ಬೆಂ.ಗ್ರಾ.ಜಿಲ್ಲೆ: ಕಲಾವಿದರು ತಮ್ಮಲ್ಲಿ ಅಂತರ್ಗತವಾಗಿರುವ ಕಲೆಯನ್ನು ಶಾಸ್ತ್ರೀಯ ನೆಲೆಗಟ್ಟಿನಲ್ಲಿ ಹೊರಹೊಮ್ಮಿಸಬೇಕಾದ ಅಗತ್ಯವಿದ್ದು, ಇದಕ್ಕೆ ಸೂಕ್ತ ತರಬೇತಿ ಅಗತ್ಯವಿದೆ ಎಂದು ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ತಿಳಿಸಿದರು.
ನಗರದ ಬಿ.ಆರ್.ಜಿ ಯೋಗಭವನದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಆರಂಭಗೊಂಡಿರುವ ಮೂರು ದಿನಗಳ ಕಾಲ ಜಿಲ್ಲಾ ಮಟ್ಟದ ರಂಗ ಸಂಗೀತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೊಡ್ಡಬಳ್ಳಾಪುರದಲ್ಲಿ ಅಸಂಖ್ಯಾತ ಕಲಾವಿದರಿದ್ದು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದರು, ಕ್ರೀಡಾಪಟುಗಳಿರುವುದು ಹೆಮ್ಮೆಯ ವಿಚಾರ. ಆದರೆ ಬಹಳಷ್ಟು ಕಲಾವಿದರಿಗೆ ಸೂಕ್ತ ವೇದಿಕೆ ಹಾಗೂ ಕಲೆಯ ಮಾರ್ಗದರ್ಶನದ ಅಗತ್ಯವಿದೆ. ಈ ದಿಸೆಯಲ್ಲಿ ನಾಟಕ ಅಕಾಡೆಮಿಯ ರಂಗ ಸಂಗೀತ ತರಬೇತಿ ಶಿಬಿರ ಇಂಬು ನೀಡುತ್ತದೆ. ಸರ್ಕಾರದಲ್ಲಿ ಇಂತಹ ಹಲವಾರು ಯೋಜನೆಗಳಿದ್ದರೂ ಅದನ್ನು ಅರ್ಹರು ಪಡೆದುಕೊಳ್ಳುತ್ತಿರುವುದು ವಿಷಾದಕರ ಎಂದ ಅವರು ತಾವು ರೇಷ್ಮೆ ಮಂಡಲಿ ಅಧ್ಯಕ್ಷರಾಗಿದ್ದಾಗ ದೊಡ್ಡಬಳ್ಳಾಪುರದ ಮಂದಿ ಸೌಲಭ್ಯಗಳನ್ನು ಕೇಳದಿದ್ದದ್ದು, ಇಂದಿಗೂ ಕಾಡುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಕಲಾವಿದರು ಪಡೆದುಕೊಂಡು ತಮ್ಮ ಕಲಾಪ್ರೌಢಿಮೆಯನ್ನು ವಿಸ್ತರಿಸಿಕೊಳ್ಳಬೇಕು. ಸರ್ಕಾರದಿಂದಲೂ ಇದಕ್ಕೆ ವ್ಯಾಪಕ ಪ್ರಚಾರ ದೊರೆಯಬೇಕು ಎಂದು, ಕಲಾವಿದರಿಗೆ ತಮ್ಮ ಕೈಲಾದ ಅಗತ್ಯ ನೆರವು ನೀಡುವ ಭರವಸೆ ನೀಡಿದರು.
ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಸಂಚಾಲಕರಾದ ಎಂ.ಎಸ್.ಗುಣಶೀಲನ್ ಮಾತನಾಡಿ, ಹಲವಾರು ಕಲಾವಿದರು ರಂಗಕಲೆಯಲ್ಲಿ ತೊಡಗಿಸಿಕೊಂಡರಷ್ಟೇ ಸಾಲದು, ಕಲೆಗೆ ಪೂರಕವಾದ ರಂಗ ತರಬೇತಿ ಹಾಗೂ ಮಾರ್ಗದರ್ಶನಗಳನ್ನು ಪಡೆದು ಪ್ರಬುದ್ದರಾಗಬೇಕಿದೆ. ಈ ದಿಸೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿಯಿಂದ ರಂಗ ಸಂಗೀತ ಪರಿಣಿತರಿಂದ ತರಬೇತಿ ಹಾಗೂ ಮಾಗದರ್ಶನ ನೀಡಲಾಗುತ್ತಿದೆ. ಕಲಾವಿದರು ತಮ್ಮ ಕಲಾ ಪ್ರದರ್ಶನವನ್ನು ಸೀಮಿತಗೊಳಿಸದೇ ವಿಸ್ತಾರಗೊಳಿಸಿಕೊಳ್ಳಬೇಕು. ತಾವು ಭಾಗವಹಿಸಿರುವ ಕಾರ್ಯಕ್ರಮಗಳ ಛಾಯಾಚಿತ್ರಗಳು, ಆಹ್ವಾನ ಪತ್ರಿಕೆ, ಪ್ರಶಸ್ತಿಪತ್ರಗಳನ್ನು ಸಂಗ್ರಹಿಸಿಟ್ಟುಕೊಂಡರೆ ವಿವಿಧ ಯೋಜನೆಗಳ ಪ್ರಯೋಜನ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಸಂಗೀತ ಸಂಯೋಜಕ ಹಾಗೂ ಶಿಬಿರದ ನಿರ್ದೇಶಕ ಅನಿಲ್ ಅಂಬಾರಿ, ಶಿಬಿರದ ಸಂಚಾಲಕರಾದ ಎಸ್.ಮೋಹನ್ ಕುಮಾರ್, ಬಿ.ಜಿ.ಅಮರನಾಥ್, ರಂಗ ಕಲಾವಿದ ಕೆ.ಪಿ.ಪ್ರಕಾಶ್, ಯಕ್ಷಗಾನ ಕಲಾವಿದ ಕೆ.ಸಿ.ನಾರಾಯಣ್ ಹಾಗೂ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.