ಬೆಂ.ಗ್ರಾ.ಜಿಲ್ಲೆ: ಅಭಿವೃದ್ಧಿ ಹೆಸರಿನಲ್ಲಿ ದಿನಂಪ್ರತಿ ಅರಣ್ಯ ನಾಶಪಡಿಸಿ, ಹೆಚ್ಚು ನಗರೀಕರಣಗೊಳಿಸುವುದರಿಂದ, ಕಾಲಕ್ರಮೇಣ ಅರಣ್ಯ ಕಡಿಮೆಯಾಗಿ, ಜಾಗತಿಕ ತಾಪಮಾನ ಹೆಚ್ಚಳವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ.ಪ್ರಸಾದ್ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಹಾಗೂ ಸಾಮಾಜಿಕ ಅರಣ್ಯ ವಿಭಾಗದ ವತಿಯಿಂದ ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ಏರ್ಪಡಿಸಲಾಗಿದ್ದ “ಕೃಷಿ ಅರಣ್ಯ ಮತ್ತು ಶ್ರೀಗಂಧ ಬೇಸಾಯ ಕುರಿತ ಒಂದು ದಿನದ ಕಾರ್ಯಾಗಾರ”ವನ್ನು ಗಂಧದ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ, ಅವರು ಮಾತನಾಡಿದರು.
ಜಾಗತಿಕ ತಾಪಮಾನ ಏರಿಕೆಯಿಂದ ಹಲವಾರು ದುರಂತಗಳು ಸಂಭವಿಸುತ್ತಿರುವುದಕ್ಕೆ ನಾವೇ ಕಾರಣಕರ್ತರಾಗಿದ್ದು, ಅರಣ್ಯಾಭಿವೃದ್ಧಿ ಒಂದೇ ಇದಕ್ಕೆ ಪರಿಹಾರವಾಗಿದೆ ಎಂದರು.
ಅರಣ್ಯ ಅಭಿವೃದ್ಧಿಯಿಂದ ಮಾನವನಿಗೆ ಅತ್ಯಗತ್ಯವಾಗಿ ಬೇಕಿರುವ ಉತ್ತಮ ಗಾಳಿ ಮತ್ತು ನೀರು ಕೂಡ ಪಡೆಯಲು ಸಹಕಾರಿಯಾಗಲಿದೆ ಎಂದರು.
ಅರಣ್ಯ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಇಲಾಖೆಗಳ ಮೂಲಕ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರಿಗೆ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಇಂತಹ ಕಾರ್ಯಾಗಾರಗಳು ಉಪಯುಕ್ತವಾಗಲಿದೆ ಎಂದು ತಿಳಿಸಿದರು.
ರೈತರು ಕೇವಲ ಮಳೆ ಆಶ್ರಯದಲ್ಲಿ ಕೃಷಿ ಕೈಗೊಂಡಲ್ಲಿ, ಮಳೆಯ ಅಭಾವದಿಂದ ಕೆಲವೊಮ್ಮೆ ನಷ್ಟ ಅನುಭವಿಸುವಂತಾಗುತ್ತದೆ ಆದರೆ ಶ್ರೀಗಂಧ, ಹೆಬ್ಬೇವು, ತೇಗ ಮುಂತಾದ ಮರಗಳನ್ನು ಬೆಳೆಸುವ ಮೂಲಕ ಅರಣ್ಯ ಕೃಷಿ ಮಾಡುವುದರಿಂದ ರೈತರ ಆದಾಯ ದ್ವಿಗುಣಗೊಳ್ಳುತ್ತದೆ ಮತ್ತು ಸ್ವಾವಲಂಬನೆ ಬದುಕು ಸಾಧಿಸಲು ಸಾಧ್ಯ ಎಂದು ಸಲಹೆ ನೀಡಿದರು.
ಸುಸ್ಥಿರ ಅಭಿವೃದ್ಧಿ ಸಾಧಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದ್ದು, ಎಲ್ಲರೂ ತಮ್ಮ ಜಮೀನಿನಲ್ಲಿ ಮರಗಳನ್ನು ನೆಟ್ಟು ಪೋಷಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಅಪ್ಪಯ್ಯಣ್ಣ ಅವರು ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಮಹಿಳೆಯರು ಸಹ ಮುಂಚೂಣಿಯಲ್ಲಿದ್ದು, ಮುಂದಿನ ದಿನಗಳಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ ರೈತ ಮಹಿಳೆಯರು ಸಹ ಯೋಜನೆಯ ಸದುಪಯೋಗ ಪಡೆಯುವಂತಾಗಬೇಕು ಎಂದು ಆಶಿಸಿದರು..
ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾ ಕುಮಾರಿ ಚಿನ್ನಪ್ಪ ಮಾತನಾಡಿ, ಅರಣ್ಯ ಇಲಾಖೆ ಸಹಯೋಗದೊಂದಿಗೆ ಪ್ರತಿ ವರ್ಷ ವನಮಹೋತ್ಸವ ಆಚರಿಸುವ ಮೂಲಕ ಅರಣ್ಯ ಅಭಿವೃದ್ಧಿ ಮಾಡುತ್ತಿರುವುದು ಶ್ಲಾಘನೀಯ ಎಂದರಲ್ಲದೆ, ರೈತರು ತಮ್ಮ ಜಮೀನಿನಲ್ಲಿ ಮರಗಳನ್ನು ಹೆಚ್ಚು ಬೆಳೆಸಬೇಕು ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಾಮಾಜಿಕ ಅರಣ್ಯ ವಿಭಾಗದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನಿತಾ ಅರೇಕಲ್ ಅವರು ಮಾತನಾಡಿ, ರೈತರು ಶ್ರೀಗಂಧ ಮರ ಬೆಳೆಯಲು ಭಯ ಪಡುವ ಅಗತ್ಯವಿಲ್ಲ, ಕಳ್ಳರ ಹಾವಳಿ ತಡೆಗೆ ಹಲವಾರು ತಂತ್ರಜ್ಞಾನಗಳಿದ್ದು, ಅವುಗಳನ್ನು ಅಳವಡಿಸಿಕೊಂಡು ರೈತರು ಧೈರ್ಯದಿಂದ ಮರ ಬೆಳೆಸಿ, ತಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳಬಹುದೆಂದು ಎಂದು ತಿಳಿಸಿದರು.
ರಾಜ್ಯದಲ್ಲಿ 1000 ಚದರ ಕಿಲೋಮೀಟರ್ ಅರಣ್ಯ ಅಭಿವೃದ್ಧಿಯಾಗಿದ್ದು, ಕೃಷಿ ಜಮೀನಿನಲ್ಲಿ ಗಿಡಗಳನ್ನು ಬೆಳೆಸುವ ರೈತರಿಗೆ 3 ವರ್ಷಗಳ ಕಾಲಾವಧಿಗೆ ಸಹಾಯಧನ ನೀಡಲಾಗುವುದು ಎಂದರಲ್ಲದೆ, ತಿಳಿಸಿದರಲ್ಲದೆ, ಜಿಲ್ಲೆಯಲ್ಲಿ ಕರೋನಾ ಕಾರಣದಿಂದಾಗಿ ಕಾರ್ಯಾಗಾರ ತಡವಾಗಿ ನಡೆಯುತ್ತಿದ್ದು, ಜಿಲ್ಲೆಯ ರೈತರು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ಕರಿಯಪ್ಪ ಮಾತನಾಡಿ, ನರೇಗಾ ಯೋಜನೆಯಡಿ ರೈತರ ಜಮೀನಿನಲ್ಲಿ ಬದುಗಳ ನಿರ್ಮಾಣ, ಕೃಷಿ ಹೊಂಡಗಳ ನಿರ್ಮಾಣಕ್ಕಾಗಿ ಹಣ ಬಿಡುಗಡೆ ಮಾಡಲಾಗಿದ್ದು, ಸದುಪಯೋಗ ಪಡಿಸಿಕೊಂಡು ಅಂತರ್ಜಲದ ಮಟ್ಟ ಹೆಚ್ಚಿಸುವ ಜೊತೆಗೆ ಮರಗಳನ್ನು ಪೋಷಿಸುವ ನಿಟ್ಟಿನಲ್ಲಿ ರೈತರು ಮುಂದಾಗಬೇಕು ಎಂದು ತಿಳಿಸಿದರು.
ಸಾಮಾಜಿಕ ಅರಣ್ಯ ವಿಭಾಗದ ಉಪ ಸಂರಕ್ಷಣಾಧಿಕಾರಿ ಭಾಸ್ಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ ಕರ್ನಾಟಕ ಮಳೆ ಆಧಾರಿತ ಕೃಷಿಯಲ್ಲಿ 2 ನೇ ಸ್ಥಾನದಲ್ಲಿದೆ. ಕೃಷಿ ಜೊತೆಗೆ ಮರಗಳನ್ನು ಬೆಳೆಸುವುದರಿಂದ ರೈತರಿಗೆ ಭವಿಷ್ಯದಲ್ಲಿ ಅನುಕೂಲವಾಗಲಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇ. 10 ರಷ್ಟು ಮಾತ್ರ ಅರಣ್ಯ ಪ್ರದೇಶವಿರುವುದು ಆಘಾತಕಾರಿ ವಿಷಯವಾಗಿದೆ ಎಂದರು. ಅಲ್ಲದೆ, ಜಿಲ್ಲೆಯ ರೈತರು ತಮ್ಮ ವ್ಯಾಪ್ತಿಯಲ್ಲಿ ಮರಗಳನ್ನು ಬೆಳೆಸುವುದರಿಂದ ಅರಣ್ಯ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.
ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ರೂಪ ಮರಿಯಪ್ಪ, ಆಲೂರು ದುದ್ದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಯಮ್ಮ, ಉಪಾಧ್ಯಕ್ಷರಾದ ಕಾಂತಮ್ಮ, ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ರಾಜ್ಯ ಕೃಷಿ ಅರಣ್ಯ ಉಪ ಅಭಿಯೋಜನೆಯ ಸಲಹೆಗಾರ ಚಂದ್ರಪ್ರಭ, ಭಾರತೀಯ ಮರ ವಿಜ್ಞಾನ ಸಂಸ್ಥೆಯ ನಿವೃತ್ತ ವಿಜ್ಞಾನಿ ಡಾ. ವಿ.ಪಿ.ಸೋಮಶೇಖರ್, ಭಾರತೀಯ ಮರ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳಾದ ಡಾ. ಕೆ.ಟಿ.ಚಂದ್ರಶೇಖರ್, ಜಿ.ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್, ಕೂ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.