ದೊಡ್ಡಬಳ್ಳಾಪುರ: ತೀವ್ರಗೊಳ್ಳುತ್ತಿರುವ ಕರೊನಾ ಸೋಂಕು ತಡೆಗೆ ಗ್ರಾಮಪಂಚಾಯಿತಿಗಳಿಗೆ ಸರ್ಕಾರ ಅನುದಾನ ನೀಡದ ಕಾರಣ, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ರತ್ನಮ್ಮಜಯರಾಂ ಸರ್ಕಾರದ ಬೇಸರ ವ್ಯಕ್ತಪಡಿಸಿದ್ದಾರೆ.
ತಾಲೂಕಿನಲ್ಲಿ ಕರೊನಾ ಸೋಂಕಿತರ ಸಾವಿನ ಸಂಖ್ಯೆ 100ರ ಗಡಿ ದಾಟುತ್ತಿರುವ ಹಿನ್ನೆಲೆಯಲ್ಲಿ ತಾಪಂ ವತಿಯಿಂದ ಕೈಗೊಳ್ಳಲಾದ ಕ್ರಮಗಳ ಕುರಿತು ಹರಿತಲೇಖನಿಯೊಂದಿಗೆ ಮಾತನಾಡಿರುವ ಅವರು, ಕರೊನಾ ಸೋಂಕು ತಡೆಗಟ್ಟಲು ಘೋಷಿಸಲಾದ ಲಾಕ್ ಡೌನ್ ಹಿನ್ನೆಲೆ ಗ್ರಾಪಂ ವ್ಯಾಪ್ತಿಯಲ್ಲಿ ಕರ ವಸೂಲಿಯಾಗದ ಕಾರಣ ಗ್ರಾಮಪಂಚಾಯಿತಿಗಳು ಅನುದಾನದ ಕೊರತೆ ಎದುರಿಸುತ್ತಿವೆ. ಕೆಲ ಗ್ರಾಮಪಂಚಾಯಿತಿ ಹೊರತು ಪಡಿಸಿ ಬಹುತೇಕ ಗ್ರಾಮಪಂಚಾಯಿತಿಗಳಲ್ಲಿ ಸಿಬ್ಬಂದಿಗಳಿಗೆ ವೇತನ ನೀಡಲು ಸಹ ಸಾಧ್ಯವಾಗುತ್ತಿಲ್ಲ. ಇದರ ನಡುವೆ ಕರೊನಾ ನಿಯಂತ್ರಣಕ್ಕೆ ಔಷಧ ಸಿಂಪಡಣೆ ಮತ್ತಿತರ ಮುಂಜಾಗ್ರತಾ ತೀವ್ರ ಸಮಸ್ಯೆಯಾಗಿದೆ. ಆದರೂ ಸರ್ಕಾರ ಗ್ರಾಮಪಂಚಾಯಿತಿಗಳಿಗೆ ಅನುದಾನ ನೀಡಲು ಮುಂದಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಷ್ಟೆಲ್ಲ ಸಮಸ್ಯೆಗಳು ಇದ್ದರು ಮಹಾಮಾರಿ ಕರೊನಾ ತಡೆಗಟ್ಟುವುದು ನಮ್ಮ ಜವಬ್ದಾರಿ ಈ ನಿಟ್ಟಿನಲ್ಲಿ ನಿರಂತವಾಗಿ ಗ್ರಾಪಂ ಪಿಡಿಒ ಹಾಗೂ ಅಡಳಿತ ಅಧಿಕಾರಿಗಳ ಸಭೆ ನಡೆಸಿ ಸಾಧ್ಯವಾಗುವ ಅನುದಾನದಲ್ಲಿ ಕರೊನಾ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ.
ಗ್ರಾಮಗಳಲ್ಲಿ ಸ್ವಚ್ಚತೆ ಕ್ರಮ, ಶುದ್ದಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಸೂಚನೆ, ಬೇಸಿಗೆ ಆರಂಭವಾಗಲಿರುವ ಹಿನ್ನೆಲೆ ಕುಡಿಯುವ ನೀರಿಗೆ ತೊಂದರೆ ಉಂಟಾಗದಂತೆ ನೀರಿನ ಕೊರತೆ ಉಂಟಾಗಲಿರುವ ಗ್ರಾಮಗಳ ಪಟ್ಟಿ ರಚಿಸಿ. ಬೋರ್ ವೆಲ್ ಕೊರೆಸುವುದು ಮತ್ತಿತರ ಪರ್ಯಾಯ ಮಾರ್ಗಗಳ ಸಿದ್ದತೆ, ಲಾಕ್ ಡೌನ್ ನಿಂದ ಸಮಸ್ಯೆಗೆ ಒಳಗಾಗಿರುವ ಜನತೆಗೆ ಉದ್ಯೋಗ ದೊರಕಿಸಲು ನರೇಗಾ ಯೋಜನೆಯಡಿಯಲ್ಲಿ ಹೆಚ್ಚು ಕಾಮಗಾರಿ ನಡೆಸಿ ಉದ್ಯೋಗ ದೊರಕಿಸಲು ತಾಲೂಕು ಪಂಚಾಯತಿವತಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಗತ್ತನೆ ಕಾಡುತ್ತಿರುವ ಕರೊನಾ ಸೋಂಕು ತಡೆಗಟ್ಟಲು ತಾಲೂಕಿನ ಜನತೆಯ ಸಹಕಾರ ಅಗತ್ಯವಾಗಿದ್ದು, ಸಾಮಾಜಿಕ ಅಂತರ ಕಾಪಾಡುವುದು, ಕಡ್ಡಾಯವಾಗಿ ಮಾಸ್ಕ ಧರಸುವುದು, ಸೋಂಕಿನ ಲಕ್ಷಣ ಕಂಡು ಬಂದರೆ ಕೂಡಲೆ ಸೋಂಕಿನ ತಪಾಸಣೆಗೆ ಒಳಗಾಗಿ ಚಿಕಿತ್ಸೆ ಪಡೆಯಬೇಕಿದೆ.
ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ತಾಲೂಕು ಆಡಳಿತ ಕರೊನಾ ಸೋಂಕು ತಡೆಗಟ್ಟುವಲ್ಲಿ ಅವಿರತ ಶ್ರಮಿಸುತ್ತಿದ್ದು, ತಾಲೂಕು ಪಂಚಾಯಿತಿ ಸಹ ಸಂಪೂರ್ಣ ಬೆಂಬಲವಾಗಿ ನಿಂತಿದೆ ಎಂದಿದ್ದಾರೆ.

