ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು, ಫ್ಯಾಕ್ಟರಿ ಮತ್ತು ಬಾಯ್ಲರ್ಸ್ ಇಲಾಖೆ ಹಾಗೂ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್(ಐಓಸಿಎಲ್) ಸಹಯೋಗದೊಂದಿಗೆ ಹೊಸಕೋಟೆ ತಾಲ್ಲೂಕಿನ ದೇವನಗೊಂದಿ ಗ್ರಾಮದ ಬಳಿಯಿರುವ ಐಓಸಿಎಲ್‌ನ ಪೆಟ್ರೋಲಿಯಂ ಮತ್ತು ಎಲ್‌ಪಿಜಿ ಸಂಗ್ರಹಣಾ ಘಟಕದಲ್ಲಿ ವಿಪತ್ತು ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಅಣುಕು ಪ್ರದರ್ಶನವನ್ನು ಡಿಸೆಂಬರ್ 24ರ ರಾಸಾಯನಿಕ ವಸ್ತುಗಳಿಂದಾಗುವ ಹಾನಿ ತಡೆಯುವ ದಿನಾಚರಣೆ(ಕೆಮಿಕಲ್ ಪ್ರಿವೆನ್ಷನ್ ಡೇ) ಅಂಗವಾಗಿ ಹಮ್ಮಿಕೊಳ್ಳಲಾಗುತ್ತಿದ್ದು ವಿವಿಧ ಇಲಾಖೆಗಳ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಶ್ರೀನಿವಾಸ್ ಅವರು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ವಿಪತ್ತು ನಿರ್ವಹಣೆ ಕುರಿತ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ಅವರು ಮಾತನಾಡಿದರು.
ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ದೇವಗೊಂದಿ ಗ್ರಾಮದ ಬಳಿ ಐಓಸಿಎಲ್‌ನ ಪೆಟ್ರೋಲಿಯಂ ಹಾಗೂ ಎಲ್‌ಪಿಜಿ ಸಂಗ್ರಹಣಾ ಘಟಕವಿದ್ದು ನೂರಾರು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಸಂಗ್ರಹಣಾ ಘಟಕಗಳಲ್ಲಿ ಪೆಟ್ರೋಲಿಯಂ ದ್ರಾವಣ ಹಾಗೂ ಎಲ್‌ಪಿಜಿ ಅನಿಲ ಸೋರಿಕೆಯಾಗಿ ಬೆಂಕಿ ಅಥವಾ ಇನ್ನಿತರ ಅವಘಡ ಸಂಭವಿಸಿದರೆ, ಅಂತಹ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಹೇಗೆ ಸನ್ನದ್ಧರಾಗಬೇಕು, ಸಂಬಂಧಿಸಿದ ಇಲಾಖೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ಕಾರ್ಖಾನೆ ಸಿಬ್ಬಂದಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಅರಿವು ಮೂಡಿಸಲು ವಿಪತ್ತು ನಿರ್ವಹಣೆಯ ಅಣುಕು ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಆರೋಗ್ಯ, ಪೊಲೀಸ್, ಅಗ್ನಿ ಶಾಮಕ, ಕಂದಾಯ, ಜಿಲ್ಲಾ ಪಂಚಾಯಿತಿ, ಪಶು ಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಅಗತ್ಯ ತುರ್ತು ಕ್ರಮ ಕೈಗೊಂಡು ಅಣುಕು ಪ್ರದರ್ಶನ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕೆಂದು ಹೇಳಿದರು.
ಬೆಂಗಳೂರು ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ವಿಜಯಾ.ಈ.ರವಿಕುಮಾರ, ಫ್ಯಾಕ್ಟರಿ ಮತ್ತು ಬಾಯ್ಲರ್ಸ್ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ನರಸಿಂಹಮೂರ್ತಿ, ಜಿಲ್ಲಾ ವಿಪತ್ತು ನಿರ್ವಹಣಾ ತಜ್ಞೆ ವಿನುತಾ, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್(ಐಓಸಿಎಲ್)ನ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….