ದೆಹಲಿ: ಅದಾನಿ (adani) ಹಗರಣ ಸೇರಿದಂತೆ ಇನ್ನಿತರ ಗಂಭೀರ ವಿಷಯಗಳ ಕುರಿತು ಚರ್ಚಿಸಲು ಅವಕಾಶ ನಿರಾಕರಿಸಿದ ಕಾರಣದಿಂದಾಗಿ ಸಂಸತ್ತಿನ ಉಭಯ ಸದನಗಳನ್ನು ಗುರುವಾರವೂ ಮುಂದೂಡಲಾಯಿತು.
ಸಂಭಲ್ ಹಿಂಸಾಚಾರ ಹಾಗೂ ಅದಾನಿ ಸಮೂಹಗಳ ಹಗರಣಗಳಿಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಚರ್ಚಿಸಲು ಪ್ರತಿಪಕ್ಷಗಳು ಪಟ್ಟು ಹಿಡಿದ ಕಾರಣ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಗಿದೆ.
ರಾಜ್ಯಸಭೆಯಲ್ಲೂ ಇದೇ ವಿಷಯಗಳನ್ನು ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ಕಲ್ಪಿಸಲಿಲ್ಲ ಎಂದು ಗದ್ದಲ ಸೃಷ್ಟಿಯಾದ ಹಿನ್ನೆಲೆ ಸತತ ಮೂರನೇ ದಿನವೂ ಕಲಾಪ ಸ್ಥಗಿತಗೊಂಡಿದೆ.
ಹಲವು ಕ್ಷೇತ್ರಗಳಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಪೈಪೋಟಿಯನ್ನು ಹಾಳು ಮಾಡುತ್ತಿರುವ ಮೊದಾನಿ ಹಗರಣ, ಮಣಿಪುರ ಹಿಂಸಾಚಾರ ಮತ್ತು ಸಂಭಲ್ ಹಿಂಸಾಚಾರಗಳ ಕುರಿತು ವಿಸ್ತ್ರತ ಚರ್ಚೆಗೆ ಆಡಳಿತ ಪಕ್ಷ ಮೊಂಡುತನ ಪ್ರದರ್ಶಿಸುತ್ತಿದೆ. ಅದಾನಿ ಹಗರಣ ಜಾಗತಿಕವಾಗಿ ಭಾರತದ ಕಾರ್ಪೋರೇಟ್ ಕ್ಷೇತ್ರದ ಮೇಲೆ ವಿಶ್ವಾಸಾರ್ಹತೆಯನ್ನು ನಾಶಪಡಿಸುತ್ತಿದೆ ಎಂದು ಜೈರಾಮ್ ರಮೇಶ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ.