ಬೆಂಗಳೂರು: ಹೆಸರಘಟ್ಟ ಬಳಿ ಬಿಜಿಎಸ್ ಲೇಔಟ್ ಬಳಿ ನಡೆದ ರಿಯಲ್ ಎಸ್ಟೇಟ್ ಉದ್ಯಮಿಯ ಹತ್ಯೆ (Murder) ಪ್ರಕರಣದ ಸಂಬಂಧ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಹೆಣ್ಣು ಕೊಟ್ಟ ಅತ್ತೆಯೇ ತನ್ನ ಅಳಿಯನನ್ನು ಕೊಲೆಗೈದ ಸಂಗತಿ ಬಯಲಾಗಿದೆ.
ಶಾಸಕರೊಬ್ಬರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಲೋಕನಾಥ್ ಸಿಂಗ್ ಮಾ.22ರಂದು ಕೊಲೆಯಾಗಿದ್ದರು.
ಮೇಲ್ನೋಟಕ್ಕೆ ಹಳೇ ವೈರಿಗಳು ಅಥವಾ ರೌಡಿಶೀಟರ್‌ಗಳು ಕೊಲೆ ಮಾಡಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಸ್ವಂತ ಅತ್ತೆಯೇ ಅಳಿಯನನ್ನು ಕೊಲೆ ಮಾಡಿಸಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ.
ಉದ್ಯಮಿ ಮಗಳಿಗೆ ಬೆದರಿಸಿ ಮದುವೆ
ಕಳೆದ ಡಿಸೆಂಬರ್‌ನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮಗಳಿಗೆ ಬ್ಲ್ಯಾಕ್ ಮೇಲ್ ಮಾಡಿ ಲೋಕನಾಥ್ ಮದುವೆ ಮಾಡಿಕೊಂಡಿದ್ದರಂತೆ.
ಮಗಳ ಭವಿಷ್ಯ ಹಾಗೂ ಕುಟುಂಬದ ಮರ್ಯಾದೆಗೆ ಅಂಜಿ ಯುವತಿಯ ತಂದೆ-ತಾಯಿ ಮಗಳನ್ನು ಮದುವೆ ಮಾಡಿಕೊಟ್ಟಿದ್ದರು ಎನ್ನಲಾಗಿದೆ.
ಇದರಿಂದ ನೊಂದ ತಂದೆ, ತಾಯಿ ಲೋಕನಾಥ್‌ಗೆ ಒಂದು ಗತಿ ಕಾಣಿಸಬೇಕು ಎಂದು ನಿರ್ಧರಿಸಿದ್ದರು. ಅಳಿಯ, ಮಗಳ ಜತೆ ಬಿಜಿಎಸ್ ಲೇಔಟ್‌ಗೆ ಮಾ.22ರಂದು ಯುವತಿಯ ತಾಯಿ ಬಂದಿದ್ದಾರೆ. ಲೋಕನಾಥ್ ಸಿಂಗ್‌ಗೆ ಸೇರಿದ ಜಾಗಕ್ಕೆ ಬಂದು ಪಾರ್ಟಿ ಮಾಡಿದ್ದರಂತೆ.
ನಿರ್ಮಾಣ ಹಂತದ ಕಟ್ಟಡದಲ್ಲಿ ಗಂಡ-ಹೆಂಡತಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಜತೆಯಲ್ಲಿದ್ದ ಗನ್‌ಮ್ಯಾನ್‌ಗೆ ಏನನ್ನೋ ತರಲು ಹೇಳಿ ಕಳುಹಿಸಿದ್ದಾರೆ. ಮದ್ಯ ಸೇವಿಸಿದ್ದ ಅಳಿಯ ಲೋಕನಾಥ್ ಸಿಂಗ್‌ಗೆ ಅತ್ತೆ ಊಟದಲ್ಲಿ ನಿದ್ದೆ ಮಾತ್ರೆ ಹಾಕಿದ್ದರು. ಅಳಿಯ ನಿದ್ದೆಗೆ ಜಾರಿದಾಗ ಹರಿತದ ಹರಿತವಾದ ಆಯುಧದಿಂದ ಅತ್ತೆ ಅಳಿಯನ ಕುತ್ತಿಗೆ ಕೊಯ್ದಿದ್ದಾರೆ.
ಮೊದಲೇ ನಿದ್ರೆಮಾತ್ರೆಯಿಂದ ನಿತ್ರಾಣರಾಗಿದ್ದ ಲೋಕನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಮ್ಮ- ಮಗಳನ್ನು ಸೋಲದೇವನ ಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.