ಹೈದರಾಬಾದ್: Pushpa 2 ಸಿನಿಮಾ ಬಿಡುಗಡೆ ವೇಳೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲು ಅರ್ಜುನ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ತನ್ನ ಬ್ಲಾಕ್‌ಬಸ್ಟರ್ ಚಿತ್ರ Pushpa 2 ಬಿಡುಗಡೆಯ ಸಂದರ್ಭದಲ್ಲಿ ಯಾವುದೇ ಮಾಹಿತಿ ನೀಡದೆ ಹೈದರಾಬಾದ್ ಸಂಧ್ಯಾ ಥಿಯೇಟರ್‌ಗೆ ಭೇಟಿ ನೀಡಿದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಅಲ್ಲು ಅರ್ಜುನ್ ತೆಲಂಗಾಣ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.
ಇದರ ಬೆನ್ನಲ್ಲೇ ಇಂದು (ಡಿಸೆಂಬರ್ 13) ನಟನನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಏತನ್ಮಧ್ಯೆ, ಇತ್ತೀಚಿನ ಬೆಳವಣಿಗೆಯಲ್ಲಿ, ಪ್ರಕರಣ ದಾಖಲಿಸಿರುವ ಸಂತ್ರಸ್ತೆ ರೇವತಿಯ ಪತಿ, ಪ್ರಕರಣವನ್ನು ಹಿಂಪಡೆಯಲು ಸಿದ್ಧ ಎಂದು ಹೇಳಿದ್ದಾರೆ.
“ನಾನು ಪ್ರಕರಣವನ್ನು ಹಿಂಪಡೆಯಲು ಸಿದ್ಧನಿದ್ದೇನೆ. ಬಂಧನದ ಬಗ್ಗೆ ನನಗೆ ತಿಳಿದಿರಲಿಲ್ಲ ಮತ್ತು ನನ್ನ ಹೆಂಡತಿ ಸಾವನ್ನಪ್ಪಿದ ಕಾಲ್ತುಳಿತಕ್ಕೂ ಅಲ್ಲುಅರ್ಜುನ್‌ಗೂ ಯಾವುದೇ ಸಂಬಂಧವಿಲ್ಲ” ಎಂದು ರೇವತಿಯ ಪತಿ ಭಾಸ್ಕರ್ ಹೇಳಿದ್ದಾರೆ.
ಚಿರಂಜೀವಿ ದಂಪತಿ ಭೇಟಿ: ಮತ್ತೊಂದೆಡೆ ಅಲ್ಲು ಅರ್ಜುನ್ ಬಂಧನದ ಬೆನ್ನಲ್ಲೇ ಖ್ಯಾತ ನಟ ಚಿರಂಜೀವಿ ದಂಪತಿ, ಅಲ್ಲು ಅರ್ಜುನ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.