ಬೆಂಗಳೂರು: 18ನೇ ಆವೃತ್ತಿ ಐಪಿಎಲ್ ಪಂದ್ಯಾವಳಿಯಲ್ಲಿ ಕಪ್ ಗೆದ್ದ ಆರ್‌ಸಿಬಿ (RCB) ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂನ್ 4ರಂದು ಸಂಭವಿಸಿದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ 5 ಪೊಲೀಸ್ ಅಧಿಕಾರಗಳ ಅಮಾನತುಗೊಳಿಸಿ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
ಪೊಲೀಸ್ ಕಮಿಷನರ್ ಬಿ.ದಯಾನಂದ, ಹೆಚ್ಚುವರಿ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ವಿಕಾಸ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್, ಎಸಿಪಿ ಸಿ. ಬಾಲಕೃಷ್ಣ, ಇನ್‌ಸ್ಪೆಕ್ಟರ್ ಎ.ಕೆ. ಗಿರೀಶ್ ಅವರನ್ನು ಅಮಾನತು ಆದೇಶ ಹಿಂಪಡೆಯಲಾಗಿದೆ.
ಈ ಕುರಿತಂತೆ ಆಡಳಿತ ಸುಧಾರಣಾ ಇಲಾಖೆ ಸೋಮವಾರ ಆದೇಶ ಹೊರಡಿಸಿದ್ದು, ಈ ಎಲ್ಲರ ಮೇಲೆ ನಿಯಮ ಪ್ರಕಾರ ಶಿಸ್ತುಕ್ರಮ ಕೈಗೊಳ್ಳುವುದನ್ನು ಬಾಕಿಯಿರಿಸಿ, ಕರ್ತವ್ಯಕ್ಕೆ ಮರಳಿ ನೇಮಿಸಿ ಆದೇಶ ನೀಡಿದೆ.
ಕಾಲ್ತುಳಿತ ಘಟನೆ ಸಂಬಂಧಿಸಿದಂತೆ ತನಿಖೆಗೆ ರಚಿಸಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದ ಮ್ಯಾಜಿಸ್ಟ್ರಿಯಲ್ ತನಿಖಾ ತಂಡ ಮತ್ತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ನ ನೇತೃತ್ವದ ಏಕ ಸದಸ್ಯ ಆಯೋಗ ಈಗಾಗಲೇ ವರದಿ ಸಲ್ಲಿಸಿದೆ.
ಈ ಅಧಿಕಾರಿಗಳು ತಮ್ಮ ಅಮಾನತು ವಾಪಸ್ ಪಡೆಯುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಕಾರಣಕ್ಕೆ ಅಮಾನತು ಆದೇಶವನ್ನು ಮರು ಪರಿಶೀಲಿಸಿ, ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದೂ ಆದೇಶದಲ್ಲಿ ವಿವರಿಸಲಾಗಿದೆ.
ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ರದ್ದುಗೊಳಿಸಿತ್ತು.