ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yadyurappa) ವಿರುದ್ಧ ಅವರಿಗಿಂದು ಮಹತ್ವದ ದಿನವಾಗಿದ್ದು, ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ತೀರ್ಪು ಪ್ರಕಟವಾಗಿದೆ.
ಸಿಎಂಗೆ ಬಿಗ್ ರಿಲೀಫ್
ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಲು ನ್ಯಾಯಾಲಯ ನಿರಾಕರಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೈಕೋರ್ಟ್ನಿಂದ ಬಿಗ್ ರಿಲೀಫ್ ಸಿಕ್ಕಿದೆ.
ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ)ಕ್ಕೆ ವಹಿಸುವಂತೆ ದೂರುದಾರ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು, ಧಾರವಾಡ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು.
ಈ ಅರ್ಜಿ ವಿಚಾರಣೆ ಮಾಡಿದ್ದ ಹೈಕೋರ್ಟ್ ತೀರ್ಪು ಅನ್ನು ಇಂದಿಗೆ ಕಾಯ್ದಿರಿಸಿತ್ತು. ಅದರಂತೆ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸುವುದು ಬೇಕಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಸಿದ್ದರಾಮಯ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಸಿಬಿಐ ತನಿಖೆಗೆ ಕೊಡಲು ಇದೇನು ಅಪರೂಪದ ಕೇಸ್ ಅಲ್ಲ. ದೂರುದಾರ ಮೊದಲು ರಾಜ್ಯಪಾಲರ ಅನುಮತಿ ಕೇಳಿದರು.
ಆ ಮೇಲೆ ಲೋಕಾಯುಕ್ತ ತನಿಖೆ ಕೋರಿದರು. ಈ ಎರಡನ್ನು ಕೊಟ್ಟಿದ್ದರು. ಆದರೆ ಈಗ ತನಿಖೆ ಪೂರ್ಣಗೊಳ್ಳುವ ಮೊದಲೇ ಸಿಬಿಐಗೆ ತನಿಖೆ ವಹಿಸಿ ಎಂದು ಕೇಳುತ್ತಿದ್ದಾರೆ. ಇಲ್ಲಿ ಗಮನಿಸುವುದು ಏನೆಂದರೆ ಲೋಕಾಯುಕ್ತರು ಮಾಡಿದ ತನಿಖೆಯ ಲೋಪ ಏನು ಅಂತ ಹೇಳಿಲ್ಲ ಎಂದು ಕೋರ್ಟ್ಗೆ ಮನವಿ ಮಾಡಿದರು.
ಇನ್ನು ದೂರದಾರ ಸ್ನೇಹಮಯಿ ಪರ ವಕೀಲ ಮಣಿಂದರ್ ಸಿಂಗ್ ಅವರು ವಾದ ಮಂಡನೆ ಮಾಡಿದರು.
ಸಿಎಂ ಸಿದ್ದರಾಮಯ್ಯ ಅವರ ರಕ್ಷಣೆಗೆ ಸಚಿವ ಸಂಪುಟ ಒಟ್ಟಾಗಿದೆ. ಸ್ಥಳೀಯ ಅಧಿಕಾರಿಗಳು ಸ್ವತಂತ್ರ ತನಿಖೆ ಸಾಧ್ಯವಾಗುವುದಿಲ್ಲ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು ಎಂದರೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇದರಲ್ಲಿ ಸ್ವತಂತ್ರ ನ್ಯಾಯಸಮ್ಮತ ತನಿಖೆ ಆಗಬೇಕಿದೆ ಎಂದು ಕೋರ್ಟ್ಗೆ ಮನವಿ ಮಾಡಿದರು.
ಎರಡು ಕಡೆಯ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಪ್ರಕರಣವನ್ನು ಸಿಬಿಐಗೆ ವಹಿಸಲು ನಿರಾಕರಿಸಿದೆ.
ಮಾಜಿ ಸಿಎಂಗೆ ತಾತ್ಕಾಲಿಕ ರಿಲೀಫ್
ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ನಿರೀಕ್ಷಣಾ ಜಾಮೀನು ನೀಡಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಧಾರವಾಡ ಹೈಕೋರ್ಟ್ ಪೀಠ ಇಂದು (ಫೆಬ್ರವರಿ 07) ಆದೇಶ ಹೊರಡಿಸಿದೆ. ಆದರೆ, ಪ್ರಕರಣ ರದ್ದು ಮಾಡಲು ನಿರಾಕರಿಸಿದೆ.
ಇದರಿಂದ ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ ಅಷ್ಟೇ. ಆದರೆ ಕಷ್ಟ ತಪ್ಪಿಲ್ಲ. ಏಕೆಂದರೆ ಕೋರ್ಟ್ ಕೇವಲ ಜಾಮೀನು ನೀಡಿದೆ ಹೊರತು ಪ್ರಕರಣ ರದ್ದು ಮಾಡಿಲ್ಲ.
ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ರದ್ದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮುಗಿದಿದ್ದು, ಇಂದಿಗೆ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು.
ಅದರಂತೆ ಇದೀಗ ಧಾರವಾಡ ಹೈಕೋರ್ಟ್ ಪೀಠ, ಪ್ರಕರಣ ರದ್ದುಪಡಿಸಲು ನಿರಾಕರಿಸಿದ್ದು, ಕೇವಲ ನಿರೀಕ್ಷಣಾ ಜಾಮೀನು ನೀಡಿದೆ. ಹೀಗಾಗಿ ಯಡಿಯೂರಪ್ಪ ಬಂಧನದಿಂದ ಪಾರಾಗಿದ್ದಾರೆ ಹೊರತೂ ವಿಚಾರಣೆ ಎದುರಿಸಲೇಬೇಕಾಗಿದೆ.
ಇನ್ನು ತಾಂತ್ರಿಕ ಕಾರಣಕ್ಕೆ ಈ ಪ್ರಕರಣವನ್ನು ಹೈಕೋರ್ಟ್, ಪೋಕ್ಸೋ ಕೋರ್ಟ್ಗೆ ವಾಪಸ್ ಮರಳಿಸಿದೆ. ಹೀಗಾಗಿ ಬಿಎಸ್ ಯಡಿಯೂರಪ್ಪ ಅವರು ಪೋಕ್ಸೋ ಕೋರ್ಟ್ನಲ್ಲಿ ವಿಚಾರಣೆ ಎದುರಿಸಬೇಕಿದೆ ಎಂದು ವರದಿಯಾಗಿದೆ.