ದೊಡ್ಡಬಳ್ಳಾಪುರ: ಶುಕ್ರವಾರ ರಾತ್ರಿ ನಿಧನರಾದ ರಾಜ್ಯದ ಹಿಂದುಳಿದ ವರ್ಗಗಳ ನೇತಾರ, ಹಿರಿಯ ಕಾಂಗ್ರೆಸ್ಸಿಗ, ಕೇಂದ್ರದ ಮಾಜಿ ಮಂತ್ರಿ ಆರ್.ಎಲ್.ಜಾಲಪ್ಪ(96) ಅವರ ಸ್ವಗ್ರಾಮ ತೂಬಗೆರೆಯ ಮನೆಯಲ್ಲಿ ಅಂತಿಮ ನಮಕ್ಕೆ ಅವಕಾಶ ಕಲ್ಪಿಸಲಾಗಿದೆ.
ಶಾಸಕರಾದ ಟಿ.ವೆಂಕಟರಮಣಯ್ಯ, ನಿಸರ್ಗ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಎಸ್.ರವಿ, ಎಪಿಎಂಸಿ ಅಧ್ಯಕ್ಷ ಎನ್.ವಿಶ್ವನಾಥ್, ಮುಖಂಡರಾದ ಎಚ್.ಅಪ್ಪಯ್ಯಣ್ಣ, ತೆಂಗು ನಾರು ಮಂಡಳಿ ಅದ್ಯಕ್ಷ ವೆಂಕಟೇಶ್ ಬಾಬು ಆದಿಯಾಗಿ ವಿವಿಧ ಪಕ್ಷದ, ಸಂಘಟನೆಗಳು ಮುಖಂಡರು ಜಾಲಪ್ಪ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ಹಿಂದುಳಿದ ವರ್ಗಗಳ ಹರಿಕಾರ, ನುಡಿದಂತೆ ನಡೆದ ರಾಜಕಾರಣಿ ಅಗಲಿಕೆ ದೇಶ, ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಹಲವು ಜವಬ್ದಾರಿ ನಿಭಾಯಿಸಿ ಜನಪರ ಕಾರ್ಯನಿರ್ವಹಿಸಿದ ಕೀರ್ತಿ ಜಾಲಪ್ಪನವರದ್ದು, ಅಹಿಂದಾ ವರ್ಗಕ್ಕೆ ಹೆಚ್ಚಿನ ಸೌಲಭ್ಯ ದೊರಕಿಸಿ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಅವರ ರಾಜಕೀಯ ಜೀವನದ ಹಾದಿಯಲ್ಲಿನ ತತ್ವವನ್ನು ಅಳವಡಿಸಿಕೊಳ್ಳುತ್ತೇವೆ ಎಂದರು.
ತೂಬಗೆರೆಯಲ್ಲಿ ನೀರವ ಮೌನ: ಜಾಲಪ್ಪರ ಅಗಲಿಕೆಯಿಂದ ತೂಬಗೆರೆ ಗ್ರಾಮದಲ್ಲಿ ನೀರವ ಮೌನ ಅವರಿಸಿದ್ದು, ಗ್ರಾಮದಲ್ಲಿ ಮೆರವಣಿಗೆ ನಡೆಸಲು ಸಿದ್ದತೆ ನಡೆಸಲಾಗುತ್ತಿದೆ.ನಂತರ ದೊಡ್ಡಬಳ್ಳಾಪುರಕ್ಕೆ ಬರಲಿದ್ದು, ಟಿ.ಬಿ ವೃತ್ತದಿಂದ ಮೆರವಣಿಗೆ ನಡೆಸುವ ಸಿದ್ದತೆ ನಡೆದಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….