ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಉತ್ತಮವಾಗಿ ಮಳೆಯಾಗಿದ್ದು, ಶೇ. 21ರಷ್ಟು ಅಧಿಕ ಮಳೆಯಾಗಿರುತ್ತದೆ. ಕಳೆದ ಸಾಲಿನಲ್ಲಿ ಆಗಸ್ಟ್ ಎರಡನೇ ವಾರದಲ್ಲಿ ಮಳೆಯಾಗಿ ಬಿತ್ತನೆಯಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ. 88ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ.99 ರಾಗಿ, ಮುಸುಕಿನ ಜೋಳ, ತೊಗರಿ, ಅಲಸಂದೆ ಹಾಗೂ ನೆಲಗಡಲೆ ಬಿತ್ತನೆಯಾಗಿದ್ದು, ಬೆಳೆಗಳಲ್ಲಿ ಕೀಟ/ರೋಗಬಾಧೆ ಕಂಡುಬಂದಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಕೃಷಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಸತತವಾಗಿ ಮಳೆಯಾಗುತ್ತಿದ್ದು ರಾಗಿ ಬೆಳೆಯಲ್ಲಿ ಎಲೆಗಳ ಮೇಲೆ ಕಂದು ಬಣ್ಣದ ವಜ್ರಾಕಾರದ ಚುಕ್ಕೆಗಳು ಕಾಣಿಸಿಕೊಂಡು ಅವುಗಳು ಒಂದಕ್ಕೊಂದು ಸೇರಿ ಎಲೆಗಳು ಒಣಗುತ್ತಿದ್ದರೆ ಒಂದು ಗ್ರಾಂ ಕಾರ್ಬೆಂಡಾಜಿಯಮ್ 50% WP ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಎಕರೆಗೆ 200ರಿಂದ 250 ಲೀ ಸಿಂಪಡಿಸಬೇಕು. ನಿಯಂತ್ರಣಕ್ಕೆ ಬಾರದಿದ್ದಲ್ಲಿ ಬೆಂಕಿ ರೋಗವು ಇಳುಕುಗಳನ್ನು ಆವರಿಸಿ ಇಳುಕುಗಳು ಕಾಳು ಕಟ್ಟದೇ ಅಥವಾ ಕಾಳು ಕಟ್ಟದ ಪಕ್ಷದಲ್ಲಿ ಇಳುಕುಗಳು ಮುರಿದು ಆರ್ಥಿಕ ನಷ್ಟ ಉಂಟು ಮಾಡುತ್ತದೆ. ಆದುದರಿಂದ ಮೊದಲನೇ ಸಿಂಪರಣೆ ನಿಯಂತ್ರಣಕ್ಕೆ ಬಾರದಿದ್ದಲ್ಲಿ 15 ದಿನಗಳ ನಂತರ ಎರಡನೇ ಸಿಂಪರಣೆಯಾಗಿ ಒಂದು ಗ್ರಾಂ ಕಾರ್ಬೆಂಡಾಜಿಯಮ್ 50 WP ಅನ್ನು ಅಥವಾ 2.5ಗ್ರಾಂ ಡೈಯಥೇನ್- Z 78 ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಶೇ.50 ರಷ್ಟು ತೆನೆ ಬಂದಾಗ ಸಿಂಪಡಿಸಬೇಕು.
ತೊಗರಿಯಲ್ಲಿ 45 ರಿಂದ 50 ದಿನಗಳ ಬೆಳೆಯಿದ್ದಲ್ಲಿ ಕುಡಿಯನ್ನು ಚಿವುಟುವುದರಿಂದ ಕವಡುಗಳ ಸಂಖ್ಯೆ ಹೆಚ್ಚಾಗಲಿದ್ದು ಅಧಿಕ ಇಳುವರಿ ಪಡೆಯಬಹುದಾಗಿದೆ. ತೊಗರಿ ಬೆಳೆಯಲ್ಲಿ ಪೈಟಾಪ್ತೆರಾ ಮಚ್ಚೆ ರೋಗಕ್ಕೆ ಮೆಟಲಾಕ್ಸಿನ್+ಮ್ಯಾಂಕೋಜೆಬ್ 2ಗ್ರಾಂ/ಲೀ ಅನ್ನು ಗಿಡದ ಬುಡಕ್ಕೆ ಸಿಂಪಡಿಸುವುದು ಮತ್ತು ಬಂಜೆ ನಂಜು ರೋಗ ತಡೆಗಟ್ಟಲು ಪ್ರೋಪಾರ್ಗೈಟ್ (2.5 ಮಿ.ಲಿ/ಲೀ) ಅನ್ನು ಸಿಂಪಡಿಸಬಹುದಾಗಿದೆ. ತೊಗರಿಯಲ್ಲಿ ಸೊರಗು ರೋಗದ ಹತೋಟಿಗೆ 1ಗ್ರಾಂ ಥಯೋಫಿನೇಟ್ ಮೀತೈಲ್ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಗಿಡದ ಸುತ್ತಲೂ ತೋಯಿಸಬೇಕು. ತೊಗರಿ ಮತ್ತು ಅವರೆಯಲ್ಲಿ ಕಾಯಿಕೊರಕದ ಹತೋಟಿಗೆ 0.25 ಮಿ.ಲೀ ಸ್ಪೈನೋಸ್ಯಾಡ್ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಮುಸುಕಿನ ಜೋಳದಲ್ಲಿ ಲದ್ದಿ ಹುಳು ಬಾಧೆಯಿದ್ದು, ರೈತರು ಬಿತ್ತನೆಯ ಒಂದು ವಾರದ ನಂತರ ಬೇವಿನ ಔಷಧಿಗಳನ್ನು ಸಿಂಪಡಿಸುವುದರಿಂದ ಪತಂಗಗಳು ಮೊಟ್ಟೆ ಇಡುವುದನ್ನು ತಪ್ಪಿಸಬಹುದು. ಎರಡನೇ ವಾರದ ನಂತರ ವಿಷ ಪಾಷಣವನ್ನು (10 ಕೆ.ಜಿ ಯಷ್ಟು ಭತ್ತದ ಹೊಟ್ಟನ್ನು ಮತ್ತು 2 ಕೆ.ಜಿ ಬೆಲ್ಲವನ್ನು 2 ರಿಂದ 3ಲೀ ನೀರಿನಲ್ಲಿ 24 ಗಂಟೆಗಳ ಕಾಲ ನೆನೆಸಿಡಬೇಕು. ನಂತರ ಸಿಂಪರಣೆಯ ಅರ್ಧಗಂಟೆ ಮುಂಚೆ 100 ಗ್ರಾಂ ತಯೋಡೈಕಾರ್ಬ್ ಅನ್ನು ಮಿಶ್ರಣ ಮಾಡಿ)ಸಸಿಗಳ ಸುಳಿಗೆ ಹಾಕುವುದು ಅಥವಾ 0.4 ಗ್ರಾಂ ಎಮಾಮೆಕ್ಟಿನ್ ಬೆಂಜೋಯೆಟ್ ಅನ್ನು ಪ್ರತಿ ಲೀ. ನೀರಿಗೆ ಬೆರೆಸಿ ಸುಳಿಗೆ ಸಿಂಪಡಿಸುವುದು. ಎಲ್ಲಾ ಸಿಂಪರಣೆಯನ್ನು ಪೂರ್ವಾಹ್ನ 11.00 ಘಂಟೆಯೊಳಗೆ ಅಥವಾ ಅಪರಾಹ್ನ 3 ರಿಂದ 5 ಘಂಟೆಯೊಳಗೆ ಸಿಂಪಡಿಸಿದಲ್ಲಿ ಪರಿಣಾಮಕಾರಿಯಾಗಿ ಕೀಟಗಳನ್ನು ನಿಯಂತ್ರಿಸಬಹುದಾಗಿದೆ ಎಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

