ದೊಡ್ಡಬಳ್ಳಾಪುರ: ಹಲವಾರು ಕಲಾವಿದರು ರಂಗಕಲೆಯಲ್ಲಿ ತೊಡಗಿಸಿಕೊಂಡಿದ್ದರೂ ಸಹ ಅದನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ. ಈ ದಿಸೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿಯಿಂದ ರಂಗ ಸಂಗೀತ ಪರಿಣಿತರಿಂದ ತರಬೇತಿ ನೀಡಲಾಗುತ್ತಿದ್ದು, ಫೆ.11ರಿಂದ 13ರವರೆಗೆ 3 ದಿನಗಳ ಕಾಲ ಜಿಲ್ಲಾ ಮಟ್ಟದ ರಂಗ ಸಂಗೀತ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಸಂಚಾಲಕರಾದ ಎಂ.ಎಸ್.ಗುಣಶೀಲನ್ ತಿಳಿಸಿದ್ದಾರೆ.
ನಗರದ ಬಿ.ಆರ್.ಜಿ ಯೋಗಭವನದಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ನಾಟಕ ಅಕಾಡೆಮಿ ಹಲವರು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಶಿಬಿರಕ್ಕೆ ರಂಗ ಸಂಗೀತದಲ್ಲಿ ಆಸಕ್ತಿ ಇರುವವರು,ಈಗಾಗಲೇ ಸಾಮಾಜಿಕ,ಪೌರಣಿಕ,ಐತಿಹಾಸಿಕ ನಾಟಕಗಳಲ್ಲಿ ಅಭಿನಯಿಸಿರುವ ನಟ ನಟಿಯರು ನಾಟಕ ನಿರ್ದೇಶಕರಿಗೆ ಆದ್ಯತೆ ನೀಡಲಾಗಿದ್ದು, 20 ಮಂದಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮೂರು ದಿನಗಳ ಕಾಲ ರಂಗ ಸಂಗೀತ ಪರಿಣಿತರಾದ ಅನಿಲ್ ಅಂಬಾರಿ, ಗಜಾನನ ನಾಯಕ್, ಶಿವರಾಜ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಶಿಬಿರಾರ್ಥಿಗಳು ರಂಗ ಸಂಗೀತದ ಬಗ್ಗೆ ತಮಗಿರುವ ಸಂದೇಹಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಫೆ.11ರಂದು ಬೆಳಿಗ್ಗೆ 11.30ಕ್ಕೆ ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಪ್ರೊ.ಆರ್.ಭೀಮಸೇನ ಅಧ್ಯಕ್ಷತೆ ವಹಿಸಲಿದ್ದಾರೆ. ಸದಸ್ಯ ಸಂಚಾಲಕ ಗುಣಶೀಲನ್, ಕರ್ನಾಟಕ ನಾಟಕ ಅಕಾಡೆಮಿಯ ರಿಜಿಸ್ಟ್ರಾರ್ ಬಿ.ಮಂಜುನಾಥ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ಧಿಗೋಷ್ಟಿಯಲ್ಲಿ ಶಿಬಿರದ ಸಂಚಾಲಕರಾದ ಎಸ್.ಮೋಹನ್ ಕುಮಾರ್, ಬಿ.ಜಿ.ಅಮರನಾಥ್ ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.