ದೊಡ್ಡಬಳ್ಳಾಪುರ: ರಾತ್ರಿ ಪಾಳಿಯ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೆ ಸಾವನಪ್ಪಿರುವ ಘಟನೆ ಶುಕ್ರವಾರ ಬೆಳ್ಳಂಬೆಳಗ್ಗೆ ತಾಲೂಕಿನ ಕೊನಘಟ್ಟ ಸಮೀಪ ಸಂಭವಿಸಿದೆ.
ಮೃತನನ್ನು ಲಿಂಗನಹಳ್ಳಿಯ ನಿವಾಸಿ ನಂದನ್ ಕುಮಾರ್(21) ಎಂದು ಗುರುತಿಸಲಾಗಿದೆ. ರಾತ್ರಿ ಪಾಳಿ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುವಾಗ ಕೊನಘಟ್ಟ ಸಮೀಪ ಟ್ರಾಕ್ಟರ್ ಮುಖಾಮುಖಿ ಡಿಕ್ಕಿ ಹೊಡೆದು ಸ್ಥಳದಲ್ಲೆ ಸಾವನಪ್ಪಿದ್ದಾನೆಂದು ಸ್ಥಳೀಯರು ತಿಳಿಸಿದ್ದಾರೆ.
ಬಿಇ ವ್ಯಾಸಂಗ ಮಾಡುತ್ತಿದ್ದ ಈತ. ಬೆಳಗ್ಗೆ ಸಮಯ ಆನ್ಲೈನ್ ಮೂಲಕ ವ್ಯಾಸಂಗ ಮಾಡುತ್ತಾ, ರಾತ್ರಿ ಪಾಳಿ ಕೆಲಸಕ್ಕೆ ಸೇರಿ ಕುಟುಂಬಕ್ಕೆ ನೆರವಾಗುತ್ತಿದ್ದ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

