ಧಾರವಾಡ (ಸೆ.16): ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ, ಸಮಾನತೆ ಹಾಗೂ ಭಾತೃತ್ವ ದೊರೆಯುವಂತೆ ಮಾಡಿದ್ದಾರೆ. ಪ್ರತಿಯೊಬ್ಬರೂ ದೇಶದ ಏಕತೆಯನ್ನು ಕಾಪಾಡಿಕೊಂಡು ಹೋಗಬೇಕು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಹೇಳಿದರು.
ಭಾನುವಾರ ಕರ್ನಾಟಕ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೃಹತ್ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವವು ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯಕ್ಕಾಗಿ ನಮ್ಮ ಅತ್ಯುನ್ನತ ಆಕಾಂಕ್ಷೆಗಳನ್ನು ಸಾಕಾರಗೊಳಿಸುವ ಶಕ್ತಿಯುತ ಮತ್ತು ಕ್ರಿಯಾತ್ಮಕ ಶಕ್ತಿಯಾಗಿದೆ. ಭಾರತ ದೇಶವು ಅತ್ಯಂತ ಭವ್ಯ, ಶಕ್ತಿಶಾಲಿ ಮತ್ತು ಯಶಸ್ವಿ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ ದೇಶವಾಗಿದೆ ಎಂದು ಸಚಿವ ಸಂತೋಷ ಲಾಡ ಅವರು ತಿಳಿಸಿದರು.
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಇಂದು ಬೀದರ್ ನಿಂದ ಚಾಮರಾಜನಗರದವರೆಗೆ ಬೃಹತ್ ಮಾನವ ಸರಪಳಿ ನಿರ್ಮಾಣ ಮಾಡಲಾಗುತ್ತಿದೆ. ಆ ಮೂಲಕ ವಿಶಿಷ್ಟ ದಾಖಲೆಯನ್ನು ನಿರ್ಮಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯಲ್ಲಿ 3.5 ಲಕ್ಷ ಜನರು ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಇಡೀ ರಾಜ್ಯದಲ್ಲೇ ಜಿಲ್ಲೆಯು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಈ ಬೃಹತ್ ಮಾನವ ಸರಪಳಿ ನಿರ್ಮಾಣದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಸಾಕ್ಷಿಯಾದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 2007ರಲ್ಲಿ ಜರುಗಿದ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸೆಪ್ಟೆಂಬರ್ 15ರ ದಿನವನ್ನು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವೆಂದು ಘೋಷಣೆ ಮಾಡಲಾಗಿದೆ. ವಿಶ್ವಾದ್ಯಂತ ಪ್ರಜಾಪ್ರಭಯತ್ವದ ಮೌಲ್ಯಗಳು, ಆದರ್ಶಗಳು, ತತ್ವಗಳು ಮತ್ತು ಅದರ ಅನ್ವಯಿಕತೆಯನ್ನು ಒಳಗೊಂಡ ಬೃಹತ ನಿರ್ಣಯ ಹೊರಡಿಸಿದ ಸೆಪ್ಟೆಂಬರ 15 ಐತಿಹಾಸಿಕ ದಿನವಾಗಿದೆ. ಪ್ರಜಾಪ್ರಭುತ್ವದ ಮೂಲಭೂತ ಹಕ್ಕು ಮತ್ತು ಸಾರ್ವತ್ರಿಕ ಮೌಲ್ಯವಾಗಿದೆ. ಪ್ರಜಾಪ್ರಭುತ್ವ ರಕ್ಷಿಸುವುದು, ಅದರ ಮೌಲ್ಯಗಳನ್ನು ಉತ್ತೇಜಿಸಿವುದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಉದ್ದೇಶವಾಗಿದೆ ಅವರು ತಿಳಿಸಿದರು.
ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ವರ್ಷ ಸರ್ಕಾರದಿಂದ ವಿನೂತನ ರೀತಿಯಲ್ಲಿ ಆಚರಣೆ ಮಾಡುವ ಹಿನ್ನೆಲೆಯಲ್ಲಿ ಬೃಹತ್ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ನೋಂದಣಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಪ್ರಜಾಪ್ರಭುತ್ವವು ಸಮಾನತೆ, ಸ್ವಾತಂತ್ರ್ಯ ಮತ್ತು ಭಾತೃತ್ವ ವಿಷಯಗಳ ಮೇಲೆ ನಿಂತಿದೆ. ಸಂವಿದಾನವನ್ನು ಪ್ರಮಾಣಿಕರಿಸಿದೆ ಈ ಮೂರು ವಿಷಯಗಳು ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಲು ಸಹಕಾರಿ ಆಗಿವೆ. ತೇಗೂರಿನಿಂದ ಮಾವಿನಕೊಪ್ಪದವರೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ಅತಿಹೆಚ್ಚು ನೋಂದಣಿ ಮಾಡಿದ್ದ ಧಾರವಾಡ ಜಿಲ್ಲೆಯು ಪ್ರಥಮ ಸ್ಥಾನ ಪಡೆದಿದ್ದರಿಂದ ಸಂಭ್ರಮಿಸಲಾಯಿತು.
ಕಾರ್ಯಕ್ರಮದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ, ಡಾ.ಬಾಬು ಜಗಜೀವನ್ ರಾಂ ಅವರ ಭಾವಚಿತ್ರಗಳಿಗೆ ಗಣ್ಯರು ಪುಷ್ಪ ನಮನ ಅರ್ಪಿಸಿದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಸಂವಿಧಾನ ಪೀಠಿಕೆಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಹಾಗೂ ಶಾಸಕರಾದ ಪ್ರಸಾದ ಅಬ್ಬಯ್ಯ, ಶಾಸಕರಾದ ಎನ್.ಎಚ್.ಕೋನರೆಡ್ಡಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾಕೀರ್ ಸನದಿ, ಮಾಜಿ ಸಂಸದರಾದ ಐ.ಜಿ.ಸನದಿ, ಹುಬ್ಬಳ್ಳಿ ಧಾರವಾಡ ಮಹಾನಗರದ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ. ಈಶ್ವರ ಉಳ್ಳಾಗಡ್ಡಿ, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ.ಗುಡಸಿ, ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ,ಎಲ್. ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ, ಡಿಡಿಪಿಐ ಎಸ್.ಎಸ್.ಕೆಳದಿಮಠ ಸೇರಿದಂತೆ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು, ವಿವಿಧ ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸ್ವಾಗತಿಸಿದರು.
ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ಅಭಿಪ್ರಾಯಗಳು;
ಪೃಥ್ವಿ ಕೆ. (ಬಾಸೆಲ್ ಮಿಷನ್) ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಖುಷಿ ನೀಡಿದೆ. ಎಲ್ಲರೂ ಪ್ರಜಾಪ್ರಭುತ್ವವನ್ನು ಕಾಪಾಡಿಕೊಂಡು ಹೋಗಬೇಕಿದೆ.
ಪ್ರಶಾಂತ ಹಾಸಟ್ಟಿ (ಕರ್ನಾಟಕ ಮಹಾವಿದ್ಯಾಲಯ); ಪ್ರಜಾಪ್ರಭುತ್ವ ದಿನದ ಅಂಗವಾಗಿ ಆಯೋಜಿಸಿದ್ದ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮದಲ್ಲಿ ನಾನು ಸಹ ಭಾಗಿಯಾಗಿ ಯಶಸ್ವಿಗೊಳಿಸಿದ ತೃಪ್ತಿ ನನಗಿದೆ. ದೇಶದ ಸಂವಿಧಾನ ನಮಗೆಲ್ಲವನ್ನು ನೀಡಿದೆ.
ಮಂಜುನಾಥ (ಆರ್ ಎಲ್ ಎಸ್); ಇಂದು ರಾಜ್ಯದಾದ್ಯಂತ ಬೃಹತ್ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಭಾಗವಾಗಿದ್ದೇನೆ. ಇದರಲ್ಲಿ ನನ್ನ ಗೆಳೆಯರೊಂದಿಗೆ ಭಾಗವಹಿಸಿರುವುದು ಸಂತೋಷ ತಂದಿದೆ.
ದಿನೇಶ ನಾಯ್ಕ (ಕೆ.ಇ.ಬೊರ್ಡ); ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಬೃಹತ್ ಮಾನವ ಸರಪಳಿ ನಿರ್ಮಾಣ ಮಾಡಲಾಗುತ್ತಿದೆ. ಬೃಹತ್ ಮಾನವ ಸರಪಳಿ ರಚಿಸುವ ಮೂಲಕ ಪ್ರಜಾಪ್ರಭುತ್ವದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಶೋಭಾ.ಎಂ(ಸರಕಾರಿ ಪ್ರೌಢಶಾಲೆ ಧಾರವಾಡ); ಪ್ರಜಾಪ್ರಭುತ್ವವನ್ನು ಬಲಿಷ್ಠಪಡಿಸಲು ಜಾಗೃತಿ ಕಾರ್ಯಕ್ರಮಗಳ ಅವಶ್ಯಕತೆಯಿದೆ. ಸರ್ಕಾರವು ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮವನ್ನು ಆಯೋಜಿಸಿ, ಜನರಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಅರಿವು ಮೂಡಿಸುತ್ತಿದೆ.
ಬೃಹತ್ ಮಾನವ ಸರಪಳಿ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರನಿಂದ ಚಾಮರಾಜನಗರದ ವರೆಗೆ ರಾಜ್ಯದ 31 ಜಿಲ್ಲೆಗಳನ್ನು ಒಳಗೊಂಡಿರುವ ಅತಿ ಉದ್ದದ ಮಾನವ ಸರಪಳಿಯನ್ನು ಮಾಡಲಾಯಿತು ಜಿಲ್ಲೆಯ ಧಾರವಾಡ ತಾಲೂಕಿನ ತೇಗೂರದಿಂದ ಮಾವಿನಕೊಪ್ಪ ಗ್ರಾಮದ ವರಗೆ ಅಂದಾಜು 55 ಕಿ.ಮಿ ಉದ್ಧದ ಮಾನವ ಸರಪಳಿಯನ್ನು ನಿರ್ಮಿಸಲಾಗಿತ್ತು.
ಇದರಲ್ಲಿ ಪ್ರತಿ ಮೀಟರಗೆ ಒಬ್ಬರಂತೆ ಸುಮಾರು 60 ಸಾವಿರ ಜನ ಹಾಗೂ ರಾಷ್ಟ್ರೀಯ ಹೆದ್ದಾರಿ, ನಗರ ಪ್ರದೇಶದಲ್ಲಿ ಡಬಲ್ ಲೈನ್ ಮಾಡಲಾಗಿತ್ತು. ಇಂದಿನ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅಂದಾಜು 95 ಸಾವಿರಕ್ಕೂ ಹೆಚ್ಚು ಜನ ಪ್ರತ್ಯಕ್ಷವಾಗಿ ಭಾಗವಿಸಿ ಯಶಸ್ವಿಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ಮಾನವ ಸರಪಳಿಯನ್ನು ನಿರ್ಮಿಸುವದರ ಮೂಲಕ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮಹತ್ವ ಸಾರುವ ಸಂವಿಧಾನ ಪಿಠೀಕೆಯನ್ನು ಸಾಮೂಹಿಕವಾಗಿ ವಾಚಿಸಿದರು.
ವಿದ್ಯಾರ್ಥಿಗಳಿಂದ ಬೃಹತ್ ಭಾರತ ನಕ್ಷೆ ನಿರ್ಮಾಣ: ಕರ್ನಾಟಕ ಕಲಾ ಮಹಾವಿದ್ಯಾಲಯದ ಮೈದಾನದಲ್ಲಿ ಸುಮಾರು 2 ಸಾವಿರು ವಿದ್ಯಾರ್ಥಿಗಳು ಬೃಹತ್ ಮಾನವ ಸರಪಳಿ ಮೂಲಕ ಭಾರತ ನಕ್ಷೆಯನ್ನು ರಚಿಸಿದರು. ಭಾರತದ ನಕ್ಷೆಯಲ್ಲಿ ಕರ್ನಾಟಕ ರಾಜ್ಯದ ಚಿತ್ರಣವನ್ನು ಸಹ ಮೂಡಿಸಿದರು. ಅಲ್ಲದೇ ಮೈದಾನದಲ್ಲಿ 1 ಕಿ.ಮೀ. ಉದ್ದದ ಕರ್ನಾಟಕ ಸಂಕೇತವಾಗಿ ಹಳದಿ ಮತ್ತು ಕೆಂಪು ಬಣ್ಣದ ಬೃಹತ್ ಬಾವುಟವನ್ನು ಪ್ರದರ್ಶನ ಮಾಡಲಾಯಿತು. ಮೈದಾನದ ತುಂಬ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಕ್ಯಾಪ್‍ಗಳನ್ನು ಧರಿಸಿ, ಏಕತೆ ಸಾರಿದರು.
ವ್ಯವಸ್ಥಿತವಾಗಿ ನಿರ್ವಹಿಸಿದ ಅಲ್ಪೊಪಹಾರ ಉಪಹಾರ ವ್ಯವಸ್ಥೆ: ಬೃಹತ್ ಮಾನವ ಸರಪಳಿ ನಿರ್ಮಾಣ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಇಸ್ಕಾನ್ ಸಂಸ್ಥೆ ಮತ್ತು ಶ್ರೀ ಸಿದ್ಧಾರೂಢ ಮಠ ಟ್ರಸ್ಟ್‍ದಿಂದ ಅಲ್ಪೊಪಹಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಶುದ್ಧ ಕುಡಿಯುವ ನೀರಿನ ಕ್ಯಾನ್‍ಗಳನ್ನು ಒದಗಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಸುರಕ್ಷತೆಯ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ, ಅಂಬ್ಯೂಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಮೆರವಣಿಗೆಗೆ ಮೆರಗು ತಂದ ವೇಷಭೂಷಣ ಮತ್ತು ಕಲಾತಂಡಗಳು: ಇಲ್ಲಿನ ಜುಬ್ಲಿ ವೃತ್ತದಿಂದ ಕರ್ನಾಟಕ ಕಲಾ ಮಹಾವಿದ್ಯಾಲಯದ ಮೈದಾನದವರೆಗೆ ನಡೆದ ಮೆರವಣಿಗೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಬೆಳವಡಿ ಮಲ್ಲಮ್ಮ, ತಾಯಿ ಭುವನೇಶ್ವರಿ, ಕನಕದಾಸರು, ಭಗತ್ ಸಿಂಗ್ ಸೇರಿದಂತೆ ವಿವಿಧ ಮಹಾನ ಪುರುಷರ ವೇಷಭೂಷಣಗಳಲ್ಲಿ ಕಾಣಿಸಿಕೊಂಡು ಮೆರವಣಿಗೆಗೆ ಮೆರಗು ತಂದರು.
ದೇಶದ 30 ರಾಜ್ಯಗಳಲ್ಲಿನ ಸಾಂಪ್ರಾದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟು ವಿದ್ಯಾರ್ಥಿಗಳು ಮಿಂಚಿದ್ದರು. ಅಲ್ಲದೇ ಡೊಳ್ಳು ಕುಣಿತ, ಜಗ್ಗಲಗಿ, ಜಾಂಜ್ ಮೇಳ, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಮಹಿಳೆಯರ ಕುಂಭಮೇಳ ಮೆರವಣಿಗೆಗೆ ಮತ್ತಷ್ಟು ಮೆರಗು ತಂದಿತ್ತು. ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರು ಹಾಗೂ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಕಾಲ್ನಡಿಗೆ ಮೂಲಕ ಜುಬ್ಲಿ ವೃತ್ತದಿಂದ ಕೆಸಿಡಿವರೆಗೆ ಭಾಗವಹಿಸಿ ಗೌರವ ಸೂಚಿಸಿದರು.
ಪ್ರಜಾಪ್ರಭುತ್ವ ದಿನದ ನೆನಪಿಗೆ 4180 ಸಸಿಗಳು: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಸವಿನೆನಪಿಗಾಗಿ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಿಭಾಗದಿಂದ 4180 ವಿವಿಧ ಬಗೆಯ ಸಸಿಗಳನ್ನು ನೆಡುವ ಕಾರ್ಯಕ್ರಮ ಜರುಗಿಸಲಾಯಿತು. ಕರ್ನಾಟಕ ಮಹಾವಿದ್ಯಾಲಯದ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಸಾಂಕೇತಿಕವಾಗಿ ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಿದರು.
ತಪ್ಪಸ್ಸಿ, ಬಸವನಪಾದ, ಶಿವನಿ, ನೇರಳೆ, ಹೊಂಗೆ, ಹೊಳಮತ್ತಿ, ಮಹಾಗಣಿ, ಬೆಟ್ಟದ ನೆಲ್ಲಿ ಮುಂತಾದ ಸಸಿಗಳನ್ನು ಇಂದಿನ ಕಾರ್ಯಕ್ರಮದ ಅಂಗವಾಗಿ ನೆಡಲಾಯಿತು.
ಕೊಟೂರದಿಂದ ದುಬ್ಬನಮರಡಿ ಮತ್ತು ಬೋಗುರ ಕ್ರಾಸದಿಂದ ಹಳೆ ತೇಗೂರ, ಶಿಂಗನಹಳ್ಳಿ ಕ್ರಾಸದಿಂದ ಆದಿಚುಂಚನಗಿರಿ ಮಠ, ಹೊಸಟ್ಟಿಯಿಂದ ಹೊಸಟ್ಟಿ ಕ್ರಾಸ್‍ವರೆಗೆ ರಸ್ತೆಯ ಬದಿಗಳಲ್ಲಿ ಮತ್ತು ಸಲಕಿನಕೊಪ್ಪ, ಬಾಡ್ ಗ್ರಾಮಗಳಲ್ಲಿನ ಸರ್ಕಾರಿ ಗೋಮಾಳ ಜಮೀನಗಳಲ್ಲಿ ಸಸಿಗಳನ್ನು ನೆಡಲಾಯಿತು.
ಸುಗಮ ಸಂಚಾರಕ್ಕೆ ವ್ಯವಸ್ಥಿತ ಸಾರಿಗೆ: ಇಂದಿನ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಬೃಹತ್ ಮಾನವ ಸರಪಳಿ ನಿರ್ಮಾಣ ನಿರ್ಮಿಸುವ ಕಾರ್ಯಕ್ಕೆ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ಸರ್ಕಾರಿ ನೌಕರರಿಗೆ ಅನುಕೂಲವಾಗಲು ಮತ್ತು ಸುಗಮ ಸಂಚಾರಕ್ಕೆ ಜಿಲ್ಲಾಡಳಿತದಿಂದ ಸುಗಮ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲೆಯ ವಿವಿಧ ಶಾಲೆ ಕಾಲೇಜು, ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳನ್ನು, ಶಿಕ್ಷಕರನ್ನು ಮತ್ತು ಸಿಬ್ಬಂದಿಗಳನ್ನು ಕರೆತರಲು ತಮ್ಮ ಸಂಸ್ಥೆಗಳ ಮಿನಿ ಮತ್ತು ದೊಡ್ಡ ಬಸ್‍ಗಳು ಅಂದಾಜು 226 ಬಸ್‍ಗಳನ್ನು ಬಳಸಿದ್ದಾರೆ. ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 110 ಬಸ್‍ಗಳನ್ನು, 20 ಬೇಂದ್ರೆ ಸಾರಿಗೆ ಬಸ್‍ಗಳನ್ನು, ಟಾಟಾ ಮಾರ್ಕೋಪೋಲೊ ಕಂಪನಿಯಿಂದ 10 ಬಸ್‍ಗಳು, ವಿವಿಧ ಕಾರ್ಖಾನೆಗಳ 5 ಬಸ್‍ಗಳು ಮತ್ತು ವಿವಿಧ ತಾಲೂಕುಗಳಿಂದ ನೌಕರರನ್ನು, ಸಾರ್ವಜನಿಕರನ್ನು ಕರೆದುಕೊಂಡು 20 ಮಿನಿ ಬಸ್‍ಗಳು ಬಂದಿದ್ದವು.
ಒಟ್ಟಾರೆ ಇಂದಿನ ಕಾರ್ಯಕ್ರಮಕ್ಕೆ ಸಂಚಾರಕ್ಕಾಗಿ ವಿವಿಧ ರೀತಿಯ ಸುಮಾರು 391 ನಾಲ್ಕು ಚಕ್ರದ ವಾಹನಗಳು ಬಳಕೆ ಆಗಿವೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….