ದೊಡ್ಡಬಳ್ಳಾಪುರ: Doddaballapura ತಾಲೂಕು ಕುಸ್ತಿ ಸಂಘದಿಂದ ಬಯಲು ಬಸವಣ್ಣ ಕಡಲೇಕಾಯಿ ಪರಿಷೆ ಅಂಗವಾಗಿ ಬಸವಣ್ಣ ದೇವಾಲಯದ ಎದುರಿನ ಮೈದಾನದಲ್ಲಿ ನಡೆದ ಅಂತರ ಜಿಲ್ಲಾ ಹೊನಲು ಬೆಳಕಿನ ಕುಸ್ತಿ ಪಂದ್ಯಾವಳಿಗಳ ಬಹುಮಾನ ವಿತರಣಾ ಸಮಾರಂಭ ನಡೆಯಿತು.
ಸಾಂಪ್ರದಾಯಿಕ ಮಣ್ಣಿನ ಅಖಾಡ (ಮಟ್ಟಿ)ದಲ್ಲಿ ತಡರಾತ್ರಿವರೆಗೂ ನಡೆದ ಅಂತಿಮ ಹಣಾಹಣಿಯಲ್ಲಿ ಸೆಣಸಾಡುವ ಕುಸ್ತಿ ಪಟುಗಳ ಕಾದಾಟವನ್ನು ನೂರಾರು ಜನ ಕಣ್ತುಂಬಿಕೊಂಡು ಸಂತಸ ಪಟ್ಟರು. ಕುಸ್ತಿ ಪಟುಗಳ ಜಂಗಿ ಕುಸ್ತಿಯಾಟ ಮೈನವಿರೇಳಿಸಿತು.
ಕುಸ್ತಿಪಟುಗಳ ತೂಕಗಳ ಮಾನದಂಡಕ್ಕೆ ಅನುಸಾರವಾಗಿ, ದೊಡ್ಡಬಳ್ಳಾಪುರ ಯುವ ಕಿಶೋರ, ದೊಡ್ಡಬಳ್ಳಾಪುರ ಕಿಶೋರ, ದೊಡ್ಡಬಳ್ಳಾಪುರ ಕುಮಾರ, ದೊಡ್ಡಬಳ್ಳಾಪುರ ಕೇಸರಿ, ದೊಡ್ಡಬಳ್ಳಾಪುರ ಕಂಠೀರವ, ಹಾಗೂ ಮಹಿಳಾ ವಿಭಾಗದಲ್ಲಿ (60 ಕೆ.ಜಿ. ಒಳಗಿನ ವಿಭಾಗ) ದೊಡ್ಡಬಳ್ಳಾಪುರ ಕಿಶೋರಿ ವಿಭಾಗಗಳಲ್ಲಿ ಪಂದ್ಯಗಳು ನಡೆದವು.
ರಾಜ್ಯದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಿಂದ 105 ಕ್ರೀಡಾಪಟುಗಳು ಭಾಗವಹಿಸಿದ್ದರು.
ವಿಜೇತರಿಗೆ ಬೆಳ್ಳಿಗದೆ, ಟ್ರೋಫಿ, ನಗದು ಬಹುಮಾನ, ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ಪಾರಂಪರಿಕ ಕುಸ್ತಿ ಕಲೆ ಮರೆಯಾಗುತ್ತಿರುವ ಇಂತಹ ಸಂದರ್ಭದಲ್ಲಿ, ಕುಸ್ತಿಯನ್ನು ಉತ್ತೇಜಿಸಲು ಉತ್ತಮ ವೇದಿಕೆಗಳ ಅಗತ್ಯವಿದೆ. ದೇವನಹಳ್ಳಿಯಲ್ಲಿ 10 ವರ್ಷಗಳಿಗೊಮ್ಮೆ ಕುಸ್ತಿ ಪಂದ್ಯಾವಳಿಗಳು ನಡೆಯುತ್ತಿವೆ. ಇಂದಿನ ಪೀಳಿಗೆಗೆ ಕುಸ್ತಿ, ವ್ಯಾಯಾಮ ಹಾಗೂ ಗರುಡಿ ಮನೆಗಳ ಪರಿಚಯವಾಗಬೇಕು. ಕುಸ್ತಿ ಪಂದ್ಯಾವಳಿಗಳು ಪ್ರತಿ ವರ್ಷ ನಡೆಯಬೇಕು ಎಂದು ಸಲಹೆ ನೀಡಿದರು.
ಈ ವೇಳೆ ನಗರಸಭಾ ಸದಸ್ಯರಾದ ಶಿವ, ವೆಂಕಟೇಶ್ ಲಾವಣ್ಯ ವಿದ್ಯಾಸಂಸ್ಥೆಯ ಗೌರವ ಕಾರ್‍ಯದರ್ಶಿ ವಿಶ್ವಾಸ್ ಗೌಡ, ದೊಡ್ಡಬಳ್ಳಾಪುರ ತಾಲೂಕು ಕುಸ್ತಿ ಸಂಘದ ಗೌರವ ಅಧ್ಯಕ್ಷ ಪೈಲ್ವಾನ್ ಚೌಡಪ್ಪ, ಅಧ್ಯಕ್ಷ ಲಕ್ಷ್ಮೀನಾರಾಯಣ್, ಕಾರ್‍ಯದರ್ಶಿ ಶ್ರೀನಿವಾಸ್, ಸಂಘಟನಾ ಕಾರ್‍ಯದರ್ಶಿ ಗಣೇಶ್ ರಾಜಘಟ್ಟ, ಗೌ.ಅಧ್ಯಕ್ಷ ಪಿಳ್ಳಣ್ಣ, ಉಪಾಧ್ಯಕ್ಷ ಎಸ್.ಪದ್ಮನಾಭ್, ಖಜಾಂಚಿ ವಿಶ್ವನಾಥ್, ಸೇರಿದಂತೆ ನಗರಸಭಾ ಸದಸ್ಯರು, ಬಯಲು ಬಸವಣ್ಣ ಸೇವಾ ಸಮಿತಿ ಪದಾಕಾರಿಗಳು ಭಾಗವಹಿಸಿದ್ದರು.
ಬಹುಮಾನ ವಿಜೇತರ ವಿವರ
ದೊಡ್ಡಬಳ್ಳಾಪುರ ಯುವ ಕಿಶೋರಿ: ಶ್ರೀರಕ್ಷ (ಕನಕಪುರ).
ದೊಡ್ಡಬಳ್ಳಾಪುರ ಯುವ ಕಿಶೋರಅಭಿಷೇಕ್ (ಕನಕಪುರ).
ದೊಡ್ಡಬಳ್ಳಾಪುರ ಕಿಶೋರ: ಸೋಫಿಯಾನ್ (ಬೆಂಗಳೂರು).
ದೊಡ್ಡಬಳ್ಳಾಪುರ ಕುಮಾರ: ಅಂಬರೀಶ್ (ಮಂಡ್ಯ).
ದೊಡ್ಡಬಳ್ಳಾಪುರ ಕೇಸರಿ: ಧನಂಜಯ (ದೊಡ್ಡಬಳ್ಳಾಪುರ).
ದೊಡ್ಡಬಳ್ಳಾಪುರ ಕಂಠೀರವ: ಮಧುಸೂದನ್ (ದೇವನಹಳ್ಳಿ)