ಬೆಂ.ಗ್ರಾ.ಜಿಲ್ಲೆ: ಜಾನುವಾರುಗಳನ್ನು ಸಾಗಣೆ ಮಾಡುವಂತಿಲ್ಲ, ಒಂದು ವೇಳೆ ಜಿಲ್ಲೆಯಲ್ಲಿ ಅಂತಹ ಪ್ರಕರಣಗಳು ಕಂಡುಬಂದಲ್ಲಿ, ಕಾರ್ಯಾಚರಣೆ ಮೂಲಕ ವಶಪಡಿಸಿಕೊಳ್ಳಲಾಗುವ ಜಾನುವಾರುಗಳನ್ನು ಹತ್ತಿರದ ಗೋಶಾಲೆಗಳಿಗೆ ಬಿಡಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿಂದು ಪಶುಸಂಗೋಪನಾ ಇಲಾಖೆ ಹಾಗೂ ಜಿಲ್ಲಾ ಪ್ರಾಣಿ ದಯಾ ಸಂಘದಿಂದ ನಡೆದ “ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಆದ್ಯಾದೇಶ 2020ರ ಕಾಯ್ದೆ ಅನುಷ್ಠಾನಗೊಳಿಸುವ ಸಭೆ”ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿರುವ ಗೋಶಾಲೆಗಳ ಮುಖ್ಯಸ್ಥರು ಜಾನುವಾರುಗಳನ್ನು ತಮ್ಮ ಗೋಶಾಲೆಗಳಿಗೆ ಪಡೆದು ಅವುಗಳ ಪೋಷಣೆ ಮಾಡಬೇಕು ಎಂದರು. ಅಲ್ಲದೆ, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ ಗೋಶಾಲೆಗಳಿಗೆ ಹಣಕಾಸಿನ ನೆರವು ನೀಡಲು ಅನುದಾನ ಒದಗಿಸುವಂತೆ ಮನವಿ ಸಲ್ಲಿಸಲಾಗುವುದು ಎಂದರು.
ಪ್ರಾಣಿ ದಯಾ ಸಂಘದ ಸದಸ್ಯರ ಮನವಿಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಮುಂದಿನ ದಿನಗಳಲ್ಲಿ ಪ್ರಾಣಿ ಪಕ್ಷಿಗಳಿಗೆ ಅನುಕೂಲವಾಗುವಂತೆ ಅರಣ್ಯದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟು, ಪೋಷಣೆ ಮಾಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಜೊತೆಗೆ ಜಾನುವಾರುಗಳನ್ನು ಸಾಗಣೆ ಮಾಡುವಾಗ ವಾಹನಗಳು ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ತಿಳಿಸಿದರು.
ಮಿಶ್ರ ತಳಿಯ ಗಂಡು ಕರುಗಳು ಜನಿಸಿದ ತಕ್ಷಣ ಗೋಶಾಲೆಗಳಿಗೆ ಅಥವಾ ಕಸಾಯಿಖಾನೆಗಳಿಗೆ ನೀಡಲಾಗುತ್ತಿದೆ ಎಂಬ ಮಾಹಿತಿ ದೊರೆತಿದ್ದು, ಕರುಗಳಿಗೆ ತಾಯಿ ಹಸುವಿನ ಹಾಲು ಸಿಗದೇ ಅಪೌಷ್ಟಿಕತೆಯಿಂದ ಬೇಗ ಮರಣ ಹೊಂದುವ ಸಾಧ್ಯತೆ ಇರುವುದರಿಂದ, ಪಶುಸಂಗೋಪನಾ ಇಲಾಖೆಯಿಂದ ಗೋಶಾಲೆ ಮುಖ್ಯಸ್ಥರು ಸೇರಿದಂತೆ ರೈತರಿಗೆ ಕಾರ್ಯಾಗಾರಗಳನ್ನು ನಡೆಸುವ ಮೂಲಕ ಕರುಗಳಿಗೆ ಪೌಷ್ಟಿಕಾಂಶಯುಕ್ತ ತಯಾರಿಕಾ ಕ್ರಮಗಳನ್ನು ತಿಳಿಸಬೇಕು ಎಂದು ಸಲಹೆ ನೀಡಿದರು.
ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ಜಿ.ಎಂ.ನಾಗರಾಜು ಅವರು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಆದ್ಯಾದೇಶ 2020ರ ಕಾಯ್ದೆ ಕುರಿತು ಪಿಪಿಟಿ ಮೂಲಕ ಸಭೆಗೆ ಮಾಹಿತಿ ನೀಡಿದರಲ್ಲದೆ, 13 ವರ್ಷದೊಳಗಿನ ಜಾನುವಾರುಗಳನ್ನು 15 ಕಿಲೋಮೀಟರ್ ವ್ಯಾಪ್ತಿಯೊಳಗೆ ಕೃಷಿ ಅಥವಾ ಸಾಗಾಣಿಕೆ ಉದ್ದೇಶದಿಂದ ಸಾಗಾಣಿಕೆ ಮಾಡಲು ಅನುಮತಿ ಅಗತ್ಯವಿರುವುದಿಲ್ಲ. ಆದರೆ, 15 ಕಿಲೋಮೀಟರ್‌ಗಿಂತ ಹೆಚ್ಚಿನ ದೂರ ಸಾಗಾಣಿಕೆ ಮಾಡುವಂತಿದ್ದರೆ ಅನುಮತಿ ಪಡೆಯುವುದು ಕಡ್ಡಾಯ ಎಂದು ತಿಳಿಸಿದರು.
ಮೊದಲ ಬಾರಿಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಣೆ ಮಾಡಿದರೆ ಕನಿಷ್ಠ 3 ವರ್ಷ, ಗರಿಷ್ಠ 7 ವರ್ಷ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರದಿಂದ 5 ಲಕ್ಷದವರೆಗೆ ದಂಡ ವಿಧಿಸಬಹುದಾಗಿದೆ, ಮುಂದುವರೆದಲ್ಲಿ 1 ಲಕ್ಷದಿಂದ 10 ಲಕ್ಷದವರೆಗೆ ದಂಡ ಹಾಗೂ 7 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಬಹುದಾಗಿದ್ದು, ಎಸ್.ಐ. ದರ್ಜೆಯ ಸಕ್ಷಮ ಅಧಿಕಾರಿಗಳು ದಂಡ ವಿಧಿಸಿ ಜಾನುವಾರುಗಳನ್ನು ಹತ್ತಿರದ ಗೋಶಾಲೆಗಳಿಗೆ ಬಿಡಬೇಕು ಎಂದರು.
ಗುಣಪಡಿಸಲಾಗದ ರೋಗಗಳಿಂದ ಬಳಲುತ್ತಿರುವ ಹಾಗೂ ಸಂಶೋಧನಾ ಉದ್ದೇಶಕ್ಕಾಗಿ ಮಾತ್ರವೇ ಜಾನುವಾರುಗಳನ್ನು ವಧೆ ಮಾಡಬಹುದಾಗಿದೆ ಹಾಗೂ 13 ವರ್ಷ ಮೇಲ್ಪಟ್ಟ ಎಮ್ಮೆ ಮತ್ತು ಕೋಣವನ್ನು ಪಶು ವೈದ್ಯಾಧಿಕಾರಿಯಿಂದ ವೈದ್ಯಕೀಯ ಪರೀಕ್ಷೆಗೊಳಪಡಿಸಿ, ಪ್ರಮಾಣಿಕೃತಗೊಂಡ ನಂತರ ವಧೆ ಮಾಡಲು ಅವಕಾಶವಿದೆ ಎಂದು ಕಾಯ್ದೆಯಲ್ಲಿರುವ ವಿನಾಯಿತಿ ಕುರಿತು ತಿಳಿಸಿದರು.
ಮುಂದಿನ ದಿನಗಳಲ್ಲಿ ಸರ್ಕಾರ ಪ್ರತಿ ತಾಲ್ಲೂಕಿನಲ್ಲಿ ಎರಡು ಗೋಶಾಲೆಗಳನ್ನು ಮಂಜೂರು ಮಾಡಲಾಗುವ ಉದ್ದೇಶ ಹೊಂದಿದ್ದು, ಸೂಕ್ತ ಸ್ಥಳಾವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ನವಿಲುಗಳ ಹತ್ಯೆ: ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾದ ಡಾ.ವಿ.ಜೀವನ್ ಕುಮಾರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ನವಿಲುಗಳ ಹತ್ಯೆ ಹೆಚ್ಚಾಗಿ ನಡೆಯುತ್ತಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ, ಘಾಟಿ ಅರಣ್ಯ ವಲಯದಲ್ಲಿ ಪ್ರಾಣಿ ಪಕ್ಷಿಗಳಿಗೆ ಸೂಕ್ತ ಆಹಾರ ಸಿಗುತ್ತಿಲ್ಲವಾದ್ದರಿಂದ ಅರಣ್ಯ ಪ್ರದೇಶದಲ್ಲಿ ಹಣ್ಣಿನ ಗಿಡಗಳನ್ನು ನೆಡಬೇಕು ಎಂದು ಹೇಳಿದಾಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅರಣ್ಯ ಉಪ ಸಂರಕ್ಷಣಾಧಿಕಾರಿ(ಟೆರಿಟೋರಿಯಲ್) ಅಂಥೋಣಿ ಮರಿಯಪ್ಪ ಅವರು ಪ್ರತಿಕ್ರಿಯಿಸಿ, ನವಿಲು ಹಾಗೂ ಮಂಗಗಳ ಸಂತತಿಯ ಅಂಕಿ-ಅಂಶಗಳು ಹೆಚ್ಚಾಗಿದೆ, ಹಂತ ಹಂತವಾಗಿ ಅರಣ್ಯದಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕಿ ಸುಮಾ, ಪಶುಸಂಗೋಪನಾ ಇಲಾಖೆ ಮುಖ್ಯ ಪಶುವೈದ್ಯಾಧಿಕಾರಿ ಡಾ. ಅನಿಲ್ ಕುಮಾರ್.ಸಿ.ಎಸ್., ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿ ಹನುಮಂತಪ್ಪ, ನೆಲಮಂಗಲದ ಪ್ರಾದೇಶಿಕ ಸಾರಿಗೆ ಅಧಿಕಾರಿ ಗುರುಮೂರ್ತಿ, ನೆಲಮಂಗಲ ನಗರಸಭೆ ಪೌರಾಯುಕ್ತರಾದ ಮಂಜುನಾಥಸ್ವಾಮಿ, ದೊಡ್ಡಬಳ್ಳಾಪುರ ನಗರಸಭೆಯ ಪ್ರದೀಪ್, ದೇವನಹಳ್ಳಿ ಪುರಸಭೆ ಮುಖ್ಯಾಧಿಕಾರಿ ನಾಗರಾಜು, ವಿಜಯಪುರ ಪುರಸಭೆ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್, ತಾಲ್ಲೂಕು ಪಶು ಪಾಲನಾಧಿಕಾರಿಗಳು, ವಿಶ್ವನಾಥಪುರ ಪೋಲಿಸ್ ಠಾಣೆಯ ಅಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ರಾಮಕೃಷ್ಣಯ್ಯ ಹಾಗೂ ಜಿಲ್ಲೆಯ ವಿವಿಧ ಗೋಶಾಲೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.