ದೊಡ್ಡಬಳ್ಳಾಪುರ: ಕರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಅನುದಾನಿತ ಹಾಗೂ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರು, ಉಪನ್ಯಾಸಕರು ಪಟ್ಟಿರುವ ಪಾಡಿನ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳಿಗೆ ಕಿಂಚಿತ್ತು ಕರುಣೆ, ಅನುಕುಂಪವೇ ಇಲ್ಲವಾಗಿದ್ದು, ಶಿಕ್ಷಕರಿಗೆ ಯಾವುದೇ ತರಹದ ಪ್ಯಾಕೇಜ್ ನೀಡದಿರುವುದು ದುರಂತದ ಸಂಗತಿ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.
ನಗರದಲ್ಲಿ ಶುಕ್ರವಾರ ವಿಧಾನ ಪರಿಷತ್‌ನ ಬೆಂಗಳೂರು ಪದವೀದರ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ್ ಅವರ ಪರವಾಗಿ ನಡೆದ ಶಿಕ್ಷಕರೊಂದಿಗೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಕರೊನಾ ಲಾಕ್‌ಡೌನ್ ಸಮಯದಲ್ಲಿ ಕಟ್ಟಡ ಕೂಲಿ ಕಾರ್ಮಿಕರು, ಅಮಾಲೀಗಳಿಗೆ ಪ್ಯಾಕೇಜ್ ಪ್ರಕಟಿಸಿದ ಸರ್ಕಾರಕ್ಕೆ ಖಾಸಗಿ ಶಾಲೆಗಳ ಶಿಕ್ಷಕರ ಕಷ್ಟಗಳು ಮಾತ್ರ ಕಣ್ಣಿಗೆ ಕಾಣಿಸದೇ ಹೋಗಿದ್ದು ದುರಂತದ ಸಂಗತಿಯಾಗಿದೆ. ಹಲವಾರು ದುಂದುವೆಚ್ಚಗಳನ್ನು ಮಾಡುವ ಸರ್ಕಾರಕ್ಕೆ ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಗೊತ್ತಿಲ್ಲ ಎಂದರು.
ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡಿ ಇದು ಒಂದು ಪಕ್ಷವೇ ಅಲ್ಲ ಎಂದು ಹೇಳುವವರು ತಮ್ಮ ಆತ್ಮಕ್ಕೆ ಪ್ರಶ್ನೆ ಮಾಡಿಕೊಳ್ಳಲಿ ಅವರಿಗೆ ಅರ್ಥವಾಗುತ್ತದೆ. ಇಂದು ರಾಷ್ಟ್ರೀಯ ಪಕ್ಷದಲ್ಲಿರುವವರು ಈ ಪಕ್ಷದಿಂದಲೇ ಬೆಳೆದವರು. ನಾನು ಎಲ್ಲಿಂದ ಬೆಳೆದು ಬಂದಿರುವೆ ಎನ್ನುವುದು ಎಂದು ಅವರು ರಾಜ್ಯದಲ್ಲಿನ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ಇಂದು ಹುದ್ದೆಗಳನ್ನು ಅನುಭವಿಸುತ್ತಿರುವ ಎಲ್ಲರು ಸಹ ಜೆಡಿಎಸ್ ಪಕ್ಷದಲ್ಲಿ ಬೆಳೆದು ಹೋಗಿರುವವರೆ ಇದ್ದಾರೆ. ಈ ಪಕ್ಷ ಇರಬೇಕೊ ಬೇಡವೋ ಎನ್ನುವುದನ್ನು ಮುಂದಿನ ದಿನಗಳಲ್ಲಿ ಈ ನಾಡಿನ ಜನ ನಿರ್ಧರಿಸುತ್ತಾರೆ ಹೊರತು ಮುಖಂಡರ ಮಾತುಗಳನ್ನು ಕೇಳಿ ಅಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯರ ಹೆಸರೇಳದೆ ಟಾಂಗ್ ನೀಡಿದರು.
ಜನರ ಆಶೋತ್ತರಗಳನ್ನು ಈಡೇರಿಸಲು ಆಂಧ್ರ ಪ್ರದೇಶ, ತಮಿಳು ನಾಡಿನಂತೆ ಪ್ರಾದೇಶಿಕ ಪಕ್ಷಗಳ ಅಗತ್ಯವಿದೆ ಎಂದ ಅವರು ರಾಜ್ಯದಲ್ಲಿ ಸದಾ ಶಿಕ್ಷಕರ ಪರವಾಗಿ ಕಾರ್‍ಯ ನಿರ್ವಹಿಸುವವರಿಗೆ ನಾವು ನೈತಿಕ ಬೆಂಬಲ ನೀಡಬೇಕಿದ್ದು, ಜೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ್ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಸಮಾಲೋಚನ ಸಭೆಯಲ್ಲಿ ಶಿಕ್ಷಕರ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದ ಶಿಕ್ಷಕರು ಇಷ್ಟು ವರ್ಷಗಳ ಕಾಲ ಬೆಂಗಳೂರು ಪದವೀಧರ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ ಪ್ರತಿನಿಧಿಗಳು ಆಯ್ಕೆಯಾಗುವವರೆಗೆ ಮಾತ್ರ ಶಿಕ್ಷಕರ ಪರವಾಗಿ ಮಾತನಾಡುತ್ತಾರೆ. ಆಯ್ಕೆಯಾದ ನಂತರ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಪರವಾಗಿ ಕೆಲಸ ಮಾಡುತ್ತಾರೆ. ಕಷ್ಟದ ಸಮಯದಲ್ಲಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪ್ರತಿನಿಧಿಗಳು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.
ಅಭ್ಯರ್ಥಿ ಎ.ಪಿ.ರಂಗನಾಥ್ ಮಾತನಾಡಿ, ಶಿಕ್ಷಕರ ಸಂಕಷ್ಟಗಳಿಗೆ ಸ್ಪಂಧಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಕ್ಷಕರ ಮತ್ತು ಆಡಳಿತ ಮಂಡಲಿ ಫೋರಂ, ಮೂಲಕ ಒತ್ತಾಯಿಸಿತ್ತು. ಶಿಕ್ಷಕರು ಸಭೆಯಲ್ಲಿ ಮನವಿ ಮಾಡಿರುವ ಸಮಸ್ಯೆಗಳನ್ನು ಈಡೇರಿಸಲಾಗುವುದು ಎಂದರು.
ಸಭೆಯಲ್ಲಿ ಮಧುಗಿರಿ ಶಾಸಕ ಎಚ್.ವಿ.ವೀರಭದ್ರಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಅಪ್ಪಯ್ಯಣ್ಣ, ವಿಧಾನ ಪರಿಷತ್ ಸದಸ್ಯ ರಮೇಶ್,ಶಿಕ್ಷಕರ ಮತ್ತು ಆಡಳಿತ ಮಂಡಲಿ ಫೋರಂ ಕಾರ್ಯದರ್ಶಿ ಸೂಡಿ ಸುರೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ, ಕಾರ್ಯಾಧ್ಯಕ್ಷ ಆರ್.ಕೆಂಪರಾಜ್, ಘಾಟಿ ಲಯ್ಸ್ ಅಧ್ಯಕ್ಷ ಹರೀಶ್ ಗೌಡ, ಮುಖಂಡರಾದ ಕುಂಟನಹಳ್ಳಿ ಮಂಜುನಾಥ್ ಮತ್ತಿತರರಿದ್ದರು.

