ದೊಡ್ಡಬಳ್ಳಾಪುರ: ಕೋವಿಡ್ ಹಿನ್ನೆಲೆಯಲ್ಲಿ ಈ ವರ್ಷವೂ ಸಹ ಗಣೇಶೋತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಈ ಬಾರಿ ತಾಲೂಕಿನ 206 ಕಡೆಗಳಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡಲಾಗಿದೆ.
ದೊಡ್ಡಬಳ್ಳಾಪುರ ನಗರಸಭೆಯಲ್ಲಿ 40, ಕಸಬಾ ಮತ್ತು ತೂಬಗೆರೆ ವ್ಯಾಪ್ತಿಯಲ್ಲಿ 96, ದೊಡ್ಡಬೆಳವಂಗಲ ಮತ್ತು ಮಧುರೆ ವ್ಯಾಪ್ತಿಯಲ್ಲಿ 50 ಹಾಗೂ ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 20 ಸೇರಿದಂತೆ ಒಟ್ಟು 206 ಗಣೇಶೋತ್ಸವಗಳಿಗೆ ಅನುಮತಿ ನೀಡಲಾಗಿದೆ.
ಕಳೆದ ವರ್ಷಕ್ಕಿಂತ ಈ ವರ್ಷ ಗಣೇಶೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅನುಮತಿ ನೀಡಲಾಗಿದೆ ಎನ್ನಲಾಗುತ್ತಿದೆ.
ಗಣೇಶ ಪ್ರತಿಷ್ಠಾಪನೆ ಮತ್ತು ವಿಸರ್ಜನೆಗಾಗಿ ಪೊಲೀಸ್ ಇಲಾಖೆ, ಬೆಸ್ಕಾಂ, ತಾಲೂಕು ಆಡಳಿತ, ಅಗ್ನಿಶಾಮಕದಳ ಹಾಗೂ ನಗರಸಭೆಯಿಂದಯ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿರುವುದರಿಂದ ಏಕಾಗವಾಕ್ಷಿ ಯೋಜನೆಯನ್ನು ಅಳವಡಿಸಿ, ಈ ಎಲ್ಲಾ ಇಲಾಖೆ ಅನುಮತಿ ನಗರದ ತಾಲೂಕು ಕಚೇರಿಯ ಒಂದೇ ಸ್ಥಳದಲ್ಲಿ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ತಿಳಿಸಿದ್ದಾರೆ.
ಈ ಬಾರಿಯೂ ಡಿ.ಕ್ರಾಸ್ ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯದ ಸಮೀಪದ ನಾಗರಕೆರೆ ಅಂಚಿನಲ್ಲಿ ಸಾಮೂಹಿಕ ವಿಸರ್ಜನೆಗಾಗಿ ನಗರಸಭೆಯಿಂದ ವಿಶೇಷ ಹೊಂಡದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ನಗರಸಭೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಜರಿದ್ದು, ಗಣೇಶ ಮೂರ್ತಿ ವಿಸರ್ಜನೆ ಮಾಡಲು ಸಹಕರಿಸಲಿದ್ದಾರೆ.
ಇದರೊಂದಿಗೆ ಮೂರು ಡ್ರಮ್‍ಗಳನ್ನು ಒಳಗೊಂಡ ನಾಲ್ಕು ಟ್ರ್ಯಾಕ್ಟರ್‍ಗಳು ನಗರದ ವಿವಿದೆಡೆ ಸಂಚರಿಸಲಿದ್ದು, ಮನೆಯಲ್ಲಿ ಪ್ರತಿಷ್ಟಾಪಿಸುವ ಗಣೇಶ ಮೂರ್ತಿಗಳನ್ನು ಸಂಚಾರಿ ವಾಹನಗಳಲ್ಲಿಯೇ ವಿಸರ್ಜನೆ ಮಾಡಬಹುದಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..