ದೊಡ್ಡಬಳ್ಳಾಪುರ: ಹಲ್ಲೆ ನಡೆದಿದೆ ಎಂದು ಆರೋಪಿಸಿ ದೊಡ್ಡಬಳ್ಳಾಪುರ (Doddaballapura) ಮತ್ತು ಪೊಲೀಸ್ (Police) ಇಲಾಖೆಗೆ ಮಸಿ ಬಳಿಯಲು ಯತ್ನಿಸಿದ ಆರೋಪದಡಿಯಲ್ಲಿ ಬಿಗ್ ಬಾಸ್ ವಿನ್ನರ್ ಪ್ರಥಮ್ ಹಾಗೂ ಮತ್ತೊಬ್ಬ ಸ್ಪರ್ಧಿ ಜಗದೀಶ್ ವಿರುದ್ಧ ಕ್ರಮಕೈಗೊಳ್ಳುವಂತೆ ದೊಡ್ಡಬಳ್ಳಾಪುರ ಡಿವೈಎಸ್ಪಿ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗೆ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ದೂರು ನೀಡಿದೆ.
ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬಿಎಸ್ ಚಂದ್ರಶೇಖರ್ ಅವರು ಇಂದು ದೊಡ್ಡಬಳ್ಳಾಪುರ ಡಿವೈಎಸ್ಪಿ ರವಿ ಅವರಿಗೆ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಅವರಿಗೆ ದೂರು ನೀಡಿದ್ದಾರೆ.

ದೂರಿನಲ್ಲಿ ದೊಡ್ಡಬಳ್ಳಾಪುರವು ಇತಿಹಾಸದಿಂದ ಇಲ್ಲಿಯವರೆಗೂ ಶಾಂತಿ ಸೌಹಾರ್ದತೆಯಿಂದ ತುಂಬಿದ ತಾಲ್ಲೂಕಾಗಿದೆ. ಇಂಡಸ್ಟ್ರಿಯಲ್ ಏರಿಯಾಗಳನ್ನು ಹೊಂದಿರುವ ಈ ತಾಲ್ಲೂಕು ವಲಸೆ ಬಂದಂತಹ ಅದೆಷ್ಟೋ ಜನರನ್ನು ಆದರದಿಂದ ಬರಮಾಡಿಕೊಂಡು ಅವರುಗಳು ಇಲ್ಲಿ ನೆಲೆವೂರುವಂತೆ ಮಾಡಿದೆ.
ಕಾಲಕಾಲಕ್ಕೆ ಬಂದಂತಹ ಪೋಲೀಸ್ ಅಧಿಕಾರಿಗಳು ತೋರಿರುವ ದಕ್ಷತೆ, ಸಾಮರ್ಥ್ಯದಿಂದ ರೌಡಿಸಂ ಆಗಲಿ, ಕೋಮುಗಲಭೆಯಾಗಲಿ ಅಥವಾ ಇನ್ನು ಇತರೆ ಯಾವುದೇ. ತರಹದ ಗಲಾಟೆಗಳು ಇಲ್ಲದಂತೆ ನೋಡಿಕೊಂಡು ದೊಡ್ಡಬಳ್ಳಾಪುರದ ಜನರು ನಿರ್ಭಯದಿಂದ ಬದುಕಲು ಕಾರಣರಾಗಿದ್ದಾರೆ.

ಆದರೆ ಇದೀಗ ಸುದ್ದಿಯಲ್ಲಿರುವ ಸೆಲೆಬ್ರಿಟಿಯಾಗಿರುವ ಪ್ರಥಮ್ ವಿಚಾರ ದೊಡ್ಡಬಳ್ಳಾಪುರದ ಶಾಂತಿಯುತ ವಾತಾವರಣದ ಮೇಲೆ ಪ್ರಶ್ನೆ ಮಾಡುವಂತೆ ಮಾಡಿದೆ. ಅದರ ಜೊತೆಯಲ್ಲಿ ಜಗದೀಶ್ ರವರ ವೈರಲ್ ಆಡಿಯೋ ಹಾಗೂ ವಿಡಿಯೋ ಕ್ಲಿಪ್ಪಿಂಗ್ ಗಳು ದೊಡ್ಡಬಳ್ಳಾಪುರ ತಾಲ್ಲೂಕಿನ ಜನತೆಯ ಸೌಹಾರ್ದತೆಗೆ, ರಾಜ್ಯ ಪೋಲೀಸ್ ಹಾಗೂ ದೊಡ್ಡಬಳ್ಳಾಪುರದ ಪೋಲೀಸ್ ರವರ ದಕ್ಷತೆಗೆ ಮಸಿ ಬಳೆಯುವ ಪ್ರಯತ್ನದಂತೆ ತೋರುತ್ತಿದೆ.

ಇಂತಹ ಬೆಳವಣಿಗೆಗಳು ಜನಸಾಮಾನ್ಯರಲ್ಲಿ ಭಯವನ್ನುಂಟು ಮಾಡುವುದಲ್ಲದೆ, ಬೆಳೆಯುತ್ತಿರುವ ತಾಲ್ಲೂಕಿಗೆ ಕಂಟಕವಾಗುವುದು ಸುಳ್ಳಲ್ಲ. ಆದ್ದರಿಂದ ಪೊಲೀಸರು ಈ ವಿಚಾರದ ಬಗ್ಗೆ ಸ್ವತಂತ್ರವಾಗಿ ಸುಮೋಟೋ ಕೇಸ್ ದಾಖಲಿಸಿಕೊಂಡು ನಿಜವಾಗಿಯೂ ಪ್ರಥಮ್ ಹಾಗೂ ಜಗದೀಶ್ ರವರು ಹೇಳಿಕೊಳ್ಳುತ್ತಿರುವಂತಹ ಕಹಿ ಘಟನೆ ನಡೆದಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ.
ಅಂತೆಯೇ ಈ ಆರೋಪ ಸುಳ್ಳಾಗಿದ್ದಲ್ಲಿ, ಸುಳ್ಳುವದಂತಿಗಳನ್ನು ಹಬ್ಬಿಸಿ ದೊಡ್ಡಬಳ್ಳಾಪುರ ಹಾಗೂ ಪೋಲೀಸ್ ಇಲಾಖೆಗೆ ಮಸಿ ಬಳೆಯುವ ಕೆಲಸ ಮಾಡಿರುವ ಪ್ರಥಮ್ ಹಾಗೂ ಜಗದೀಶ್ ರವರ ಮೇಲೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.