ದೊಡ್ಡಬಳ್ಳಾಪುರ: ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ವರುಣ ಅಬ್ಬರಿಸಿದ್ದು, ಹಲವು ದಿನಗಳಿಂದ ಮಳೆಯಿಲ್ಲದೆ ಕಂಗಾಲಾಗಿದ್ದ ರೈತರಿಗೆ ನೆಮ್ಮದಿ ತಂದಿದೆ.
ಭಾನುವಾರ ರಾತ್ರಿ 9.30 ಕ್ಕೆ ಆರಂಭವಾದ ಮಳೆ, ತಾಲೂಕಿನ ಹಲವೆಡೆ ರಾತ್ರಿ ಪೂರ ಭರ್ಜರಿಯಾಗಿ ಸುರಿದ್ಧಿದ್ದು, 57mm ಮಳೆ ದಾಖಲಾಗಿದೆ.
ಸುರಿದ ಭಾರಿ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿದಿದ್ದು, ಮೆಸ್ಟ್ರು ಮನೆ ಕ್ರಾಸ್ ಬಳಿ ರಸ್ತೆಗೆ ಅಡ್ಡವಾಗಿ ಮರದ ಕೊಂಬೆ ಉರುಳು ಬಿದ್ದಿತ್ತು. ಮಳೆಯಿಂದಾಗಿ ಹಲವೆಡೆ ವಿದ್ಯುತ್ ಕಂಬಳಿಗೆ ಹಾನಿಯಾದ ಕಾರಣ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಕಡಿತ ಉಂಟಾಗಿದೆ.
57mm ಮಳೆ ದಾಖಲು: ತಾಲೂಕಿನ ತಿಪ್ಪೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಅತಿಹೆಚ್ಚು 112mm ಮಳೆ ಸುರಿದಿದ್ದರೆ, ಹಣಬೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ 109mm ದಾಖಲಾಗಿದೆ. ಇನ್ನೂ ಹೋಬಳಿವಾರು ಕಸಬ ವ್ಯಾಪ್ತಿಯಲ್ಲಿ 63.08mm, ದೊಡ್ಡಬೆಳವಂಗಲ 62.9mm, ಕನಸವಾಡಿ 42.01mm, ಸಾಸಲು 60mm, ತೂಬಗೆರೆ 56.02mm ದಾಖಲಾಗಿದೆ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ರೂಪ ಹರಿತಲೇಖನಿಗೆ ತಿಳಿಸಿದ್ದಾರೆ.
ಮತ್ತೆ ಕೊಚ್ಚಿಹೋದ ತಾತ್ಕಾಲಿಕ ಸೇತುವೆ: ಮಳೆಯ ಆರ್ಭಟಕ್ಕೆ ಹೊಸಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೊಟ್ಟಿಗೇಮಾಚೇನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲು ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಸೇತುವೆ ಮತ್ತೆ ಕೊಚ್ಚಿಹೋಗಿದೆ ಸಂಪರ್ಕ ಇಲ್ಲವಾಗಿದೆ.
6 ವರ್ಷಗಳ ವನವಾಸ: ಕೊಟ್ಟಿಗೇಮಾಚೇನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿದು 6 ವರ್ಷಗಳಾಗಿದ್ದು, ಕೇವಲ ತಾತ್ಕಾಲಿಕ ಸೇತುವೆಯಲ್ಲಿ ಪಯಣಿಸಬೇಕಾದ ಅನಿರ್ವಾರ್ಯತೆ ಈ ವ್ಯಾಪ್ತಿಯ ಜನರದ್ದಾಗಿದೆ. 2016ರಲ್ಲಿ ಸುರಿದ ಭಾರಿ ಮಳೆಗೆ ಸೇತುವೆ ಕೊಚ್ಚಿಹೋದ ಕಾರಣ 2018ರಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಯಿತು. ಆದರೆ 2020ರಲ್ಲಿ ಸುರಿದ ಮಳೆಗೆ ಆ ಸೇತುವೆ ಕೊಚ್ಚಿಹೋದ ಕಾರಣ ಮತ್ತೊಂದು ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ವಿಪರ್ಯಾಸ ಕಳೆದ ರಾತ್ರಿ ಸುರಿದ ಮಳೆಗೆ ಈ ಸಂಪರ್ಕ ಸೇತುವೆ ಸಹ ಕೊಚ್ಚಿಹೋಗಿದೆ.
ಸಂಸದ ಬಚ್ಚೇಗೌಡ ಆದಿಯಾಗಿ ಸ್ಥಳೀಯ ಜನಪ್ರತಿನಿದಿಗಳು ಕೇವಲ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ತೆರಳುವರೆ ಹೊರತು ಶಾಶ್ವತ ಸೇತುವೆ ನಿರ್ಮಾಣಕ್ಕೆ ಮುಂದಾಗದ ಕಾರಣ ಈ ವ್ಯಾಪ್ತಿಯ ಜನ ಪರಿತಪಿಸುವಂತಾಗಿದೆ ಎಂದು ಸ್ಥಳೀಯ ಮುತ್ತುರಾಜ್, ನರಸಿಂಹಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..