ದೊಡ್ಡಬಳ್ಳಾಪುರ: ಕೊರೊನಾ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ವೃತ್ತಪತ್ರಿಕೆಗಳನ್ನು ಮನೆಮನೆಗೆ ತಲುಪಿಸುವ ಮೂಲಕ ದಿನಪತ್ರಿಕೆ ವಿತರಕ ಹುಡುಗರ ಕೆಲಸ ಸಾರ್ಥಕ ಸಾಮಾಜಿಕ ಸೇವೆ ಎಂದೇ ಪರಿಗಣಿಸಬೇಕು ಎಂದು ಹಿರಿಯ ಕನ್ನಡಪರ ಹೋರಾಟಗಾರ ತ.ನ.ಪ್ರಭುದೇವ್ ಹೇಳಿದರು.
ನಗರದ ಡಾ.ರಾಜ್ ಕುಮಾರ್ ಕಲಾ ಮಂದಿರ(ಪುರಭವನ)ದಲ್ಲಿ ಭಾನುವಾರ ಶ್ರೀ ಭುವನೇಶ್ವರಿ ಕನ್ನಡ ಸಂಘದಿಂದ ದಾನಿಗಳ ನೆರವಿನಿಂದ ಹಮ್ಮಿಕೊಳ್ಳಲಾಗಿದ್ದ ವೈದ್ಯರ ದಿನ, ಪತ್ರಿಕಾ ದಿನದ ಕಾರ್ಯಕ್ರಮದಲ್ಲಿ ಅವರು ದಿನಪತ್ರಿಕೆ ವಿತರಣೆಯಲ್ಲಿ ತೊಡಗಿರುವವರಿಗೆ ದಿನಸಿ ಕಿಟ್, ಬ್ಲಾಕ್ ಫಂಗಸ್ ಸೋಂಕಿತ ವ್ಯಕ್ತಿಯೊಬ್ಬರಿಗೆ ಆರ್ಥಿಕ ನೆರವು ವಿತರಿಸಿ ಮಾತನಾಡಿದರು.
ಅತ್ಯಂತ ಸಂದಿಗ್ಧ ಸಂದರ್ಭದಲ್ಲಿ ಹಲವು ಸವಾಲುಗಳ ನಡುವೆ ಸಲ್ಲಿಸುತ್ತಿರುವ ಸೇವೆ ಗಣನೀಯ. ಸ್ಥಳೀಯ ಹಂತದಿಂದ ಹಿಡಿದು, ಜಾಗತಿಕ ವಿದ್ಯಮಾನಗಳವರೆಗೆ ಎಲ್ಲಾ ಸುದ್ದಿಗಳನ್ನು ಮನೆಯಲ್ಲಿದ್ದ ಜನತೆಗೆ ನಿರ್ದಿಷ್ಟ ಸಮಯಕ್ಕೆ ತಲುಪಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಶ್ರೀರಾಮ ಆಸ್ಪತ್ರೆ ವೈದ್ಯ ಡಾ.ಎಚ್.ಜಿ.ವಿಜಯಕುಮಾರ್ ಮಾತನಾಡಿ,ಆರೋಗ್ಯ ಸಿಬ್ಬಂದಿ,ಪೊಲೀಸರು,ಕರೊನಾ ವಾರಿಯರ್ಸ್ ಸೇವೆಯಂತೆಯೇ ದಿನಪತ್ರಿಕೆ ವಿತರಕರು,ವಿತರಕ ಯುವಕರ ಸೇವೆಯೂ ಶ್ಲಾಘನೀಯ. ಇನ್ನೂ ಕೊರೊನಾ ನಮ್ಮಿಂದ ದೂರವಾಗಿಲ್ಲ.ಮುನ್ನೆಚ್ಚರಿಕೆ ನಿಯಮಗಳ ಪಾಲನೆ ಹಾಗೂ ಪೌಷ್ಠಿಕ ಆಹಾರ ಸೇವನೆಗೆ ಒತ್ತು ನೀಡಬೇಕು. ರೋಗ ಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರ ಸಲಹೆ ಪಡೆಯುವುದನ್ನು ನಿರ್ಲಕ್ಷಿಸಬಾರದು ಎಂದರು.
ಶ್ರೀ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ನವೀನ್ ಪ್ರಭುದೇವ, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ರಮೇಶ್, ಸಾಹಿತಿ ಕೆ.ಮಹಾಲಿಂಗಯ್ಯ, ಕನ್ನಡಪರ ಹೋರಾಟಗಾರ ಸಾ.ಲ.ಕಮಲನಾಥ್, ತಳವಾರ್ ನಾಗರಾಜ್, ನಾರಾಯಣಸ್ವಾಮಿ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……