ನವದೆಹಲಿ: ತ್ರಿವಳಿ ತಲಾಖ್ ವಿರುದ್ಧ ಕಾನೂನು ಜಾರಿಯಾಗಿ ಎರಡು ವರ್ಷ ಪೂರ್ಣಗೊಂಡ ಕಾರಣ ಇಂದು (ಆಗಸ್ಟ್ 1ರಂದು) ದೇಶದಾದ್ಯಂತ ‘ಮುಸ್ಲಿಂ ಮಹಿಳೆಯರ ಹಕ್ಕುಗಳ ದಿನ’ವನ್ನು ಆಚರಿಸುವುದಾಗಿ ಕೇಂದ್ರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ತಿಳಿಸಿದೆ.
ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಖ್ ನೀಡುವುದು ಕಾನೂನು ಬಾಹಿರ ಎಂಬ ಕಾನೂನನ್ನು 2019ರ ಆಗಸ್ಟ್ 1ರಂದು ಕೇಂದ್ರ ಸರ್ಕಾರ ಜಾರಿಗೊಳಿಸಿತ್ತು. ರಾಜ್ಯಸಭೆಯಲ್ಲಿ ಈ ಕಾಯ್ದೆಗೆ ಅಂಗೀಕಾರ ದೊರೆಯಲು ಕೊಂಚ ಸಮಸ್ಯೆಯನ್ನು ಸಹ ಕೇಂದ್ರ ಸರ್ಕಾರ ಅನುಭವಿಸಿತ್ತು.
ಈ ಕುರಿತು ಅಧಿಕೃತ ಪ್ರಕಟಣೆ ನೀಡಿರುವ ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ, ಮುಸ್ಲಿಂ ಮಹಿಳೆಯರಿಗೆ ಸಮಸ್ಯೆಯಾಗಿದ್ದ ತ್ರಿವಳಿ ತಲಾಖ್ ನಿಷೇಧಿಸಿ ಕಾನೂನು ರೂಪಿಸಿರುವುದು ಬಿಜೆಪಿಯ ಹೆಗ್ಗಳಿಕೆ ಎಂದು ವ್ಯಾಖ್ಯಾನಿಸಿದ್ದಾರೆ. ಈ ಕಾನೂನು ಜಾತಿಯಾದ ನಂತರ ಮುಸ್ಲಿಂ ಮಹಿಳೆಯರು ಅನುಭವಿಸುತ್ತಿದ್ದ ಬಹುದೊಡ್ಡ ತೊಂದರೆಯೊಂದು ಪರಿಹಾರವಾದಂತಾಗಿದೆ. ಕಾನೂನು ಜಾರಿಗೊಳಿಸಿರುವುದನ್ನು ಅತ್ಯಂತ ಮುಕ್ತಕಂಠದಿಂದ ಮುಸ್ಲಿಂ ಮಹಿಳೆಯರು ಸ್ವಾಗತಿಸಿದ್ದಾರೆ. ಅಲ್ಲದೇ, ಕೇಂದ್ರ ಸರ್ಕಾರವನ್ನು ಕೊಂಡಾಡಿದ್ದಾರೆ ಎಂದು ಸಹ ಮುಖ್ತಾರ್ ಅಬ್ಬಾಸ್ ನಖ್ವಿ ತಿಳಿಸಿದರು.
ಭಾನುವಾರ ದೆಹಲಿಯಲ್ಲಿ ನಡೆಯಲಿರುವ ಮುಸ್ಲಿಂ ಮಹಿಳೆಯರ ಹಕ್ಕುಗಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಜತೆಗೆ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ, ಪರಿಸರ ಸಚಿವ ಭೂಪೇಂದರ್ ಯಾದವ್ ಸಹ ಭಾಗವಹಿಸಲಿದ್ದಾರೆ. (ಸಂಗ್ರಹ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……