ಚಿಕ್ಕಬಳ್ಳಾಪುರ: ಪ್ರಶಾಂತಿ ಬಾಲಮಂದಿರ ಟ್ರಸ್ಟ್ ವತಿಯಿಂದ ಚಿಕ್ಕಬಳ್ಳಾಪುರ ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಅಂತರಾಷ್ಟ್ರೀಯ ಗುಣ ಮಟ್ಟದ ವೈದ್ಯಕೀಯ ವಿದ್ಯಾಲಯ ಸ್ಥಾಪನೆಗೆ ಸರ್ಕಾರದ ಸಂಪೂರ್ಣ ಸಹಕಾರ ಇರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಅವರು ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ ಸ್ಥಾಪನೆಯಾದ ಶ್ರೀ ಸತ್ಯಸಾಯಿ ಸರಳ ಸ್ಮಾರಕ ಆಸ್ಪತ್ರೆಯನ್ನು ಹಾಗೂ ಮಕ್ಕಳ ತೀವ್ರ ನಿಗಾ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತಾ, ಈ ಭಾಗದಲ್ಲಿ ಅಂತರಾಷ್ಟ್ರೀಯ ಗುಣ ಮಟ್ಟದ ವೈದ್ಯಕೀಯ ಕಾಲೇಜು ಸ್ಥಾಪನೆಯಿಂದ ಬಡವರಿಗೆ,ಕಷ್ಟದಲ್ಲಿರುವರಿಗೆ ಹಾಗೂ ಅಶಕ್ತರಿಗೆ ಸಹಾಯ ಆಗಲಿದೆ. ಬಡವರಿಗೆ ಉಚಿತವಾಗಿ ವೈದ್ಯಕೀಯ ಸೇವೆಯನ್ನು ನೀಡುತ್ತಿರುವ ಈ ಸೇವಾ ಸಂಸ್ಥೆಯ ಕಾರ್ಯ ಅಮೋಘವಾದದ್ದು, ಈ ಕಾರ್ಯಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ನೆರವಾಗಿದ್ದಾರೆ ಎಂದರು.
ನೋವನ್ನು ತಡೆಯುವ ಮತ್ತು ನಿವಾರಿಸುವ ಶಕ್ತಿ ವೈದ್ಯರಿಗೆ ಮಾತ್ರ ಇರುತ್ತದೆ. ಈ ನಿಟ್ಟಿನಲ್ಲಿ ವಿದೇಶಗಳಿಂದ ಸತ್ಯಸಾಯಿ ಗ್ರಾಮಕ್ಕೆ ಅನೇಕ ವೈದ್ಯರು, ತಜ್ಞರು, ರೋಗಿಗಳ ಆರೋಗ್ಯ ಸೇವೆ ಮಾಡಲು ಮುಂದೆ ಬಂದಿದ್ದಾರೆ. ಇದಕ್ಕೆ ಸೇವಾ ಮನೋಭಾವ ಬಹಳ ಮುಖ್ಯ ಅಂತಹ ಸೇವಾ ಮನೋಭಾವ ಹುಟ್ಟಿಸಬೇಕಾದರೆ ಆಧ್ಯಾತ್ಮಿಕ ಶಕ್ತಿಯಿಂದ ಮಾತ್ರ ಸಾಧ್ಯ. ಈ ಶಕ್ತಿ ಎಲ್ಲಾ ಕಡೆ ಇರಬೇಕು. ಆಗ ಮಾತ್ರ ಕಲಿಯುಗ ಸುವ್ಯವಸ್ಥೆಯತ್ತ ಸಾಗುತ್ತದೆ. ನಮ್ಮ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. 4000 ವೈದ್ಯರ ನೇಮಕಾತಿಗೆ ಕ್ರಮವಹಿಸಿತ್ತು. ಇದರಲ್ಲಿ 2500 ವೈದ್ಯರು ಮಾತ್ರ ಕರ್ತವ್ಯಕ್ಕೆ ವರದಿ ಮಾಡಿಕೊಂಡರು ಎಂದರು.
ಕಲಿಯುಗದಲ್ಲಿ ಭಗವಂತ ಗುರುವಿನ ರೂಪದಲ್ಲಿ ಕಾಣಿಸಿಕೊಂಡಿದ್ದಾನೆ. ಆದ್ದರಿಂದ ನಾವೆಲ್ಲರೂ ಗುರುವಿನಲ್ಲಿ ಕರಗಿ ಲೀನವಾಗಬೇಕು. ಆಗಲೇ ಗುರುವಿನ ಸಂಪೂರ್ಣ ಆಶಿರ್ವಾದ ಸಿಗುತ್ತದೆ. ಗುರುವಿನ ಮೂಲಕ ದೈವತ್ವದ ದರ್ಶನವಾಗುತ್ತದೆ ಎಂದರು.
ಶ್ರೀ ಸತ್ಯಸಾಯಿ ಸರಳ ಸ್ಮಾರಕ ಆಸ್ಪತ್ರೆಯಲ್ಲಿ 300 ಹಾಸಿಗೆಗಳ ಅತ್ಯಾಧುನಿಕ ಸುಸಜ್ಜಿತ ವ್ಯವಸ್ಥೆ ಇದ್ದು,ಪ್ರಸ್ತುತ 150 ಆಮ್ಲಜನಕ ಯುಕ್ತ ಹಾಸಿಗೆಗಳು ಮತ್ತು ಮಕ್ಕಳ ತೀವ್ರ ನಿಗಾ ಘಟಕವು ಮಕ್ಕಳು ಮತ್ತು ನವಜಾತ ಶಿಶುಗಳ ಆರೋಗ್ಯ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಸಿದ್ದವಾಗಿದೆ ಹಾಗೂ ಕೋವಿಡ್-19ರ ಸಂಭಾವ್ಯ ಮೂರನೇ ಅಲೆಯ ಹೊಡೆತವನ್ನು ಎದುರಿಸಲು ಸಶಕ್ತವಾಗಿದೆ ಎಂದು ತಿಳಿಸಿದರು. ವೇದಿಕೆ ಕಾರ್ಯಕ್ರಮದಲ್ಲಿ ಇತ್ತೀಚಿಗೆ ಸಂಸ್ಥೆಯ ಆಸ್ಪತ್ರೆಯಲ್ಲಿ ಬಾಲ ಹೃದಯ ಯಶಸ್ವಿ ಶಸ್ತ್ರಚಿಕಿತ್ಸೆ ಪಡೆದ ಪುಟಾಣಿಗಳಿಗೆ ರಾಜ್ಯದ ಮುಖ್ಯ ಮಂತ್ರಿಗಳು ಸದ್ಗರು ಶ್ರೀ ಮಧುಸೂದನ ಸಾಯಿ ರವರ ಸನ್ನಿಧಿಯಲ್ಲಿ ಬದುಕಿನ ಉಡುಗೊರೆ ನೀಡಿದರು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಸತ್ಯಸಾಯಿ ಸರಳಾ ಸ್ಮಾರಕ ಆಸ್ಪತ್ರೆಯ ವಿಸ್ತೃತ ವಿಭಾಗದ ಶ್ರೀ ಸತ್ಯಸಾಯಿ ರಾಜೇಶ್ವರಿ ಬ್ಲಾಕ್ ಗೆ ಭೂಮಿ ಪೂಜೆಯನ್ನು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಮುಖ್ಯ ಮಂತ್ರಿಗಳೊಂದಿಗೆ ನೆರವೇರಿಸಿದರು.
ಸದ್ಗರು ಶ್ರೀ ಮಧುಸೂದನ ಸಾಯಿ ರವರ ಸಾನಿದ್ಯದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರು ವಹಿಸಿದ್ದರು.
ಚಿಕ್ಕಬಳ್ಳಾಪುರ ಕ್ಷೇತ್ರದ ಸಂಸದ ಬಿ.ಎನ್.ಬಚ್ಚೇಗೌಡ, ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಚಿಕ್ಕಬಳ್ಳಾಪುರ ನಗರಸಭಾ ಅಧ್ಯಕ್ಷ ಆನಂದ ರೆಡ್ಡಿ (ಬಾಬು), ಶ್ರೀ ಸತ್ಯಸಾಯಿ ಮಾನವ ಅಭ್ಯುಧಯ ವಿಶ್ವವಿದ್ಯಾಲಯ ಕುಲಾಧಿಪತಿಗಳಾದ ಬಿ.ಎನ್. ನರಸಿಂಹಮೂರ್ತಿ, ಶ್ರೀ ಸತ್ಯಸಾಯಿ ಆರೋಗ್ಯ ಮತ್ತು ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಿ.ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಫೆಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..