ಕಲಬುರಗಿ : ರಸ್ತೆ, ರೈಲು, ವಾಯು ಸಂಪರ್ಕ ಸೇರಿದಂತೆ ಉತ್ತಮ ಮೂಲಸೌಕರ್ಯ ಹೊಂದಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಹೂಡಿಕೆಗೆ ಕೈಗಾರಿಕೋದ್ಯಮಿಗಳನ್ನು ಆಕರ್ಷಿಸಲು ಮುಂದಿನ ದಿನದಲ್ಲಿ ಕಲಬುರಗಿಯಲ್ಲಿ ಹೂಡಿಕೆದಾರರ ಸಮಾವೇಶ ಆಯೋಜನೆ ಮತ್ತು ರೋಡ್-ಶೋ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಘೋಷಿಸಿದರು.
ಸೋಮವಾರ ಇಲ್ಲಿನ ಹೆಚ್.ಕೆ.ಸಿ.ಸಿ.ಐ. ಸಭಾಂಗಣದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಕೈಗಾರಿಕೆ ಪ್ರದೇಶ ಅಭಿವೃದ್ಧಿ ಮಂಡಳಿ ಹಾಗೂ ಹೆಚ್.ಕೆ.ಸಿ.ಸಿ.ಐ ಇವರ ಸಂಯುಕ್ತಾಶ್ರಯದಲ್ಲಿ “ವಾಣಿಜ್ಯೋದ್ಯಮಿಗಳೊಂದಿಗೆ ಸಚಿವರ ಸಂವಾದ”ದಲ್ಲಿ ಉದ್ಯಮಿ ಸಂತೋಷ ಲಂಗರ ಅವರ ಮನವಿಗೆ ಸಚಿವರು ಪ್ರತಿಕ್ರಿಯೆಸಿ ಮಾತನಾಡಿದರು.
ಸ್ಥಳೀಯ ಉದ್ಯಮಿಗಳ ಜೊತೆ ಇತರೆ ಭಾಗದ ಉದ್ಯಮಿಗಳನ್ನು ಸರ್ಕಾರ ಒದಗಿಸುತ್ತಿರುವ ಮೂಲಸೌಕರ್ಯ ಸೇವೆಗಳ ಬಗ್ಗೆ ಮನವೊಲಿಸಲು ಇಂತಹ ಸಮಾವೇಶ ಮತ್ತು ರೋಡ್ ಶೋ ಸಹಕಾರಿಯಾಗಲಿದೆ. ಹುಬ್ಬಳ್ಳಿ ಸಮಾವೇಶದ ಫಲವಾಗಿಯೇ ಯಾದಗಿರಿ ಕಡೇಚೂರನಲ್ಲಿ ಸುಮಾರು 15 ಫಾರ್ಮ ಉದ್ಯಮಗಳ ಸ್ಥಾಪನೆಗೆ ಮಂಜೂರಾತಿ ನೀಡಲಾಗಿದೆ ಎಂದರು.
ರಾಜ್ಯದ ಇತರೆ ಎಸ್ಕಾಂ ಸಂಸ್ಥೆಗಳು ವಿದ್ಯುತ್ ಕಂಬಗಳನ್ನು ಸ್ಥಳೀಯ ಉದ್ಯಮಿಗಳಿಂದ ಮಾತ್ರ ಖರೀದಿಸುತ್ತಿದೆ. ಆದರೆ ಇಲ್ಲಿನ ಜೆಸ್ಕಾಂ ಸಂಸ್ಥೆ ರಾಜ್ಯದ ಎಲ್ಲಾ ವಿದ್ಯುತ್ ಉತ್ಪಾದನಾ ಗುತ್ತೆಗಾದಾರರಿಂದ ವಿದ್ಯುತ್ ಕಂಬ ಖರೀದಿಸುತ್ತಿದೆ. ಇದರಿಂದ ಸ್ಥಳೀಯ ಉದ್ಯಮಿದಾರರಾದ ನಮಗೆ ಅನ್ಯಾಯವಾಗುತ್ತಿದ್ದು, ಈ ಬಗ್ಗೆ ಗಮನಹರಿಸಬೇಕು ಎಂದರು. ಸಚಿವ ಜಗದೀಶ ಶೆಟ್ಟರ್ ಮಾತನಾಡಿ ಈ ಸಂಬಂಧ ಇಂಧನ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಉದ್ಯಮಿ ಸುರೇಶ ಜಿ. ನಂದ್ಯಾಳ ಮಾತನಾಡಿ ಹೊಸದಾಗಿ ಘೋಸಿರುವ ಕೈಗಾರಿಕಾ ನೀತಿ ದೇಶದಲ್ಲಿಯೇ ಉತ್ತಮ ನೀತಿಯಾಗಿದೆ. ಆದರೆ ಇದನ್ನು ಮುಂದಿನ 5 ವರ್ಷದ ವರೆಗೆ ಚಾಲ್ತಿಯಲ್ಲಿಟ್ಟು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಬೇಕು ಎಂದರು.
ಮಹಿಳಾ ಉದ್ಯಮಿ ವಿಜಯಲಕ್ಷ್ಮಿ ಮಾತನಾಡಿ ನಂದೂರ-ಕೆಸರಟಗಿ ಕೈಗಾರಿಕಾ ಪ್ರದೇಶದ ಮಹಿಳಾ ಪಾರ್ಕ್‍ನಲ್ಲಿ ಉದ್ಯಮ ಸ್ಥಾಪನೆಗೆ ಮಹಿಳಾ ಉದ್ಯಮಿಗಳು ಮುಂದೆ ಬಂದಿದ್ದಾರೆ. ಸೂಕ್ತ ಮೂಲಸೌಕರ್ಯ ಮತ್ತು ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. ಸಂವಾದದಲ್ಲಿ ಅನೇಕ ಯುವ ಮತ್ತು ಹಿರಿಯ ಉದ್ಯಮಿಗಳು ತಮ್ಮ ಸಮಸ್ಯೆಗಳನ್ನು ಸಚಿವರ ಮುಂದೆ ಹೇಳಿಕೊಂಡರು.
ಸಂವಾದದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ, ವಿಧಾನ ಪರಿಷತ್ತಿನ ಶಾಸಕರಾದ ಬಿ.ಜಿ.ಪಾಟೀಲ, ಸುನೀಲ ವಲ್ಯಾಪುರೆ, ಮಾಜಿ ಎಂ.ಎಲ್.ಸಿ. ಶಶೀಲ್ ಜಿ. ನಮೋಶಿ, ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ, ಹೆಚ್.ಕೆ.ಸಿ.ಸಿ.ಐ. ಅಧ್ಯಕ್ಷ ಅಮರನಾಥ ಸಿ. ಪಾಟೀಲ, ಕೆ.ಐ.ಎ.ಡಿ.ಬಿ. ಸಿ.ಇ.ಓ ಡಾ.ಎನ್.ಶಿವಶಂಕರ, ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕ ವಿ. ರಘೋಜಿ ಇದ್ದರು.