ಬೆಂ.ಗ್ರಾ.ಜಿಲ್ಲೆ: ಬೇಲೂರು, ಹಳೇಬೀಡುನಲ್ಲಿರುವ ಶಿಲ್ಪಕಲೆಗಳ ಪ್ರಾಕಾರವನ್ನು ಪ್ರಸ್ತುತವಾಗಿ ರಚಿಸಬಹುದಾಗಿದ್ದು, ಪ್ರಾಚೀನ ಕಾಲದ ಶಿಲ್ಪಕಲೆ ಪ್ರಕಾರಗಳ ಕೆತ್ತನೆಯ ಸಂಪ್ರದಾಯವನ್ನು ಉಳಿಸಿ, ಬೆಳೆಸಿ, ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣಾ ಮಾ.ಅರ್ಕಸಾಲಿ ತಿಳಿಸಿದರು.
ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಬೆಂಗಳೂರು ಹಾಗೂ ಚಂದನ ಆರ್ಟ್ ಫೌಂಡೇಶನ್ ಇಂಟರ್‌ನ್ಯಾಷನಲ್ ಬೆಂಗಳೂರು ಇವರ ಸಹಯೋಗದೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ದಿ ಸ್ಕೂಲ್ ಆಫ್ ಏನ್ಸಿಯೆಂಟ್ ವಿಸ್ಡಮ್‌ನಲ್ಲಿಂದು ಏರ್ಪಡಿಸಲಾಗಿದ್ದ ಸಾಂಪ್ರದಾಯಿಕ ಕಾಷ್ಠ ಶಿಲ್ಪ ಶಿಬಿರವನ್ನು ದೀಪ ಬೆಳಗುವ ಮೂಲಕ ಅವರು ಉದ್ಘಾಟಿಸಿ ಮಾತನಾಡಿದರು.
ನಶಿಸಿ ಹೋಗುತ್ತಿರುವ ಶಿಲ್ಪ ಕಲೆಗಳನ್ನು ಪುನರುತ್ಥಾನ ಮಾಡುವುದೇ ಈ ಶಿಬಿರದ ಆಶಯವಾಗಿದ್ದು, ಶಿಬಿರಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶದ ಅವಕಾಶ ಕಲ್ಪಿಸಲಾಗಿದೆ. ಫೆಬ್ರವರಿ 24 ರವರೆಗೆ ಶಿಬಿರ ನಡೆಯಲಿದ್ದು, ವಿವಿಧ ಬಗೆಯ ಮರದ ತುಂಡುಗಳಲ್ಲಿ ಹೊಯ್ಸಳ ಮತ್ತು ಚಾಲುಕ್ಯ ಶೈಲಿಯ ಶಿಲ್ಪಗಳ ಕೆತ್ತನೆ ಮಾಡುವುದನ್ನು ಜನ ಸಾಮಾನ್ಯರು ನೇರವಾಗಿ ಕಣ್ಣು ತುಂಬಿಕೊಳ್ಳಬಹುದಾಗಿದೆ ಎಂದರು.
ಬೆಂಗಳೂರಿನ ಹ್ಯಾಂಡಿ ಕ್ರಾಫ್ಟ್ ಕೇಂದ್ರದ ಹಿರಿಯ ಸಹಾಯಕ ನಿರ್ದೇಶಕರಾದ ಡಿ.ವಿ.ಶ್ರೀನಾಥ್ ಅವರು ಮಾತನಾಡಿ ಆರ್ಥಿಕವಾಗಿ ದುರ್ಬಲರಾಗಿರುವ ಶಿಲ್ಪ ಕಲಾವಿದರಿಗೆ ಕೇಂದ್ರ ಸರ್ಕಾರದಿಂದ ನೀಡುವ ಸವಲತ್ತುಗಳು, ಗುರುತಿನ ಚೀಟಿ, ನೋಂದಣಿ ಕುರಿತು ತಿಳಿಸಿದರಲ್ಲದೆ, ಶಿಲ್ಪ ಕಲಾ ವಿಭಾಗದವರಿಗಿರುವ ವಿವಿಧ ಅವಕಾಶಗಳು, ಪ್ರಶಸ್ತಿ, ಪುರಸ್ಕಾರಗಳ ಹಾಗೂ ಶಿಲ್ಪ ಪ್ರದರ್ಶನಗಳನ್ನು ಏರ್ಪಡಿಸಲು ಅನುಸರಿಸಬೇಕಾದ ನಿಯಮಗಳ ಕುರಿತು ಮಾಹಿತಿ ನೀಡಿದರು.
ಚಂದನ ಆರ್ಟ್ ಫಂಡೇಶನ್ ಇಂಟರ್‌ನ್ಯಾಷನಲ್‌ನ ಅಧ್ಯಕ್ಷರಾದ ತಾಲೂರು ಕೃಷ್ಣಪ್ಪ ವೆಂಕಟೇಶ್ ಅವರು ಶಿಬಿರಕ್ಕೆ ಆಗಮಿಸಿರುವ ಕಲಾವಿದರಿಗೆ ಅಗತ್ಯವಿರುವ ಮರದ ಪರಿಕರಗಳನ್ನು ಪೂರೈಸಿದ್ದು, ಹತ್ತು ಹಿರಿಯ ಶಿಲ್ಪ ಕಲಾವಿದರು ಹಾಗೂ ಐದು ಸಹಾಯಕ ಶಿಲ್ಪ ಕಲಾವಿದರು ಶಿಬಿರದಲ್ಲಿ ಭಾಗವಹಿಸಿ, ಶಿಲ್ಪ ಕಲಾ ನೈಪುಣ್ಯತೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ.
ದೇವನಹಳ್ಳಿಯ ದಿ ಸ್ಕೂಲ್ ಆಫ್ ಏನ್ಸಿಯೆಂಟ್ ವಿಸ್ಡಮ್‌ನ ಮ್ಯಾನೇಜಿಂಗ್ ಟ್ರಸ್ಟಿ ರಾಮ್‌ಮೆನನ್ ಸೇರಿದಂತೆ ಹಿರಿಯ ಶಿಲ್ಪ ಕಲಾವಿದರು ಹಾಗೂ ಸಹಾಯಕ ಶಿಲ್ಪ ಕಲಾವಿದರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್, ಕೂ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.