ದೊಡ್ಡಬಳ್ಳಾಪುರ: ಕೋವಿಡ್ ಮೂರನೇ ಅಲೆಯ ಆತಂಕದ ನಡುವೆಯೇ, ತಾಲ್ಲೂಕಿನ ಮಕ್ಕಳಲ್ಲಿ ವೈರಾಣು ಜ್ವರ ಹೆಚ್ಚುತ್ತಿದ್ದು ಪೋಷಕರಿಗೆ ಆತಂಕಕ್ಕೆ ಕಾರಣವಾಗಿದೆ. ಆದರೆ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಜ್ವರವು ಕೋವಿಡ್ ಮೂರನೇ ಅಲೆಯ ಲಕ್ಷಣವಲ್ಲ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ಮಕ್ಕಳ ತಜ್ಞರು ಸ್ಪಷ್ಟಪಡಿಸಿದ್ದಾರೆ.
ತಾಲ್ಲೂಕಿನ ಸರ್ಕಾರಿ, ಖಾಸಗಿ ಆಸ್ಪತ್ರೆ ಸೇರಿದಂತೆ ಮಕ್ಕಳ ತಜ್ಞರ ಆಸ್ಪತ್ರೆಗಳಿಗೆ ನಿತ್ಯವೂ ನೂರಾರು ಪೋಷಕರು ವೈರಾಣು ಜ್ವರದಿಂದ ಬಳಲುತ್ತಿರುವ ಮಕ್ಕಳನ್ನು ಅತಂಕದಿಂದ ಕರೆತಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ.
ನವಜಾತ ಶಿಶುಗಳಿಂದ ಹಿಡಿದು ಐದು ವರ್ಷದ ಮಕ್ಕಳಲಿ ವೈರಾಣು ಜ್ವರ ಕಾಣಿಸಿಕೊಳ್ಳುತ್ತಿದೆ. ಮೊದಲಿಗೆ ಜ್ವರ, ಶೀತ, ನೆಗಡಿ ಮತ್ತು ಕೆಮ್ಮಿನಿಂದ ಪ್ರಾರಂಭವಾಗುವ ವೈರಾಣು ಜ್ವರ ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ನ್ಯುಮೋನಿಯಾಗೆ ಪರಿವರ್ತನೆಯಾಗುತ್ತಿದೆ. ಮಕ್ಕಳಲ್ಲಿ ಉಸಿರಾಟದ ತೊಂದರೆ, ರಕ್ತದಲ್ಲಿ ಆಮ್ಲಜನಕದ ಕೊರತೆ ಕಂಡು ಬಂದು ಚಿಂತಾಜನಕ ಸ್ಥಿತಿ ತಲುಪಿ ಪ್ರಾಣಕ್ಕೆ ಅಪಾಯವಾಗುವ ಸಂದರ್ಭಗಳು ಬರಬಹುದು. ಆದ್ದರಿಂದ ರೋಗದ ಲಕ್ಷಣಗಳು ಕಂಡು ಬಂದ ತಕ್ಷಣ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಇನ್ನೂ ನಗರದ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿರುವ ಮೇಕ್ ಶಿಫ್ಟ್ ಆಸ್ಪತ್ರೆಯಲ್ಲಿ ಮಕ್ಕಳನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ದೊಡ್ಡಬಳ್ಳಾಪುರ ತಾಲ್ಲೂಕು ತಹಶೀಲ್ದಾರ್ ಶಿವರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ.ಪರಮೇಶ್ವರ, ಆಡಳಿತಾಧಿಕಾರಿ ಡಾ.ರಮೇಶ್ ಸೇರಿದಂತೆ ಆಸ್ಪತ್ರೆಯ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..