಂದ ಮಹಾರಾಷ್ಟ್ರದ ವೀರ್ ಡ್ಯಾಮ್ ನಿಂದ ಬಿಡಲಾದ 40000 ಕ್ಯುಸೆಕ್ ನೀರು ಭಾನುವಾರ ಸೊನ್ನ ಬ್ಯಾರೇಜಿಗೆ ತಲುಪಿದ್ದು, ಅಷ್ಟು ಪ್ರಮಾಣದ ನೀರುಗಳನ್ನು ಹಂತ-ಹಂತವಾಗಿ ಭೀಮಾ ನದಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಭೀಮಾ ಏತ ನೀರಾವರಿ ಯೋಜನೆಯ ಅಶೋಕ ಕಲಾಲ್ ತಿಳಿಸಿದ್ದಾರೆ.
ಬ್ಯಾರೇಜಿನ 10 ಗೇಟುಗಳ ಮೂಲಕ ನೀರು ಹರಿಬಿಡಲಾಗುತ್ತಿದೆ. ಮಹಾರಾಷ್ಟ್ರದ ಭೀಮಾ ತೀರದ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಇನ್ನು ಹೆಚ್ಚಿನ ನೀರು ಬ್ಯಾರೇಜಿಗೆ ಹರಿದು ಬರುವ ಸಾಧ್ಯತೆಯಿದೆ. ಮುಂಜಾಗ್ರತವಾಗಿ ಬ್ಯಾರೇಜಿಗೆ ಬರುವ ಒಳಹರಿವನಿಷ್ಟೆ ಪ್ರಮಾಣದ ನೀರು ಭೀಮಾ ನದಿಗೆ ಹರಿಬಿಡಲಾಗುವುದು ಎಂದರು.
ಹೀಗಾಗಿ ಬ್ಯಾರೇಜಿನ ಕೆಳ ಪಾತ್ರದಲ್ಲಿ ಬರುವ ಅಫಜಲಪೂರ, ಚಿತ್ತಾಪುರ, ಜೇವರ್ಗಿ ಹಾಗೂ ಸಿಂದಗಿ ತಾಲೂಕಿನ ನದಿ ಪಾತ್ರದ ಜನರು ತಮ್ಮ ಜಾನುವಾರಗಳೊಂದಿಗೆ ಸುರಕ್ಷತಾ ಕ್ರಮದೊಂದಿಗೆ ಎಚ್ಚರಿಕೆಯಿಂದಿರುವಂತೆ ಕಾರ್ಯಪಾಲಕ ಅಭಿಯಂತ ಅಶೋಕ ಕಲಾಲ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಇದಲ್ಲದೆ ಬ್ಯಾರೇಜಿನ ಕೆಳ ಹಂತದಲ್ಲಿ ಬರುವ ಬ್ಯಾರೇಜುಗಳ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆಯೂ ಅವರು ತಿಳಿಸಿದ್ದಾರೆ.