ಬೆಂಗಳೂರು: ಕರ್ನಾಟಕ ರಾಷ್ಟ್ರ ಸಮಿತಿ (KRS) ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಎಸ್.ಎಚ್.ಲಿಂಗೇಗೌಡ ಅವರು ಗುಜರಾತಿನಲ್ಲಿ ನಡೆದ ಅಪಘಾತದಲ್ಲಿ ನಿಧನರಾಗಿದ್ದಾರೆ.
ಅತ್ಯಾಚಾರ ಆರೋಪದ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ಮಾಡಬೇಕು ಮತ್ತು ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗೆ ಭೇಟಿಯಾಗಿ ಮನವಿ ಪತ್ರ ನೀಡಲು ಮಂಗಳೂರಿನಿಂದ ದೆಹಲಿಗೆ ಐದು ಜನರ ತಂಡ ಪಾದಯಾತ್ರ ನಡೆಸುತ್ತಿದ್ದರು.
ಬುಧವಾರ 55ನೇ ದಿನ ಪಾದಯಾತ್ರೆ ಗುಜರಾತಿನ ಭರೂಚ್ ನಗರ ತಲುಪಿತ್ತು. ಪಾದಯಾತ್ರೆಯ ತಂಡಕ್ಕೆ ನೈತಿಕ ಬೆಂಬಲ ನೀಡಲು ಲಿಂಗೇಗೌಡ ಅವರು ಗುಜರಾತ್‌ಗೆ ತೆರಳಿದರು.
ಈ ವೇಳೆ ಭರೂಚ್ ನಗರದ ಹೆದ್ದಾರಿಯ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಯಾತ್ರಿಗಳ ಮೇಲೆ ಬಳಿ ಲಾರಿ ಹರಿದು ಲಿಂಗೇಗೌಡ ಮತ್ತು ಮಂಗಳೂರಿನ ಕುಂಜಿ ಮೂಸಾ ಮೃತಪಟ್ಟಿದ್ದಾರೆಂದು ವರದಿಯಾಗಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಂಪುರ ಗ್ರಾಮದ ಲಿಂಗೇಗೌಡ ಎಂ.ಎ. ಪದವೀಧರ. ಅಬಕಾರಿ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿ, ಭ್ರಷ್ಟ ವ್ಯವಸ್ಥೆಯಿಂದ ಬೇಸತ್ತು ಹುದ್ದೆಗೆ ರಾಜೀನಾಮೆ ನೀಡಿದ್ದರು.
ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಉದ್ದೇಶದಿಂದ 2018ರಲ್ಲಿ ಸ್ವರಾಜ್ ಇಂಡಿಯಾ ಪಕ್ಷದಿಂದ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದರು.