ದೊಡ್ಡಬಳ್ಳಾಪುರ: ಹೋಟಲ್, ಶುಭಸಮಾರಂಭಗಳು ಇಲ್ಲದೆ ಇರುವುದರಿಂದ ಲಾಕ್‌ಡೌನ್ ನಂತರ ಹಾಲಿನ ಮಾರಾಟ ಗಣನೀಯವಾಗಿ ಕಡಿಮೆಯಾಗಿದೆ. ಹೀಗಾಗಿ ರೈತರಿಂದ ಖರೀದಿಸುವ ಹಾಲಿನ ಬೆಲೆ ಅನಿವಾರ್ಯವಾಗಿ ಇಳಿಸಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಮತ್ತೆ ಹಾಲಿನ ಬೆಲೆ ಏರಿಕೆಯಾಗಲಿದೆ ಎಂದು ಕೆಎಂಎಫ್ ನಿರ್ದೆಶಕ ಬಿ.ಸಿ.ಆನಂದಕುಮಾರ್ ಹೇಳಿದರು.
ಅವರು ತಾಲ್ಲೂಕಿನ ಲಕ್ಷ್ಮೀದೇವಿಪುರ ಹಾಲು ಉತ್ದಾಕರ ಸಹಕಾರ ಸಂಘದ ವತಿಯಿಂದ ನಡೆದ ಬರಡು ರಾಸುಗಳ ಆರೋಗ್ಯ ತಪಾಸಣ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಲಾಭ ಕಡಿಮೆಯಾಗಿದ್ದರು ಸಹ ರೈತರಿಗೆ ಇಂದಿಗೂ ನಿಗದಿತವಾಗಿ ಹಣ ಬರುತ್ತಿರುವುದು ಹೈನುಗಾರಿಕೆಯಲ್ಲಿ ಮಾತ್ರ. ಹೀಗಾಗಿ ರೈತರು ಕೃಷಿಯೊಂದಿಗೆ ಹೈನುಗಾರಿಕೆಯನ್ನು ಹೊಂದಿರಲೇ ಬೇಕು. ಇದರಿಂದ ಕೃಷಿ ಭೂಮಿಯ ಫಲವತ್ತತೆಗೆ ಅಗತ್ಯ ಇರುವ ಗೊಬ್ಬರ ದೊರೆಯಲಿದ್ದು ಸರಗೊಬ್ಬರದ ಮೇಲಿನ ಅವಲಂಭನೆಯು ಕಡಿಮೆಯಾಗಲಿದೆ ಎಂದರು.
ರೈತರು ರಾಸುಗಳನ್ನು ವೈಜ್ಞಾನಿಕವಾಗಿ ಸಾಕಾಣಿಕೆ ಮಾಡುವ ಕಡೆಗೆ ತಿಳುವಳಿಕೆ ಪಡೆಯಬೇಕು. ರಾಸುಗಳಿಗೆ ಸಕಾಲಕ್ಕೆ ಸಾಮೂಹಿಕವಾಗಿ ಲಸಿಕೆಗಳನ್ನು ಹಾಕಿಸುವುದರಿಂದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವುದು ತಪ್ಪಲಿದೆ. ಅಕಾಲಿಕವಾಗಿ ರಾಸುಗಳು ಮೃತಪಟ್ಟರೆ ರೈತರು ನಷ್ಟಕ್ಕೆ ಒಳಗಾಗದಂತೆ ಬಮೂಲ್‌ನಿಂದ ರಾಸುಗಳಿಗೆ ವಿಮೆ ಜಾರಿಗೆ ತರಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಹಾಲು ಶೀಥಲ ಕೇಂದ್ರದ ವ್ಯವಸ್ಥಾಪಕ ಡಾ.ಗೋಪಾಲಕೃಷ್ಣ, ಉಪವ್ಯವಸ್ಥಾಪಕ ಎಲ್.ಬಿ.ನಾಗರಾಜ್, ಲಕ್ಷ್ಮೀದೇವಿಪುರ ಎಂಪಿಸಿಎಸ್ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಶಿವರಾಜ್, ಯುವ ಮುಖಂಡ ಅಂಬರೀಶ್ ಇದ್ದರು.