ದೊಡ್ಡಬಳ್ಳಾಪುರ: ನಗರದ ಅರಣ್ಯ ಇಲಾಖೆ ಸಮೀಪ ಬುಧವಾರ ರಾತ್ರಿ ಅಂಗಡಿಗಳ ಷೆಲ್ಟರ್ ಬಾಗಿಲು ಹೊಡೆದು ಸರಣಿ ಕಳ್ಳತನ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಔಷಧಿ ಅಂಗಡಿ, ಕೃಷಿ ಪರಿಕರ ಹಾಗೂ ರಾಸಾಯನಿಕ ಮಾರಾಟ ಮಳಿಗೆ, ಖಾಸಗಿ ಕಚೇರಿ ಸೇರಿದಂತೆ ಹಲವಾರು ಅಂಗಡಿಗಳಲ್ಲಿ ಕಳವು ನಡೆದಿದೆ. ಒಂದು ವಾರದಿಂದ ಈಚೆಗೆ ನಗರದಲ್ಲಿ ಮನೆ ಸೇರಿದಂತೆ ಅಂಗಡಿಗಳ ಬಾಗಿಲು ಮುರಿದು ಕಳವು ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಾರ್ವಜನಿಕರಲ್ಲಿ ಆತಂಕವನ್ನು ಮೂಡಿಸಿದೆ. ಕೊರೊನಾ ಲಾಕ್‌ಡೌನ್ ನಂತರ ನಗರದಲ್ಲಿ ನೇಕಾರಿಕೆ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿರುವುದು, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲೂ ಹಲವಾರು ಕಾರ್ಖಾನೆಗಳು ಬಂದ್ ಆಗಿದ್ದು ಸಾವಿರಾರು ಜನ ಉದ್ಯೋಗಗಳನ್ನು ಕಳೆದುಕೊಂಡಿರುವುದೇ ಕಳವು ಪ್ರಕರಣಗಳು ಹೆಚ್ಚಾಗಲು ಕಾರಣವಾಗುತ್ತಿದೆ. ಪೊಲೀಸರು ರಾತ್ರಿ ಗಸ್ತನ್ನು ಹೆಚ್ಚಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.