ಬೆಂ.ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿ “ಕಾವೇರಿ ಕೂಗು ಯೋಜನೆ” ಹಾಗೂ ಅರಣ್ಯ ಕೃಷಿ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಹಾಗೂ ಅರಣ್ಯ ಸಸಿಗಳ ಬೇಡಿಕೆಯನ್ನು ಹೆಚ್ಚಿಸುವುದು ಅಗತ್ಯವಿದೆ ಎಂದು ಈಶಾ ಫೌಂಡೇಶನ್ ಔಟ್ ರೀಚ್ ಪ್ರಾಜೆಕ್ಟ್ ಡೈರೆಕ್ಟರ್ ಅಂಬರೀಶ್ ಕುಮಾರ್ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಕಾವೇರಿ ಕೂಗು ಯೋಜನೆ ಹಾಗೂ ಅರಣ್ಯ ಕೃಷಿ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಭೆಯಲ್ಲಿ ಅವರು ಮಾತನಾಡಿದರು.
ಬೆಳೆ ಸಮೀಕ್ಷೆ, ಮೋಜಿನಿ, ನವೋದಯ ಮಾದರಿಯ ಮೊಬೈಲ್ ಅಪ್ಲಿಕೇಶನ್ ಅನ್ನು ರೂಪಿಸಬೇಕಾಗಿದೆ ಎಂದರಲ್ಲದೆ, ಜಿಲ್ಲೆಯಲ್ಲಿ ಅರಣ್ಯ ಕೃಷಿ ಸಂಭವನೀಯ ಪ್ರದೇಶಗಳನ್ನು ಗುರುತಿಸಿ, 20 ಲಕ್ಷ ಸಸಿಗಳನ್ನು ನೆಡುವ ಮೂಲಕ ಕಾವೇರಿ ಕೂಗು ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಅರಣ್ಯ ಕೃಷಿಯನ್ನು ಅಳವಡಿಸಿಕೊಳ್ಳಲು ನರೇಗಾ ಯೋಜನೆಯಡಿ ಬರುವ ರೈತರನ್ನೂ ಸಹ ಕಾವೇರಿ ಕೂಗು ಯೋಜನೆಯಲ್ಲಿ ತರುವಂತಹ ಚಟುವಟಿಕೆಗಳನ್ನು ರೂಪಿಸುವುದರಿಂದ ರೈತರಿಗೆ ಹಾಗೂ ನರೇಗಾ ಕಾರ್ಮಿಕರಿಗೆ ಸಹಾಯವಾಗಲಿದೆ ಎಂದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್.ರವಿಕುಮಾರ್ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ರೈತರು ಕೊರೋನಾದಿಂದ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದು, ಇದರಿಂದ ರೈತರನ್ನು ಪಾರು ಮಾಡಲು ಕಾವೇರಿ ಕೂಗು ಯೋಜನೆಯಲ್ಲಿ ತೋಟಗಾರಿಕೆ, ರೇಷ್ಮೆ ಕೃಷಿ, ನುಗ್ಗೆ, ಕರಿಬೇವು, ಮಾವು, ಹಲಸಿನಂತಹ ದಿನನಿತ್ಯದ ಬಳಕೆಯ ಬೆಳೆಗಳನ್ನು ಬೆಳೆಯುವ ಮುಖಾಂತರ ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಿರುತ್ತದೆ ಎಂದು ತಿಳಿಸಿದರು.
ನದಿ, ಕೆರೆ, ಕುಂಟೆಗಳಂತಹ ಯಾವುದೇ ಜಲಮೂಲಗಳಿಲ್ಲದ ಹಾಗೂ ಅಂರ್ತಜಲ ರಹಿತ ಜಿಲ್ಲೆಯನ್ನು ಅರಣ್ಯ ಕೃಷಿ ಮಾಡುವ ಮೂಲಕ ಸಂರಕ್ಷಿಸುವುದು ಅಗತ್ಯವಾಗಿದೆ ಎಂದರು.
ಸಭೆಯಲ್ಲಿ ಕಾವೇರಿ ಕೂಗು ಯೋಜನೆಯ ನೇತಾರ ಆನಂದ್, ಕೋ-ಆರ್ಡಿನೇಟರ್ ಪ್ರವೀಣಾ ಶ್ರೀಧರ್, ಸದಸ್ಯರಾದ ರೈಸಾ, ಅವನಿ ಇನ್ಫೋಸಾಪ್ಟ್ ನ ಎಂ.ಡಿ ಮಲ್ಲಿಕಾರ್ಜುನ ಪಾಟೀಲ್, ಆಪರೇಶನ್ ಮ್ಯಾನೇಜರ್ ಶ್ಯಾಮ್ ಕುಮಾರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುನಿ ಕೃಷ್ಣಪ್ಪ, ಡಿಸಿಎಫ್ ಭಾಸ್ಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..