ಹೊಳೆನರಸೀಪುರ: ಕೇವಲ ₹2000 ಗ್ಯಾರಂಟಿ ಹಣದಿಂದ ಅಭಿವೃದ್ಧಿ ಸಾಧ್ಯವಿಲ್ಲ. ಮಹಿಳೆಯರು ಈ ಸಣ್ಣ ಮೊತ್ತಕ್ಕೆ ಮರುಳಾಗಬಾರದು. ಜನರ ಕುಟುಂಬಗಳ ಉದ್ಧಾರವು ಅಸಾಧ್ಯ. ಇಂತಹ ಗ್ಯಾರೆಂಟಿಗಳಿಂದ ರಾಜ್ಯ ಸರ್ಕಾರಗಳಿಗೆ ಸಂಬಳ ಕೊಡಲಾಗದಂತ ದುಸ್ಥಿತಿ ಎದುರಾಗಿದೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಕಳವಳ ವ್ಯಕ್ತಪಡಿಸಿದರು.

ಹೊಳೆನರಸೀಪುರ ತಾಲೂಕಿನ ಉದ್ದನ ಹೊಸಹಳ್ಳಿ ಗ್ರಾಮದಲ್ಲಿ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಕೇವಲ ಎರಡು ಸಾವಿರ ರೂಪಾಯಿಯಿಂದ ಅಭಿವೃದ್ಧಿ ಸಾಧ್ಯವಿಲ್ಲ. ಅದರಿಂದ ಆರೋಗ್ಯ, ಶಿಕ್ಷಣ ಸೇರಿದಂತೆ ಕುಟುಂಬಗಳ ಯಾವ ಅಗತ್ಯವು ಪೂರೈಕೆ ಆಗುವುದಿಲ್ಲ. ದೊಡ್ಡ ದೊಡ್ಡ ಕಾಯಿಲೆಗಳು ಬಂದಾಗ ಜನರಿಗೆ ಈ ಎರಡು ಸಾವಿರ ರೂಪಾಯಿಯಿಂದ ಚಿಕಿತ್ಸೆ ಪಡೆಯಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ಮಾರ್ಚ್ ತಿಂಗಳ ಸರ್ಕಾರಿ ನೌಕರರ ವೇತನವನ್ನು ಇನ್ನು ಕೊಟ್ಟಿಲ್ಲ ಎನ್ನುವ ಮಾಹಿತಿಯು ಇದೆ. ಹಾಗೆಯೇ ಕಾಂಗ್ರೆಸ್ ಆಡಳಿತ ಇರುವ ಹಿಮಾಚಲ ಪ್ರದೇಶದಲ್ಲಿಯೂ ಸರ್ಕಾರಿ ನೌಕರರ ಸಂಬಳವನ್ನು ನೀಡಲು ಪರದಾಡುತ್ತಿದೆ. ಆ ಸರ್ಕಾರವು ನೌಕರರ ಸಂಬಳವನ್ನು ಕಡಿತ ಮಾಡಿಕೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಾಗಿ ರಾಜ್ಯಗಳ ಅಭಿವೃದ್ಧಿ ಸಂಪೂರ್ಣವಾಗಿ ಹಳಿತಪ್ಪಿದೆ, ಇದಕ್ಕೆ ಕಾಂಗ್ರೆಸ್ ಕಾರಣವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಸುಮಾರು ₹7,26,000 ಲಕ್ಷ ಕೋಟಿಗೂ ಹೆಚ್ಚು ಹಣವನ್ನು ಕರ್ನಾಟಕ ಸರ್ಕಾರ ಸಾಲ ಮಾಡಿದೆ. ಕಾಂಗ್ರೆಸ್ ಸರ್ಕಾರವೇ ಅತಿಹೆಚ್ಚು ಸಾಲ ಮಾಡಿದೆ. ರಾಜ್ಯದ ಪ್ರತಿಯೊಬ್ಬರ ತಲೆಯ ಮೇಲೆಯೂ ಕನಿಷ್ಠವೆಂದರೂ ಒಂದು ಲಕ್ಷ ರೂಪಾಯಿಗೂ ಅಧಿಕ ಸಾಲವಿದೆ. ಇದಕ್ಕೆ ಕಾರಣ ಯಾರು? ಇದನ್ನು ತೀರಿಸುವವರು ಯಾರು? ಇಷ್ಟು ಸಾಲವನ್ನು ಮಾಡಿದರೆ ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯವೇ ಎಂದು ಸಚಿವ ಕುಮಾರಸ್ವಾಮಿ ಅವರು ಆತಂಕ ವ್ಯಕ್ತಪಡಿಸಿದರು.
ಒಂದು ಕೈಯಲ್ಲಿ ನಿಮಗೆ ರೂ.2000 ಕೊಡುತ್ತಾರೆ. ಇನ್ನೊಂದು ಕೈಯಲ್ಲಿ ತೆರಿಗೆ ಮೇಲೆ ತೆರಿಗೆ ವಿಧಿಸುತ್ತಾರೆ. ಬೆಲೆ ಏರಿಕೆಗಳ ಬಗ್ಗೆ ಹೇಳುವ ಹಾಗೆಯೇ ಇಲ್ಲ. ಇತ್ತೀಚೆಗೆ ವಿದ್ಯುತ್ ದರವನ್ನು ಹೆಚ್ಚಿಸಿದರು. ಹಾಗೆಯೇ ಮದ್ಯದ ದರವನ್ನು ಏರಿಸಿದರು. ಎಷ್ಟು ಸಾಧ್ಯವೊ ಅಷ್ಟು ಕಡೆ ಜನರನ್ನು ಕಿತ್ತು ತಿನ್ನುವ ಕೆಲಸವನ್ನು ಈ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಸಚಿವರು ಕಿಡಿಕಾರಿದರು.
ಚುನಾವಣೆ ಬಂದಾಗ ನಿಮ್ಮ ಭವಿಷ್ಯ ಮತ್ತು ನಿಮ್ಮ ಮಕ್ಕಳ ಉದ್ಧಾರಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವವರನ್ನು ನೋಡಿ ಆಯ್ಕೆ ಮಾಡಿ. ಜಾತಿ ನೋಡಿ ಮತ ಹಾಕಬೇಡಿ. ಹಾಸನ ಜಿಲ್ಲೆ ಸೇರಿ ಇಡೀ ರಾಜ್ಯದಲ್ಲಿ ಆರೋಗ್ಯ, ಶಿಕ್ಷಣ, ವಿದ್ಯುತ್ ಕ್ಷೇತ್ರಗಳಲ್ಲಿ ಆಗಿರುವ ಅಭಿವೃದ್ಧಿಯನ್ನು ಗಮನಿಸಿ. ನನಗೆ ದೊರೆತ ಸಣ್ಣ ಅವಧಿಯಲ್ಲಿ ಇಷ್ಟೆಲ್ಲ ಕೆಲಸಗಳನ್ನು ಮಾಡಿದ್ದೇನೆ. ಸಾವಿರಾರು ಶಿಕ್ಷಕರನ್ನು ನೇರವಾಗಿ ಮತ್ತು ಪಾರದರ್ಶಕವಾಗಿ ನೇಮಕ ಮಾಡಿದ್ದೆ. ಆದರೆ ಈಗಿನ ಸರ್ಕಾರಕ್ಕೆ ಒಂದೇ ಒಂದು ನೇಮಕಾತಿ ಮಾಡುವ ಶಕ್ತಿಯು ಇಲ್ಲವಾಗಿದೆ ಎಂದು ಕೇಂದ್ರ ಸಚಿವರು ದೂರಿದರು.
ದೇವಾಲಯ ಜೀರ್ಣೋದ್ಧಾರದ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಕೇಂದ್ರ ಸಚಿವರು ಯುವಕರಿಗೆ ಕಿವಿಮಾತುಗಳನ್ನು ಹೇಳಿದ ಸಚಿವರು, ನೀವೆಲ್ಲರೂ ಒಳ್ಳೆಯ ಕೆಲಸ ಮಾಡಿದ್ದೀರಿ. ಜೈ ಶ್ರೀರಾಮ್ ಎನ್ನುವ ಕೂಡ ಒಳ್ಳೆಯದೇ. ಆದರೆ, ನಿಮಗೆ ಜನ್ಮಕೊಟ್ಟ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ. ಸಣ್ಣಪುಟ್ಟ ವಿಷಯಕ್ಕೆ ಕುಟುಂಬಗಳ ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ. ಮನುಷ್ಯ ಸಂಬಂಧಗಳು ಬಹಳ ಮುಖ್ಯ, ಅದರಲ್ಲಿಯೂ ರಕ್ತ ಸಂಬಂಧಗಳಿಗೆ ಇನ್ನು ಹೆಚ್ಚು ಪ್ರಾಮುಖ್ಯತೆ ನೀಡುವ ಸಮಾಜ ನಮ್ಮದು. ನಿಮ್ಮ ಮೇಲೆ ನಿಮ್ಮ ಹೆತ್ತವರು ಇಟ್ಟಿರುವ ನಂಬಿಕೆಯನ್ನು ಉಳಿಸಿ ಮಾಡಬೇಡಿ ಎಂದು ಮನವಿ ಮಾಡಿದರು.
ತಮ್ಮ ಬಾಲ್ಯವನ್ನು ಮೆಲುಕು ಹಾಕಿದ ಕೇಂದ್ರ ಸಚಿವರು, ಇಂದು ನೀವೆಲ್ಲರೂ ಓಡಾಡುವ ಜಾಗಗಳಲ್ಲಿಯೇ ನಾನು ಓಡಾಡಿದ್ದೆ. ನನ್ನ ಬಾಲ್ಯ ಎಷ್ಟು ಕಷ್ಟಕರವಾಗಿತ್ತು ಎಂದರೆ ಊಟಕ್ಕೂ ಕಷ್ಟಪಡುತ್ತಿದ್ದೆವು. ಬುಡ್ಡಿದೀಪದ ಓದುತ್ತಿದ್ದೆವು. ನಮ್ಮ ತಂದೆಯವರು ಬಹಳ ಕಷ್ಟಪಟ್ಟು ಆಲೂಗೆಡ್ಡೆ ಬೆಳೆಯುತ್ತಿದ್ದರು. ಅವರನ್ನು ನೋಡಿಕೊಂಡು ಬೆಳೆದು ನಾವು ಸಾಮಾನ್ಯದಲ್ಲಿ ಸಾಮಾನ್ಯರಾಗಿ ಜೀವನ ಮಾಡಿದವು. ಹೀಗಾಗಿ ನಾವು ಜನರಿಗೆ ಸದಾ ಹತ್ತಿರದಲ್ಲಿ ಇದ್ದೇವೆ ಎಂದು ಹೇಳಿದರು.
ಮಾಜಿ ಮಂತ್ರಿಗಳಾದ ಹೆಚ್.ಡಿ.ರೇವಣ್ಣ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶ್ರೀ ಕಿರಿಕೊಡ್ಲಿ ಮಠದ ಶ್ರೀ ಶ್ರೀ ಸಾಂಬ ಸದಾಶಿವ ಸ್ವಾಮೀಜಿ ಅವರು, ಅರಕಲಗೂಡಿನ ಶ್ರೀ ಚಿಲುಮೆ ಮಠದ ಶ್ರೀ ಶ್ರೀ ಜಯದೇವ ಸ್ವಾಮೀಜಿ ಅವರು ದಿವ್ಯಸಾನ್ನಿಧ್ಯ ವಹಿಸಿದ್ದರು. ಗ್ರಾಮಸ್ಥರು ಬಹಳ ದೊಡ್ಡ ಪ್ರಮಾಣದಲ್ಲಿ ಸಭೆಯಲ್ಲಿ ನೆರೆದಿದ್ದರು. ಇದಕ್ಕೂ ದೇವಾಲಯಕ್ಕೆ ತೆರಳಿದ ಕೇಂದ್ರ ಸಚಿವರು ಶ್ರೀ ವೀರಾಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದರು.
ನನಗೆ ಒಂದು ಸಲ ಅವಕಾಶ ಕೊಡಿ ಕರ್ನಾಟಕದಲ್ಲಿ ರಾಮರಾಜ್ಯ ಸ್ಥಾಪನೆ ಮಾಡುತ್ತೇನೆ
ರಾಮರಾಜ್ಯ ಸ್ಥಾಪನೆಯಾಗಬೇಕು ಎಂದು ನೀವೆಲ್ಲರೂ ಶ್ರೀ ಆಂಜನೇಯನ ದೇವಸ್ಥಾನಗಳನ್ನು ಕಟ್ಟುತ್ತಿದ್ದೀರಿ. ಕೇಸರಿ ಶಾಲು ಹಾಕಿ ದೇವರನ್ನು ಪ್ರಾರ್ಥಿಸುತ್ತಿದ್ದೀರಿ. ನನ್ನದು ಕೂಡ ಅದೇ ಪ್ರಾರ್ಥನೆ. ಒಮ್ಮೆ ನನ್ನ ಕೈಗೆ ಸರ್ಕಾರ ಕೊಡಿ, ಕರ್ನಾಟಕದಲ್ಲಿ ರಾಮರಾಜ್ಯ ಸ್ಥಾಪನೆ ಮಾಡಿ ತೋರಿಸುತ್ತೇನೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಘೋಷಿಸಿದರು.
ಹೊಳೆನರಸೀಪುರ ತಾಲೂಕಿನ ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು.
ಯುವಕರು ಭುಜದ ಮೇಲೆ ಕೇಸರಿ ಶಾಲುಗಳನ್ನು ಧರಿಸಿರುವುದನ್ನು ಗಮನಿಸಿ ಮಾತನಾಡಿದ ಸಚಿವರು, ನೀವು ಮಾತ್ರ ಕೇಸರಿ ಶಾಲು ಹಾಕಿದ್ದೀರಿ ನನಗೆ ಕೊಟ್ಟಿಲ್ಲ. ನಾನು ಕೂಡ ನಿಮ್ಮಂತೆ ರಾಮಭಕ್ತ ಎಂದು ಸಚಿವರು ನಗುನಗುತ ಹೇಳಿದರು.
ಕೇಸರಿ ಶಾಲು ನಮ್ಮ ಧರ್ಮದ ಸಂಕೇತ. ನಮ್ಮ ಧರ್ಮವು ವಿಶಾಲ ದೃಷ್ಟಿಕೋನದ ಮತ್ತು ಮಾನವೀಯ ಮೌಲ್ಯಗಳ ಆಧಾರದ ನಿಂತಿದೆ. ರಾಮನನ್ನು ನೆನಪು ಮಾಡಿಕೊಂಡಾಗಲಿಲ್ಲ ನಾವು ರಾಮರಾಜ್ಯ ಬಗ್ಗೆ ಮಾತನಾಡುತ್ತೇವೆ. ನನಗೆ ಒಂದೇ ಒಂದು ಸಲ ಅವಕಾಶ ಕೊಟ್ಟು ನೋಡಿ, ಕರ್ನಾಟಕದಲ್ಲಿ ರಾಮರಾಜ್ಯ ಸ್ಥಾಪನೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು.
ನಾನು ಸಿಎಂ ಆದರೆ ₹5000 ಕೊಡುತ್ತೇನೆ
ಕಾಂಗ್ರೆಸ್ ಸರ್ಕಾರ ಸಾಲ ಮಾಡಿ ನಿಮ್ಮ ತಲೆಯ ಮೇಲೆ ಹೊರೆ ಹೊರೆಸಿ ₹2000 ಗ್ಯಾರಂಟಿ ಕೊಡುತ್ತಿದೆ. ದಿನ ಬೆಳಗ್ಗೆ ಬೆಲೆ ಏರಿಕೆ ಮಾಡಿ ತೆರಿಗೆ ಏರಿಸಿದರೆ ₹2000 ಏನು ಬಂತು, ನಾನಾದರೆ ₹5000 ಕೊಡುತ್ತಿದ್ದೆ. ನಿಮಗೆ ಗ್ಯಾರಂಟಿ ಬೇಕಾದರೆ ನಾನೇ ₹5000 ಕೊಡುತ್ತೇನೆ ಎಂದು ಸಚಿವರು ಹೇಳಿದರು.
ಈ ಸರ್ಕಾರ ಕೊಡುವ ₹2000ಕ್ಕೆ ಮರುಳಾಗಬೇಡಿ. ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆಲೋಚನೆ ಮಾಡಿ ಎಂದು ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರು ಮಹಿಳೆಯರನ್ನು ಉದ್ದೇಶಿಸಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಮಂತ್ರಿಗಳಾದ ಹೆಚ್.ಡಿ. ರೇವಣ್ಣ, ಹೆಚ್.ಕೆ. ಕುಮಾರಸ್ವಾಮಿ ಅವರು ಸೇರಿದಂತೆ ಅನೇಕ ಮುಖಂಡರು ಗ್ರಾಮಗಳ ಹಿರಿಯರು ಭಾಗಿಯಾಗಿದ್ದರು.
ಕರ್ನಾಟಕ ಲೋಕಸೇವಾ ಆಯೋಗವನ್ನು ಕ್ಲೀನ್ ಮಾಡುತ್ತೇವೆ ಎಂದು ಹೇಳುತ್ತಿದ್ದವರು ಈಗ ಸದನ ಸಮಿತಿ ಮಾಡಿ ತಪ್ಪು ಮಾಡಿದವರನ್ನು ರಕ್ಷಣೆ ಮಾಡಲು ಹೊರಟಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಹೊಳೆನರಸೀಪುರ ತಾಲೂಕಿನ ಉದ್ದೂರು ಹೊಸಹಳ್ಳಿ ಗ್ರಾಮದಲ್ಲಿ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
ಕೆಪಿಎಸ್‌ಸಿ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಅವರು ಸದನದಲ್ಲಿ ನೀಡಿರುವ ಹೇಳಿಕೆಯನ್ನು ಗಮನಿಸಿದ್ದೇನೆ. ಸದನ ಸಮಿತಿ ಮಾಡಿ ಏನು ಮಾಡ್ತೀರಿ? ಇದರ ಕರ್ಮಕಾಂಡ ಎಲ್ಲಿಂದ ಆರಂಭವಾಯಿತು? ರೀ ಡೂ ಮಾಡಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ ವ್ಯಕ್ತಿಯನ್ನು ತಂದು ಅದರ ಅಧ್ಯಕ್ಷನನ್ನಾಗಿ ಮಾಡಿದ್ದೀರಿ. ಕೋಟಿ ಕೋಟಿ ಪಡೆದು ಎಸಿ ಹುದ್ದೆಗಳನ್ನು ಮಾರಿಕೊಂಡರು ಎಂದು ಬೀದಿ ಬೀದಿಯಲ್ಲಿ ಚರ್ಚೆ ನಡೆಯಿತು. ಅದು ಸಾಲದ್ದಕ್ಕೆ 15ರಿಂದ 18 ಜನ ಸದಸ್ಯರನ್ನು ಬೇರೆ ಮಾಡಿದ್ದೀರಿ. ವಾಸ್ತವ ಸ್ಥಿತಿ ಹೀಗಿರಬೇಕಾದರೆ ಸದನ ಸಮಿತಿ ರಚನೆ ಮಾಡಿ ಏನು ಮಾಡುತ್ತೀರಿ ಎಂದು ಕುಮಾರಸ್ವಾಮಿ ಅವರು ಟೀಕಾಪ್ರಹಾರ ನಡೆಸಿದರು.
2013ರಲ್ಲಿ ಇದೇ ಮುಖ್ಯಮಂತ್ರಿ ಅಭ್ಯರ್ಥಿಗಳ ಜೀವನದಲ್ಲಿ ಚಲ್ಲಾಟ ಆಡಿದ್ದರು. ಒಬ್ಬ ಹೆಣ್ಣು ಮಗಳಿಗೆ ಉದ್ಯೋಗ ಕೊಡಿಸಬೇಕು ಎಂದು 370 ಜನರ ಜೀವನದಲ್ಲಿ ಚಲ್ಲಾಟವಾಡಿದ್ದರು. ಎರಡು ಕಾಣದ ಒಬ್ಬ ಅಭ್ಯರ್ಥಿ ತಹಶೀಲ್ದಾರ್ ಹುದ್ದೆಗೆ ಆಯ್ಕೆಯಾಗಿದ್ದ. ಕೊನೆಗೆ ಆ ಯುವಕ ಬೇಸತ್ತು ಯುಪಿಎಸ್‌ಸಿ ಮಾಡಿ ಈಗ ಐಎಎಸ್ ಅಧಿಕಾರಿ ಆಗಿದ್ದಾನೆ. ಈ ಮುಖ್ಯಮಂತ್ರಿ ಆಗಲೇ ಕೆಪಿಎಸ್ಸಿಯನ್ನು ಕ್ಲೀನ್ ಮಾಡಿದಿದ್ದರೆ ಇಷ್ಟೆಲ್ಲ ಅದ್ವಾನ ಆಗುತ್ತಿರಲಿಲ್ಲ ಎಂದು ಕೇಂದ್ರ ಸಚಿವರು ವಾಗ್ದಾಳಿ ನಡೆಸಿದರು.
ಈಗ ದಿನಬೆಳಗಾದರೆ ಜನರು ಈ ಸರ್ಕಾರಕ್ಕೆ ಮಂಗಳಾರತಿ ಮಾಡುತ್ತಿದ್ದಾರೆ. ಮುಖ ಮುಚ್ಚಿಕೊಳ್ಳಲು ಈಗ ಸದನ ಸಮಿತಿ ನಾಟಕ ಮಾಡುತ್ತಿದ್ದಾರೆ. ಕಾಂಗ್ರೆಸ್ ನಿಂದ 7 ಶಾಸಕರಂತೆ, ಬಿಜೆಪಿಯಿಂದ ಮೂರು ಶಾಸಕರಂತೆ ಹಾಗೂ ನಮ್ಮ ಪಕ್ಷದಿಂದ ಒಬ್ಬ ಶಾಸಕರ ಹೆಸರು ಕೊಡಿ ಎಂದು ಕೇಳಿದ್ದಾರೆ. ಈ ಸದನ ಸಮಿತಿ ಏನು ವರದಿ ಕೊಡುತ್ತಾರೆ, ತಿಂದು ತೇಗಿದವರನ್ನು ರಕ್ಷಣೆ ಮಾಡುತ್ತಾರೆ ಅಷ್ಟೇ. ಆ ಸಮಿತಿಗೆ ತಜ್ಞರನ್ನೋ, ನ್ಯಾಯಾಧೀಶರನ್ನೋ ನೇಮಕ ಮಾಡಬೇಕಿತ್ತು. ಸರ್ಕಾರದ ಅವಧಿಯಲ್ಲಿ ತಮ್ಮ ಕ್ಷೇತ್ರಗಳ ಅಭಿವೃದ್ಧಿಯನ್ನು ಮಾಡಲು ಶಾಸಕರಿಗೆ ಆಗುತ್ತಿಲ್ಲ. ಅಂಥದ್ದರಲ್ಲಿ ಅವರು ಬಂದು ಕೆಪಿಎಸ್ಸಿಯನ್ನು ತೊಳೆದು ಬಿಡುತ್ತಾರಾ ಎಂದು ಕೇಂದ್ರ ಸಚಿವರು ವ್ಯಂಗ್ಯವಾಡಿದರು.
ಜಮೀರ್ ಸೇರ್ಪಡೆಯ ಬಗ್ಗೆ ಕೇಳಬೇಡಿ ಎಂದ ಸಚಿವರು
ಬೆಂದ ಮನೆಯಲ್ಲಿಗಳ ಹಿರಿಯೋ ಕೆಲಸ ನಾವು ಮಾಡೊಲ್ಲ. ಯಾವುದೋ ಪಕ್ಷದಲ್ಲಿ ಯಾರೋ ಮುನಿಸಿಕೊಂಡರೆ ಅದಕ್ಕೂ ನಮಗೂ ಸಂಬಂಧ ಏನು? ಅದು ಯಾವುದನ್ನೂ ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ. ಅಧಿಕಾರ ಹಿಡಿಯುವುದಕ್ಕಾಗಿ ಅಂತಹ ಜನರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಅವಶ್ಯಕತೆ ನಮಗಿಲ್ಲ. ಅಂತಹ ಕೆಟಗಿರಿಯ ಜನರು ಬೇಕಾಗಿಲ್ಲ ಎಂದು ತೀಕ್ಷ್ಣವಾಗಿ ಹೇಳಿದರು ಕೇಂದ್ರ ಸಚಿವ ಕುಮಾರಸ್ವಾಮಿ.
ಸಚಿವ ಜಮೀರ್ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುತ್ತಾರೆಯೇ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಅವರು ಮೇಲಿನಂತೆ ಉತ್ತರಿಸಿದರು.
ನಮಗೆ ಅದೆಲ್ಲದರ ಅನುಭವಗಳಾಗಿದೆ. ಯಾವುದೇ ಕಾರಣಕ್ಕೂ ಆ ವಿಷಯವನ್ನು ನನ್ನ ಮುಂದೆ ಪ್ರಸ್ತಾಪ ಮಾಡಬೇಡಿ. ಅದರ ಅವಶ್ಯಕತೆ ಇಲ್ಲ, ನಾನು ಅನುಭವಿಸಿದ್ದೇನೆ ಎಂದು ಹೇಳುವ ಮೂಲಕ ಸಚಿವ ಜಮೀರ್ ಅಹ್ಮದ್ ಜೆಡಿಎಸ್ ಸೇರುತ್ತಾರೆ ಎಂಬ ವಿಚಾರಕ್ಕೆ ಕೇಂದ್ರ ಸಚಿವರು ತೆರೆ ಎಳೆದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಟೆರರಿಸ್ಟ್ ಎಂದು ಕರೆದಿರುವುದಕ್ಕೆ ಇವರ ಆಕ್ರೋಶ ವ್ಯಕ್ತಪಡಿಸಿದ ಸಚಿವ ಕುಮಾರಸ್ವಾಮಿ ಅವರು, ಇದು ಉದ್ಧಟತನದ ಪರಮಾವಧಿ ಎಂದು ಕಿಡಿಕಾರಿದರು.
ಐದು ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಅಭಿವೃದ್ಧಿ ವಿಚಾರ ಇಟ್ಟುಕೊಂಡು ಮತ ಕೇಳಲಿಲ್ಲ. ಬದಲಿಗೆ ನಿಂದನೆ ಅಸ್ತ್ರವನ್ನಾಗಿ ಮಾಡಿಕೊಂಡು ಕೆಟ್ಟ ಪ್ರಚಾರ ನಡೆಸಿದರು ಎಂದು ಕೇಂದ್ರ ಸಚಿವರು ಟೀಕಿಸಿದರು.
ಖರ್ಗೆ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ರಾಷ್ಟ್ರದ ಕರ್ನಾಟಕದ ಹಿರಿಯ ರಾಜಕಾರಣಿ. ದೇಶದ ಗೌರವಾನ್ವಿತ ಪ್ರಧಾನಿ ಬಗ್ಗೆ ಬಳಸಿರುವ ಪದ ನೋಡಿದರೆ ಅವರ ಮನಸ್ಸಲ್ಲಿ ಯಾವ ಭಾವನೆ ಇಟ್ಟುಕೊಂಡಿದ್ದಾರೆ ಎಂಬುದು ಅರ್ಥ ಆಗುತ್ತದೆ. ಇದು ಉದ್ಧಟತನದ ಪರಾಕಾಷ್ಠೆ. ಇಂತಹ ಹೇಳಿಕೆ ಅವರಿಗೆ ಶೋಭೆ ತರಲ್ಲ ಎಂದು ಸಚಿವರು ಹೇಳಿದರು.
ಈ ಚುನಾವಣೆಗಳಲ್ಲಿ ಅಭಿವೃದ್ಧಿ ಹೆಸರಲ್ಲಿ ಯಾರೂ ಮತ ಕೇಳಿಲ್ಲ. ದೇಶಕ್ಕೆ ಏನು ಕೊಡುತ್ತೇವೆ ಎನ್ನುವುದಕ್ಕಿಂತ ಹೆಚ್ಚಾಗಿ ಗ್ಯಾರೆಂಟಿ ಕೊಡುವುದರಲ್ಲಿ ಪೈಪೋಟಿ ನಡೆಯಿತು. ಇದನ್ನು ನೋಡಿದರೆ ಆಘಾತ ಉಂಟಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಮುಖ್ಯ ಕಾರ್ಯದರ್ಶಿಯ ಸಂಬಳ ಕಡಿತ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಅಧಿಕಾರಿಗಳಿಗೆ ಸಂಬಳ ಆಗಿಲ್ಲ. ಜನ ಸಾಮಾನ್ಯರ ಜೀವನದ ಜೊತೆ ಚಲ್ಲಾಟ ಆಡ್ತಿದ್ದಾರೆ. 2028ಕ್ಕೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎನ್ನುತ್ತಾರೆ. ಕಳೆದ ಮೂರು ವರ್ಷ ನಿರಂತರವಾಗಿ ಸಿಎಂ ಖುರ್ಚಿ ಬಗ್ಗೆಯೇ ಚರ್ಚೆ ಮಾಡಿದ್ದಾರೆ. ಅದನ್ನು ಬಿಟ್ಟರೆ ಯಾವುದೇ ಅಭಿವೃದ್ಧಿ ಆಗಲಿಲ್ಲ. ರಾಜ್ಯದಲ್ಲಿ ಕುಡಿಯೋ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಖಾಲಿ ಬಿಂದಿಗೆ ಇಟ್ಟುಕೊಂಡು ಅಲೆಯುತ್ತಿದ್ದಾರೆ. ಅದರ ಬಗ್ಗೆ ಒಬ್ಬನೇ ಒಬ್ಬ ಮಂತ್ರಿ ಇದರ ಬಗ್ಗೆ ಮಾತನಾಡುತ್ತಿಲ್ಲ. ಜನರ ಸಮಸ್ಯೆಗಳ ಬಗ್ಗೆ ಸರಿಪಡಿಸುವ ಇಚ್ಚಾಶಕ್ತಿ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ನಮ್ಮ ರಾಜ್ಯದಲ್ಲಿ ಹುಡುಗಾಟದ ರಾಜಕಾರಣ ನಡೆಯುತ್ತಿದೆ. ಇಲ್ಲಿ ಬಿಟ್ಟು ತಮಿಳುನಾಡಿನಲ್ಲಿ ರಾಜಾರೋಷ ತೋರುತ್ತಾರೆ. ಮೇಕೆದಾಟು ಯೋಜನೆ ಮಾಡುತ್ತೇವೆ ಎಂದು ಹೇಳುತ್ತಾರೆ. ಅದಕ್ಕೆ ಡಿಎಂಕೆ ವಿರೋಧ ಮಾಡುತ್ತಿದೆ. ಆದರೆ, ನಮ್ಮ ಡಿಸಿಎಂ ಅಲ್ಲಿಗೆ ಹೋಗಿ ಡಿಎಂಕೆ ಗೆಲ್ಲಿಸಿ ಅಂತಾರೆ. ತಮಿಳುನಾಡಿನವರು ನೋಡಿದರೆ ಕೋರ್ಟ್ ಗೆ ಹೋಗಿದ್ದಾರೆ. ಇದು ಯಾವ ಸೀಮೆ ರಾಜಕಾರಣ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಮಹಿಳಾ ಮೀಸಲು ವಿಧೇಯಕ ಹಾಗೂ ಕ್ಷೇತ್ರ ಮರು ವಿಂಗಡಣೆ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಡಿಎಂಕೆ ಪಕ್ಷಗಳಿಂದ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಕೇಂದ್ರ ಸಚಿವರು ಆರೋಪಿಸಿದರು.
ಕ್ಷೇತ್ರ ವಿಂಗಡಣೆಯಲ್ಲಿ ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಆಗಿದೆ ಎನ್ನುವುದು ಕೇವಲ ಸುಳ್ಳು. ಪ್ರತಿಪಕ್ಷಗಳು ಜನರನ್ನು ದಾರಿ ತಪ್ಪಿಸುತ್ತಿವೆ. ತಮಿಳುನಾಡಿನಲ್ಲಿ ಚುನಾವಣೆ ಇತ್ತು ಎಂಬ ಕಾರಣಕ್ಕೆ ಡಿಎಂಕೆ ದಕ್ಷಿಣಕ್ಕೆ ಅನ್ಯಾಯ ಆಗುತ್ತದೆ ಎಂದು ಸುಳ್ಳು ಪ್ರಚಾರ ನಡೆಸಿತು. ಲೋಕಸಭೆಯಲ್ಲಿ ಸ್ವತಃ ಗೃಹ ಸಚಿವರು ಯಾವ ರಾಜ್ಯಕ್ಕೆ ಎಷ್ಟು ಸ್ಥಾನ ಸಿಗುತ್ತೆ ಎನ್ನುವ ಅಂಕಿ ಅಂಶ ನೀಡಿದರು. ಕಲಾಪದಲ್ಲಿ ಹೇಳಿದ ಮೇಲೆ ಅದನ್ನು ತಪ್ಪಲು ಸಾಧ್ಯ ಇದೆಯೇ? ಅಷ್ಟು ಸಾಮಾನ್ಯ ತಿಳಿವಳಿಕೆ ಪ್ರತಿಪಕ್ಷಗಳಿಗೆ ಇಲ್ಲವಾಯಿತು. ಇದು ಕಾಂಗ್ರೆಸ್ ಗಿಂತ ಡಿಎಂಕೆ ಈ ವಿಷಯವನ್ನು ಚುನಾವಣೆಗೆ ಬಳಕೆ ಮಾಡಿಕೊಂಡಿತು. ಕರ್ನಾಟಕದ ಲೋಕಸಭಾ ಕ್ಷೇತ್ರಗಳು 28ರಿಂದ 42ಕ್ಕೆ ಹೆಚ್ಚಾಗುತ್ತಿತ್ತು. 2011ರ ಜಾತಿಗಣತಿ ತೆಗೆದುಕೊಂಡರೆ 42 ಕ್ಷೇತ್ರಗಳು ಸಿಗುತ್ತವೆ. 2027ರ ಜನಗಣತಿ ತೆಗೆದುಕೊಂಡರೆ ಕರ್ನಾಟಕಕ್ಕೆ ನಷ್ಟ ಆಗುವ ಅಪಾಯವಿದೆ. ಇದರ ಬಗ್ಗೆ ಯಾರಾದರೂ ಯೋಚಿಸಿದ್ದೀರ? ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್.ಡಿ. ರೇವಣ್ಣ ಅವರು ಉಪಸ್ಥಿತರಿದ್ದರು.
