ದೊಡ್ಡಬಳ್ಳಾಪುರ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಕೊವಿಡ್ ಸಮಯದಲ್ಲಿಯೂ 20 ಸಾವಿರ ಶಿಕ್ಷಕರಿಗೆ ವರ್ಚುಯಲ್ ಮೂಲಕ ತರಬೇತಿಗಳು ನಡೆದಿದ್ದು, ವಿವಿಧ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಸಕ್ರಿಯವಾಗಿದೆ. ಸ್ಕೌಟ್ಸ್ ಮತ್ತು ಗೈಡ್ಸ್ನ ಚಟುವಟಿಕೆಗಳು ಜುಲೈ ತಿಂಗಳಿನಿಂದ ಬೌತಿಕವಾಗಿ ಎಂದಿನಂತೆ ಆರಂಭಗೊಳ್ಳಲಿವೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ ತಿಳಿಸಿದರು.
ನಗರದ ಅನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಸುದ್ಧಿಗಾರರೊಂದಿಗೆ ಅವರು ಮಾತನಾಡಿದರು.
ಮಾರ್ಚ್ 2020 ರಿಂದ ಆರಂಭಗೊಂಡ ಲಾಕ್ಡೌನ್ ಹಾಗೂ ಸಭೆ ಸಮಾರಂಭಗಳಿಗೆ ನಿರ್ಬಂಧದ ಹಿನ್ನಲೆಯಲ್ಲಿ ವರ್ಚುಯಲ್ ಮೂಲಕ 150ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆದಿವೆ. ವೆಬೆನಾರ್ನಲ್ಲಿ ಹಲವಾರು ಗಣ್ಯರು ಭಾಗವಹಿಸಿ ಮಾರ್ಗದರ್ಶನ ನೀಡಿದ್ದಾರೆ. 2.5 ಸಾವಿರ ಉಪನ್ಯಾಸಕರಿಗೆ ತರಬೇತಿ ನೀಡಲಾಗಿದ್ದು, ತರಬೇತಿ ಶಿಕ್ಷಕರಿಗೆ 1 ಸಾವಿರ ರೂ ಗೌರವ ಧನ ನೀಡಲಾಗುತ್ತಿದೆ. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ 35 ಲಕ್ಷಕ್ಕೂ ಹೆಚ್ಚು ಮಾಸ್ಕ್ಗಳನ್ನು ತಯಾರಿಸಿ ವಿತರಿಸಲಾಗಿದೆ. ಆರೋಗ್ಯ ಇಲಾಖೆ ಇನ್ನೂ 6 ತಿಂಗಳು ಮಾಸ್ಕ್ ಧರಿಸಲು ಸೂಚಿಸಿರುವುದರಿಂದ ಒಂದು ಕೋಟಿ ಮಾಸ್ಕ್ಗಳನ್ನು ತಯಾರಿಸುವ ಗುರಿ ಹೊಂದಲಾಗಿದೆ. ಕೊವಿಡ್ ಸಮಯದಲ್ಲಿ ಸಂಘಟನೆಯಿಂದ ವಲಸೆ ಕೂಲಿ ಕಾರ್ಮಿಕರಿಗೆ ನೆರವು, ಮನೆ ಮನೆ ಭೇಟಿ ಮಾಡಿ ಸಹಾಯ ನೀಡುವ ಕಾರ್ಯ ಮಾಡಲಾಗಿದೆ. ಎಸ್ಎಸ್ಎಲ್ಸಿ ಪರೀಕ್ಷಾ ವೇಳೆ 10 ಸಾವಿರ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಲಾಗಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರ ಸಹಕಾರ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಸೋಲಾರ್ ಪಾರ್ಕ್ ನಿರ್ಮಾಣ: ಅನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರದಲ್ಲಿ ಇಂಧನ ಇಲಾಖೆ ವತಿಯಿಂದ ಸೋಲಾರ್ ಪಾರ್ಕ್ ಕಾಮಗಾರಿಗಳು ಇನ್ನೊಂದು ತಿಂಗಳಲ್ಲಿ ಆರಂಭವಾಗಲಿದ್ದು, ಕ್ಯಾಂಪಸ್ನಲ್ಲಿ ಬಳಸುವ ವಿದ್ಯುತ್ ಇಲ್ಲಿಯೇ ಉತ್ಪಾದನೆಯಾಗಲಿದೆ.
ಸ್ಕೌಟ್ಸ್ ಮತ್ತು ಗೈಡ್ಸ್ನಿಂದ ಶಾಲೆಗಳನ್ನು ದತ್ತು ಪಡೆಯುವ ಯೋಜನೆ ರೂಪಿಸಿಲಾಗಿದ್ದು, ದೊಡ್ಡಬಳ್ಳಾಪುರದ ಶಾಲೆಗಳನ್ನು ದತ್ತು ಪಡೆದು, ಶಾಲೆಗಳಿಗೆ ಮೂಲ ಸೌಕರ್ಯ , ಶಿಕ್ಷಕರ ನಿಯೋಜನೆ ಮಾಡಿ ಉತ್ತಮ ಶಿಕ್ಷಣ ನೀಡುವ ಯೋಜನೆಯಿದೆ. ಫೆ.22 ರಂದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪಕ ಬ್ಯಾಡೆನ್ ಪಾವೆಲ್ ಜನ್ಮದಿನಾಚರಣೆ ಅಂಗವಾಗಿ ಸ್ಕೌಟ್ಸ್ ಮತ್ತು ಗೈಡ್ ವಿದ್ಯಾರ್ಥಿಗಳಿಂದ ದಿನಕ್ಕೊಂದು ಒಳ್ಳೆಯ ಕೆಲಸ ಕಾರ್ಯಾರಂಭವಾಗಲಿದೆ.ಕುಟುಂಬದವರಿಗೆ ವಿವಿಧ ಖಾರ್ಯಗಳಲ್ಲಿ ನೆರವು ಹಾಗೂ ಸಮಾಜದಲ್ಲಿ ವಿವಿಧ ಜಾಗೃತಿ ಮೂಡಿಸುವ ಹಾಗೂ ಸೇವಾ ಕಾರ್ಯಗಳನ್ನು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಬಿಬಿಎಂಪಿ ನೋಡಲ್ ಅಧಿಕಾರಿ ಎಂ.ಎ.ಚೆಲ್ಲಯ್ಯ, ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ ಭಟ್, ತರಬೇತಿ ಸಹಾಯಕ ಆಯುಕ್ತರಾದ ಅರುಣ ಮಾಲಾ,ಶಿಬಿರದ ಸಲಹೆಗಾರ ಪ್ರೊ.ಎಂ.ಜಿ.ಚಂದ್ರಶೇಖರಯ್ಯ ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್, ಕೂ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.