ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸೆಪ್ಟಂಬರ್ 3ರಂದು ದಿನಾಂಕ ನಿಗದಿ ಪಡಿಸಿದ್ದು, ಚುನಾವಣೆ ಅಧಿಕಾರಿಗಳು ಇಂದು ಅಧಿಸೂಚನೆ ಪ್ರಕಟಿಸುವ ಮೂಲಕ ಚುನಾವಣೆ ನಡೆಸಲು ಇದ್ದ ಆತಂಕಗಳು, ಅನುಮಾನಗಳು ನಿವಾರಣೆಯಾದಂತಾಗಿವೆ.
ಚುನಾವಣೆಗಿದ್ದ ಅಡೆತಡೆಗಳ ನಿವಾರಣೆ: ನಗರಸಭೆಯ ಸದಸ್ಯರ ಅಧಿಕಾರಾವಧಿ 2019ರ ಮಾ.12ರ ಸಂಜೆ ಮುಕ್ತಾಯವಾಗಿ, ನಗರಸಭೆ ಈಗ ಆಡಳಿತಾಧಿಕಾರಿಗಳ ಸುಪರ್ದಿನಲ್ಲಿದೆ. 2 ವರ್ಷ 5ತಿಂಗಳಾಗಿದ್ದರೂ ಚುನಾವಣೆಗೆ ಕಾಲ ಕೂಡಿ ಬಂದಿರಲಿಲ್ಲ. ವಾರ್ಡ್ ಗಳ ಗಡಿ ನಿಗದಿ, ವಾರ್ಡ್ ಗಳ ಮೀಸಲಾತಿ ಅಂತಿಮಗೊಳಿಸಿದ್ದರೂ ಸಹ ಇದು ಸರಿ ಇಲ್ಲ ಎನ್ನುವುದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೊರೆಹೋದ ಕಾರಣದಿಂದಾಗಿ ನಗರಸಭಾ ಚುನಾವಣೆ ವಿಳಂಬವಾಗುತ್ತಲೇ ಬರುತ್ತಿತ್ತು.
ಈ ಹಿಂದೆ ನಗರಸಭೆಗೆ ಚುನಾವಣಾ ಆಯೋಗದಿಂದ ಏ.27 ರಂದು ಚುನಾವಣೆ ನಡೆಸಲು, ಮಾರ್ಚ್ 29ರಂದು ವೇಳಾಪಟ್ಟಿಯ ಪ್ರಕಟಣೆ ಹೊರಡಿಸಲಾಗಿತ್ತು. ನಂತರ ಸಂಜೆ ವೇಳೆಗೆ ತಾಂತ್ರಿಕ ಕಾರಣ ನೀಡಿ ಚುನಾವಣೆ ವೇಳಾಪಟ್ಟಿಯನ್ನು ಹಿಂದಕ್ಕೆ ಪಡೆದು ಆದೇಶ ಹೊರಡಿಸಿತ್ತು.
ವಾರ್ಡ್ ಗಳ ಮೀಸಲಾತಿ ನಿಗದಿಯನ್ನು ಪ್ರಶ್ನಿಸಿ ಜಿ.ಎಸ್.ಸೋಮರುದ್ರಶರ್ಮ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಇದೆಲ್ಲವು ಇತ್ಯರ್ಥವಾಗಿ ಚುನಾವಣಾ ದಿನಾಂಕ ಪ್ರಕಟವಾಗುತ್ತದೆ ಎನ್ನುವಷ್ಟರಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಜಾರಿಗೆ ಬಂತು. ಈಗ ವಾರ್ಡ್ ತಕರಾರು ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಕರೇನಹಳ್ಳಿ ಗಡಿಗೆ ಸಂಬಂದಿಸಿದಂತೆ ಈ ಹಿಂದಿನ ಮತದಾರರ ಪಟ್ಟಿಯನ್ನು ಪುರಸ್ಕರಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಚುನಾವಣೆಗೆ ಇದ್ದ ಆತಂಕಗಳು ನಿವಾರಣೆಯಾದಂತಾಗಿದೆ.
ತೀವ್ರವಾದ ರಾಜಕೀಯ ಚಟುವಟಿಕೆಗಳು: ಡಿಸೆಂಬರ್‌ವರೆಗೂ ಯಾವುದೇ ಚುನಾವಣೆ ನಡೆಯುವುದಿಲ್ಲ ಎಂದು ರಾಜ್ಯ ಸರ್ಕಾರ ಘೋಷಿಸಿತ್ತು. ಆದರೆ ರಾಜ್ಯದಲ್ಲಿ ಶಾಲಾ ಕಾಲೇಜು, ವಾಣಿಜ್ಯ ವ್ಯವಹಾರಗಳಿಗೆ ಕರೊನಾ ಅನ್‌ಲಾಕ್ ಮಾಡಿರುವ ರಾಜ್ಯ ಸರ್ಕಾರಕ್ಕೆ ಚುನಾವಣೆ ನಡೆಸಲು ಏನು ಅಡ್ಡಿ ಎಂದು ಉಚ್ಚ ನ್ಯಾಯಾಲಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ಈ ಹಿನ್ನಲೆಯಲ್ಲಿ ಜರೂರಾಗಿ ಚುನಾವಣೆ ದಿನಾಂಕ ಪ್ರಕಟವಾಗಿದೆ.
ಯಾವ ಸಮಯದಲ್ಲದಾರೂ ಚುನಾವಣೆ ನಡೆಯಬಹುದೆಂಬ ನಿರೀಕ್ಷೆಯಿಂದ ವಿವಿಧ ರಾಜಕೀಯ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಭೆಗಳನ್ನು ನಡೆಸಲಾಗುತ್ತಿತ್ತು. ವಿವಿಧ ರಾಜಕೀಯ ಮುಖಂಡರು ತಮ್ಮ ಪಕ್ಷಗಳನ್ನು ಬದಲಾಯಿಸಿ ಇತರೆ ಪಕ್ಷಗಳಿಗೆ ಸೇರ್ಪಡೆಗೊಳ್ಳುತ್ತಿರುವುದು ಸಾಮಾನ್ಯವಾಗಿದೆ. ವಾರ್ಡ್ಗಳ ಮೀಸಲಾತಿಯನ್ವಯ ತಾವು ಸ್ಪರ್ಧಿಸುವ ವಾರ್ಡ್ ಗಳಿಗೆ ಭೇಟಿ ನೀಡಿ ಮತದಾರರನ್ನು ಓಲೈಸುವುದು, ವಾರ್ಡ್ ಗಳು ತಮಗೊಪ್ಪದಿದ್ದರೆ ನಿರಾಶರಾಗುತ್ತಿರುವುದು ನಡೆಯುತ್ತಿದೆ.ಈಗ ನಗರಸಭೆ ಚುನಾವಣೆ ಘೋಷಣೆಯು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದು, ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……