ದೊಡ್ಡಬಳ್ಳಾಪುರ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ತಾಲ್ಲೂಕು ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಿಕಲಚೇತನರು ಅಂಗವಿಕಲತೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ವೈದ್ಯಕೀಯ ಶಸ್ತ್ರಚಿಕಿತ್ಸೆಯಿಂದ ನಿವಾರಣೆಮಾಡಿಕೊಳ್ಳಲು “ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ”ಯಿಂದ ಗರಿಷ್ಠ ರೂ.1.00 ಲಕ್ಷದವರೆಗೆ ಧನಸಹಾಯ ನೀಡಲಾಗುವುದು. ಈ ಸೌಲಭ್ಯ ಪಡೆಯಲಿಚ್ಛಿಸುವ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ಅರ್ಹ ವಿಕಲಚೇತನರಿಂದ ಅರ್ಜಿ ಆಹ್ವಾನಿಸಲಾಗಿದೆ.
ಬಡತನ ರೇಖೆಗಿಂತ ಕೆಳಮಟ್ಟದಲ್ಲಿ ಇದ್ದು, ಆರ್ಥಿಕವಾಗಿ ದುಸ್ಥಿತಿ ಇರುವ ವ್ಯಕ್ತಿಗಳು ಈ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಸದರಿ ಶಸ್ತ್ರಚಿಕಿತ್ಸೆಯನ್ನು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆ, ಸುಸಜ್ಜಿತ ಖಾಸಗಿ ಆಸ್ಪತ್ರೆ ಅಥವಾ ಸಂಜಯಗಾಂಧಿ ಆಸ್ಪತ್ರೆಗಳ ಮುಖಾಂತರ ಚಿಕಿತ್ಸೆ ಪಡೆಯಬಹುದಾಗಿದೆ.
ಅರ್ಹತೆಗಳು: ಸಕ್ಷಮ ಪ್ರಾಧಿಕಾರದಿಂದ ಪಡೆದ ವಿಕಲಚೇತನರ ವಿಶಿಷ್ಟ ಗುರುತಿನ ಚೀಟಿ(ಯು.ಡಿ.ಐ.ಡಿ) ಕಾರ್ಡ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿವಾಸಿಗಳಾಗಿದ್ದು ವಾಸಸ್ಥಳ ದೃಢೀಕರಣ ಪತ್ರ ಸಲ್ಲಿಸುವುದು, ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ, ಚಿಕಿತ್ಸಾ ವೆಚ್ಚದ ಅಂದಾಜು ಪಟ್ಟಿಯನ್ನು ಸಂಬಂಧಿಸಿದ ಆಸ್ಪತ್ರೆಯಿಂದ ಪಡೆದು ಸಲ್ಲಿಸುವುದು, ಶಸ್ತ್ರ ಚಿಕಿತ್ಸೆಯಿಂದ ಅಂಗವಿಕಲತೆ ಪ್ರಮಾಣ ಕಡಿಮೆಯಾಗುವ ಬಗ್ಗೆ ವೈದ್ಯಾಧಿಕಾರಿಗಳಿಂದ ಶಿಫಾರಸ್ಸು ಪಡೆಯಬೇಕು.
ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿಮಾಡಿ ಸಂಬಂಧಪಟ್ಟ ಆಸ್ಪತ್ರೆಯ ಮುಖ್ಯಸ್ಥರು ಶಸ್ತ್ರಚಿಕಿತ್ಸೆ ಬಗ್ಗೆ ದೃಢೀಕರಿಸಿ, ತಗಲುವ ವೆಚ್ಚವನ್ನು ನಮೂದಿಸಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಲ್ಲಿಸುವುದು. ಸದರಿ ಅರ್ಜಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯಲ್ಲಿ ಪ್ರಸ್ತಾವನೆಯನ್ನು ಪರಿಶೀಲಿಸಿ, ಸಮಿತಿ ಶಿಫಾರಸ್ಸಿನಂತೆ ಮಂಜೂರಾತಿ ನೀಡಿ ಮೊತ್ತವನ್ನು ಸಂಬಂಧಪಟ್ಟ ಆಯಾ ಆಸ್ಪತ್ರೆಗಳಿಗೆ ಹೊಂದಾಣಿಕೆ ಮಾಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಯವರ ಕಚೇರಿ, ಕೊಠಡಿ ಸಂಖ್ಯೆ: 03, ನೆಲಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ಕುಂದಾಣ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೂರವಾಣಿ ಸಂಖ್ಯೆ: 080-29787442 ಹಾಗೂ ವಿಕಲಚೇತನರ ಸಹಾಯವಾಣಿ ಕೇಂದ್ರ ದೂ.ಸಂ.: 080-29787441 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ