ದೊಡ್ಡಬಳ್ಳಾಪುರ: ಬಿಜೆಪಿ ಸರ್ಕಾರದಲ್ಲಿ ಎರಡು ವರ್ಷದಿಂದ ಅಭಿವೃದ್ಧಿ ಕೆಲಸ ಮಾಡದೇ ಸಚಿವರು, ಶಾಸಕರು ಕಿತ್ತಾಡುವುದೇ ಕೆಲಸವಾಗಿದ್ದು, ಕರೊನಾ ಎರಡನೇ ಅಲೆಯನ್ನು ನಿರ್ವಹಣೆ ಮಾಡುವಲ್ಲಿ ಸರ್ಕಾರ ಸಂಪುರ್ಣವಾಗಿ ವಿಫಲವಾಗಿದೆ ಎಂದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ನಗರದಲ್ಲಿ ಶಾಸಕ ಟಿ.ವೆಂಕಟರಮಣಯ್ಯ ನೇತೃತ್ವದಲ್ಲಿ ವಿವಿಧ ಕೈಗಾರಿಕೋದ್ಯಮಿಗಳು ಹಾಗು ದಾನಿಗಳ ಸಹಕಾರದಿಂದ ನಡೆಯುತ್ತಿರುವ ಅನ್ನ ದಾಸೋಹ ವೀಕ್ಷಿಸಲು ಆಗಮಿಸಿದ್ದ ಅವರು ಸುದ್ಧಿಗಾರರೊಂದಿಗೆ ಮಾತನಾಡಿದರು.
ಮೊದಲನೇ ಅಲೆಯಲ್ಲಿ ಸಾಕಷ್ಟು ಅನುಭವಿದ್ದ ತಜ್ಞರು, ವೈದ್ಯರು ಎಚ್ಚರಿಕೆ ನೀಡಿದರೂ ಯಾವುದೇ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸದೆ ಕರೊನಾ ನಿರ್ವಹಣೆಯಲ್ಲಿ ವಿಫಲವಾಯಿತು. ಎರಡನೇ ಅಲೆಯ ಮನ್ನೆಚ್ಚರಿಕೆಗಳನ್ನು ಸಹ ಗಂಭೀರವಾಗಿ ಪರಿಗಣಿಸಿಲ್ಲ. ಕಳೆದ ವರ್ಷದ ಒಂದು ಬೆಡ್‍ಗಳಲ್ಲಿ ಒಂದೂ ಕೂಡ ಹೆಚ್ಚಿಗೆ ಮಾಡುವ ವ್ಯವಸ್ಥೆ ಮಾಡಿರಲಿಲ್ಲ. ಕಾಳಸಂತೆಯಲ್ಲಿ ರೆಮ್‍ಡಿಸಿವರ್, ಆಮ್ಲಜನಕ ಮಾರುವಂತ ದುಸ್ಥಿತಿ ಎದುರಾಗಿದೆ. ಸೋಂಕಿತ ಸಂಖ್ಯೆ ಏರಿಕೆ ಹಾಗೂ ನಿರುದ್ಯೋಗ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಗತ್ತಿಗೇ ನಂಬರ್ 1 ಆಗಿದ್ದಾರೆ ಎಂದರು.
ಬಿಜೆಪಿ ಸರ್ಕಾರದಲ್ಲಿ ಅಧಿಕಾರಿಗಳು ಕೂಡ ಮುಖ್ಯಮಂತ್ರಿಗಳ ಮಾತುಗಳನ್ನು ಕೇಳುತ್ತಿಲ್ಲ. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮಾಡುವುದು ಬಿಡುವುದು ಅವರ ಆಂತರಿಕ ವಿಚಾರ. ಬಿಎಸ್ ಯಡಿಯೂರಪ್ಪ ಕೂಡ ಅಷ್ಟು ಸುಲಭವಾಗಿ ಅಕಾರ ಬಿಟ್ಟು ಕೊಡಲ್ಲ. ಅವರ ಬದಲಾವಣೆಗೆ ಅವರ ಪಕ್ಷದಲ್ಲಿಯೇ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, ಕೋವಿಡ್ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಸರಿಯಾಗಿ ನಿಭಾಯಿಸುತ್ತಿಲ್ಲ. ಜನರು ಸಂಕಷ್ಟದ ಸಮಯದಲ್ಲಿರುವಾಗ ಮುಖ್ಯಮಂತ್ರಿ ನಾಯಕತ್ವ ಬದಲಾವಣೆ ಚರ್ಚೆ ನಡೆಯುತ್ತಿರುವುದು ದುರ್ದೈವದ ಸಂಗತಿ. ರಾಜ್ಯ ಸಂಕಷ್ಟದಲ್ಲಿರುವಾಗ ಬಿಜೆಪಿ ನಾಯಕರು ಅಕಾರಕ್ಕಾಗಿ ಹಾತೊರೆಯುತ್ತಿರುವುದು ಸೂಕ್ತವಲ್ಲ. ಕೊವಿಡ್ ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಅವರಿಗೆ ಆಹಾರ ನೀಡುತ್ತಿರುವುದು ಅಭಿನಂದನೀಯವಾಗಿದ್ದು, ಕೊವಿಡ್ ಸಂಕಷ್ಟವನ್ನು ಎದುರಿಸಲು ಕಾಂಗ್ರೆಸ್ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದರು.
ಈ ವೇಳೆ ಶಾಸಕ ವೆಂಕಟರಮಣಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಂಚೂಣಿ ಘಟಕದ ಮುಖಂಡರು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….