ದೊಡ್ಡಬಳ್ಳಾಪುರ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಮೊಹರಂ ಆಚರಣೆಯನ್ನು ತಾಲೂಕಿನ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದವರು ಶ್ರದ್ಧಾಭಕ್ತಿಗಳಿಂದ ಆಚರಿಸಿದರು.
ಈ ಬಾರಿ ಕೊವಿಡ್-19 ಹಿನ್ನಲೆಯಲ್ಲಿ ಮೆರವಣಿಗೆ ಹಾಗೂ ಜನಸಂದಣಿಗೆ ನಿಷೇಧ ಹೇರಿದ್ದ ಹಿನ್ನಲೆಯಲ್ಲಿ ಸಾಂಕೇತಿಕವಾಗಿ ಹಬ್ಬದ ಆಚರಣೆ ಮಾಡಲಾಯಿತು.
ನಗರದ ನಗರ್ತಪೇಟೆಯಲ್ಲಿನ ಬಾಬಯ್ಯ ದೇವಾಲಯದಲ್ಲಿ ವಿಶೇಷ ಅಲಂಕಾರ ಹಾಗೂ ಪ್ರಾರ್ಥನೆಗಳು ನಡೆದವು.ಹಿಂದು ಮತ್ತು ಮುಸಲ್ಮಾನ ಬಾಂಧವರು ಸಕ್ಕರೆ ಕಡಲೇಪಪ್ಪು ನೇವೇದ್ಯ ಅರ್ಪಿಸಿ ಬಾಬಯ್ಯನಿಗೆ ಪ್ರಾರ್ಥನೆ ಸಲ್ಲಿಸಿದರು.
ನಗರದ ಕೋಟೆ ರಸ್ತೆಯಲ್ಲಿರುವ ಕಿಲ್ಲಾ ಮಸೀದಿಯಲ್ಲಿ ಮೊಹರಂ ಅಂಗವಾಗಿ ನಡೆದ ಹಸೇನ್ ಹುಸೇನ್ ಧಾರ್ಮಿಕ ವಿಧಿ ವಿಧಾನಗಳನ್ನು ಧರ್ಮಗುರುಗಳ ನೇತೃತ್ವದಲ್ಲಿ ಸಾಂಕೇತಿಕವಾಗಿ ನೆರವೇರಿಸಲಾಯಿತು.
ನಗರದ ಇಸ್ಲಾಂಪುರದ ಈದ್ಗಾ ಮೊಹಲ್ಲಾದ ಆಂಶುಖಾನಾದಲ್ಲಿ ಒಂಬತ್ತು ದಿನಗಳ ಕಾಲ ನಡೆದ ವಿಶೇಷ ಮೊಹರಂ ಬಾಬಯ್ಯನ ಪೂಜೆಯ ಸಮಾರೋಪ ನಡೆಯಿತು.
ಗ್ರಾಮಾಂತರ ಪ್ರದೇಶದ ದೊಡ್ಡಬೆಳವಂಗಲ, ಕಾಡನೂರು,ಪುಟ್ಟಯ್ಯನ ಅಗ್ರಹಾರ ಮುಂತಾದ ಗ್ರಾಮಗಳಲ್ಲಿ ಮೊಹರಂ ಆಚರಣೆ ನಡೆಯಿತು.
ಹಿಂದೂ ಮುಸ್ಲಿಮರ ಭಾವೈಕ್ಯತೆ ಬಿಂಬಿಸುವ ಮೊಹರಂ ಆಚರಣೆಯಲ್ಲಿ ಹಿಂದೂ ಸಮುದಾಯದವರು ಸಹ ಭಾಗವಹಿಸಿ 10 ದಿನಗಳ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ಗ್ರಾಮೀಣ ಭಾಗದ ಜನರು ಮೊಹರಂ ಆಚರಣೆಯನ್ನು ಬಾಬಯ್ಯನ ಹಬ್ಬವೆಂದು ಕರೆಯುತ್ತಾರೆ.ಗ್ರಾಮೀಣರು ಮೊಹರಂ ಆಚರಣೆಯನ್ನು ತಮ್ಮ ಆರಾಧ್ಯ ದೈವಕ್ಕೆ ಮಾಡುವ ಆಚರಣೆಯಂತೆ ಪರಿಗಣಿಸಿದ್ದಾರೆ. ಬಾಬಯ್ಯನಿಗೆ ಹರಕೆ ಮಾಡಿಕೊಳ್ಳುವ, ಅದನ್ನು ಶ್ರದ್ದಾಭಕ್ತಿಯಿಂದ ಪೂರ್ಣಗೊಳಿಸುವ ಕಡೆಗೆ ಗ್ರಾಮೀಣರು ಹೆಚ್ಚು ಆಸಕ್ತಿ ವಹಿಸುತ್ತಾರೆ.