ದೊಡ್ಡಬಳ್ಳಾಪುರ: ಪೌರಕಾರ್ಮಿಕರಿಗೆ ಸರ್ಕಾರದಿಂದ ಹಿಂದೆಂದಿಗಿಂತ ಹೆಚ್ಚಿನ ಸೌಲಭ್ಯಗಳು ಈಗ ದೊರಕುತ್ತಿದ್ದು, ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಪೌರ ಕಾರ್ಮಿಕರು ನಿಷ್ಟೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಜನರ ಪ್ರೀತಿ ವಿಶ್ವಾಸ ಗಳಿಸಬೇಕಿದೆ ಎಂದು ನಗರಸಭೆ ಪೌರಾಯುಕ್ತ ರಮೇಶ್ ಎಸ್.ಸುಣಗಾರ್ ಕರೆ ನೀಡಿದರು.
ನಗರದ ಪುರಭವನದಲ್ಲಿ ನಗರಸಭೆ ವತಿಯಿಂದ ನಡೆದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದಶಕಗಳ ಹಿಂದೆ ಪೌರಕಾರ್ಮಿಕರಿಗೆ ವೇತನ ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಎದುರಾಗಿತ್ತು. ಈ ಹಿಂದೆ ಪೌರ ಕಾರ್ಮಿಕರಲ್ಲಿ ಸಂಘಟನೆಯ ಕೊರತೆಯಿತ್ತು. ಆದರೆ ಈಗ ಸಂಘಟನಾತ್ಮಕವಾಗಿ ತಮಗೆ ಬೇಕಾದ ಸೌಲಭ್ಯಗಳನ್ನು ಪಡೆದು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅವಕಾಶಗಳಿವೆ. ಕೋವಿಡ್ ಸಂದರ್ಭದಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದ್ದಾಗಿದ್ದು, ಹೆಚ್ಚಿನ ಜವಾಬ್ದಾರಿ ಹಾಗೂ ಕೆಲಸ ಹೆಚ್ಚು ಮಾಡುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಪೌರ ಕಾರ್ಮಿಕರು ಹಿರಿಯ ಅಕಾರಿಗಳನ್ನು ಮೆಚ್ಚಿಸಲು ಕಾರ್ಯ ನಿರ್ವಹಿಸದೇ ತಮ್ಮ ಆತ್ಮ ಸಾಕ್ಷಿಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಅದೇ ದೊಡ್ಡ ರಾಷ್ಟ್ರ ಪ್ರಶಸ್ತಿ ನೀಡಿದಂತೆ ಎಂದರು.
ಪೌರ ಸೇವಾ ನೌಕರರ ಸೇವಾ ಸಂಘದ ನಗರ ಶಾಖೆ ಅಧ್ಯಕ್ಷ ತಿಪ್ಪಣ್ಣ ಮಾತನಾಡಿ, ಶೋಷಿತರಿಗೆ ಸಮಾನತೆಯ ಹಕ್ಕುಗಳನ್ನು ನೀಡಿದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ನಾವು ಸ್ಮರಿಸಬೇಕಿದೆ.ಸ್ವಚ್ಛತೆಯಿಂದ ಜನರ ಆರೋಗ್ಯ ಸುಧಾರಿಸುತ್ತದೆ. ಅಂತಹ ಸ್ವಚ್ಛತೆಯ ಕಾರ್ಯ ಮಾಡುತ್ತಿರುವ ಪೌರಕಾರ್ಮಿಕರಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳು ಹಾಗೂ ಪೌರ ಕಾರ್ಮಿಕರ ದಿನಾಚರಣೆ ಅಭಿನಂದನೀಯ. ಆದರೆ ಪೌರ ಕಾರ್ಮಿಕರು ನಗರ ಸ್ವಚ್ಛತಾ ಕಾರ್ಯದಲ್ಲಿ ತೊಡಗುವಾಗ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಹಾಕುವ ಮೂಲಕ ನಮ್ಮ ಪ್ರಾಮಾಣಿಕ ಕಾರ್ಯಕ್ಕೆ ಸ್ಪಂಸದಿರುವುದು ನೋವಿನ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ವ್ಯವಸ್ಥಾಪಕ ಮುಮ್ತಾಜ್ ಪಾಷ, ಕಂದಾಯ ಅಧಿಕಾರಿ ರವೀಂದ್ರ ಜಾಯಗೊಂಡೆ, ಕಂದಾಯ ನಿರೀಕ್ಷಕ ನಾರಾಯಣ್, ಸಮುದಾಯ ಸಂಘಟನಾಕಾರಿ ಪ್ರಹ್ಲಾದ್, ಪೌರ ಕಾರ್ಮಿಕರ ಸಂಘದ ಜಿಲ್ಲಾ ಖಜಾಂಚಿ ವೆಂಕಟೇಶ ಬಾಬು, ತಾಲೂಕು ಕಾರ್ಯದರ್ಶಿ ಮಂಜುನಾಥ್, ಹಿರಿಯ ಆರೋಗ್ಯ ನಿರೀಕ್ಷಕರಾದ ರೂಪಾ ಸೇರಿದಂತೆ ನಗರಸಭೆ ಅಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಸಮಾರಂಭಕ್ಕೂ ಮುನ್ನ ನಗರಸಭೆ ಮುಂಭಾಗದಿಂದ ಪುರಭವನದವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ಪೌರಕಾರ್ಮಿಕರ ಮೆರವಣಿಗೆ ನಡೆಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……