ದೊಡ್ಡಬಳ್ಳಾಪುರ: ತಾಲೂಕಿನ ಸಾಸಲು ಹೋಬಳಿಯ ಗುಂಡಮಗೆರೆಯಲ್ಲಿ ಇಂದು (ಏಪ್ರಿಲ್ 23) ಶನೇಶ್ವರ ಸ್ವಾಮಿಯ 3ನೇ ವರ್ಷದ ಬ್ರಹ್ಮರಥೋತ್ಸವ (Brahmarathotsava) ಅದ್ಧೂರಿಯಾಗಿ ನೆರವೇರಿತು.

ಬ್ರಹ್ಮರಥೋತ್ಸವದ ಅಂಗವಾಗಿ ಏಪ್ರಿಲ್ 22 ರಂದು ಸಂಜೆ 5.30ಕ್ಕೆ ಕಲ್ಯಾಣೋತ್ಸವ ನಡೆಯಿತು.

ಬ್ರಹ್ಮರಥೋತ್ಸವದ ಅಂಗವಾಗಿ ಶನಿಮಹಾತ್ಮಸ್ವಾಮಿಗೆ ಪುಣ್ಯಾಹ, ಕಲಶ ಸ್ಥಾಪನೆ ಪಂಚಾಮೃತ ಅಭಿಷೇಕ, ಗಣಪತಿಪೂಜೆ, ನವಗ್ರಹ ಪೂಜೆ, ಗಣಪತಿ ಹೋಮ, ನವಗ್ರಹ ಹೋಮ, ಶನಿಶಾಂತಿ ಹೋಮ, ಗರುಡಗಂಬಕ್ಕೆ ಪೂಜೆ, ಧ್ವಜಾರೋಹಣಪೂಜೆ, ಪೂರ್ಣಾಹುತಿ, ನೈವೇದ್ಯ ನಡೆಸಲಾಯಿತು.
ಇಂದು (ಏ.23) ಮಧ್ಯಾಹ್ನ 12.30ರಿಂದ ಜೇಷ್ಠಾದೇವಿ ಸಮೇತ ಶ್ರೀ ಶನೇಶ್ವರ ಸ್ವಾಮಿಯ 3ನೇ ವರ್ಷದ ಬ್ರಹ್ಮರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿತು.
ಹರಕೆ ಹೊತ್ತ ಭಕ್ತರು, ಭಕ್ತಿ ಭಾವದಿಂದ ಬಾಳೆಹಣ್ಣು, ದವನ ಎಸೆದು ಹರಕೆ ತೀರಿಸಿದರು. ರಥೋತ್ಸವದ ನಂತರ ಅನ್ನಸಂತರ್ಪಣೆ ನಡೆಸಲಾಯಿತು.
ಸಂಜೆ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಭಜನಾ ಮಂಡಲಿಯವರಿಂದ ಭಜನೆ ಕಾರ್ಯಕ್ರಮ ನಡೆಯಲಿದೆ. ದಿನ ರಾತ್ರಿ 8ಗಂಟೆಗೆ ಸಾಸಲು ಚಿನ್ನಮ್ಮ ಹರಿಕಥೆ ಆಯೋಜಿಸಲಾಗಿದೆ.
ಏ.24 ರಂದು ರಾತ್ರಿ 8 ಗಂಟೆಗೆ ಶನೇಶ್ವರ ಸ್ವಾಮಿಯ ಹರಿಕಥೆ ಹಾಗೂ ಏ.25 ರಂದು ಸಂಜೆ 5 ಗಂಟೆ ಆರತಿ ಕಾರ್ಯಕ್ರಮ ನೆರವೇರಲಿದೆ.
SSLC ಫಲಿತಾಂಶ; ದೊಡ್ಡಬಳ್ಳಾಪುರಕ್ಕೆ ಎಷ್ಟನೇ ಸ್ಥಾನ ಗೊತ್ತೆ..?

ದೊಡ್ಡಬಳ್ಳಾಪುರ: ಇಂದು ಪ್ರಕಟವಾದ 2025-26ನೇ ಸಾಲಿನ ಎಸ್ಎಸ್ಎಲ್‌ಸಿ (SSLC) ಪರೀಕ್ಷೆ -1ರ ಫಲಿತಾಂಶ ದೊಡ್ಡಬಳ್ಳಾಪುರ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 3553 ವಿದ್ಯಾರ್ಥಿಗಳು 2025-26 ನೇ ಸಾಲಿನ ಪರೀಕ್ಷೆಗೆ ಹಾಜರಾಗಿದ್ದು, 3416 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.96.14 ರಷ್ಟು ಫಲಿತಾಂಶ ಪಡೆದಿದ್ದಾರೆ.
ಕಳೆದ ವರ್ಷ ದೊಡ್ಡಬಳ್ಳಾಪುರ ಶೇ. 70.08 ರಷ್ಟು ಫಲಿತಾಂಶ ಪಡೆದು ಕೊನೆಯ ಸ್ಥಾನ ಪಡೆದು, ತೀವ್ರ ಚರ್ಚೆಗೆ ಕಾರಣವಾಗಿತ್ತು.
ಇನ್ನೂ ಇಂದಿನ ಫಲಿತಾಂಶದಲ್ಲಿ ಶೇ.97.23 ರಷ್ಟು ಪಡೆದು ಹೊಸಕೋಟೆ ಪ್ರಥಮ ಸ್ಥಾನ, ಶೇ.95.63 ರಷ್ಟು ಪಡೆದು ದೇವನಹಳ್ಳಿ ತೃತೀಯ ಸ್ಥಾನ, ಹಾಗೂ ಶೇ.92.94 ರಷ್ಟು ಫಲಿತಾಂಶ ಪಡೆದು ನೆಲಮಂಗಲ ಕೊನೆಯ ಸ್ಥಾನ ಪಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು 13083 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 12510 ಮಂದಿ ಉತ್ತೀರ್ಣರಾಗುವ ಮೂಲಕ ಶೇ. 95.62 ಫಲಿತಾಂಶ ಪಡೆದಿದೆ.
ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಜಿಲ್ಲೆಯ ಒಟ್ಟು 278 ಪ್ರೌಢಶಾಲೆಗಳಲ್ಲಿನ ಒಟ್ಟು 13,083 ವಿದ್ಯಾರ್ಥಿಗಳ ಹಾಜರಾಗಿದ್ದು, 12,510 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡ 95.62 ರಷ್ಟು ಫಲಿತಾಂಶ ಪಡೆದಿದ್ದಾರೆ.
ಒಟ್ಟು 6639 ಬಾಲಕರು ಹಾಜರಾಗಿದ್ದು 6247 ಬಾಲಕರು ತೇರ್ಗಡೆಯಾಗುವ ಮೂಲಕ ಶೇ. 94.10 ರಷ್ಟು ಫಲಿತಾಂಶ ಪಡೆದಿದ್ದಾರೆ. 6444 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದು, 6263 ಬಾಲಕಿಯರು ತೇರ್ಗಡೆ ಹೊಂದುವ ಮೂಲಕ ಶೇ 97.19 ರಷ್ಟು ಫಲಿತಾಂಶ ದೊರಕಿದೆ.
ನಗರ ಪ್ರದೇಶದ 4775 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 4496 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ. 94.16 ರಷ್ಟು ಫಲಿತಾಂಶ ದೊರೆತಿದೆ.
ಗ್ರಾಮೀಣ ಪ್ರದೇಶದ 8308 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 8014 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ 96.46 ರಷ್ಟು ಫಲಿತಾಂಶ ಸಿಕ್ಕಿದೆ.
ಖಾಸಗಿ ಶಾಲೆಗಳ ಮೇಲುಗೈ
ಇನ್ನೂ ಇಂದು ಪ್ರಕಟವಾದ ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳು ಶೇ.94.35, ಅನುದಾನಿತ ಶಾಲೆಗಳು ಶೇ. 90.14 ಪಡೆದಿದ್ದರೆ, ಅನುದಾನ ರಹಿತ (ಖಾಸಗಿ ಶಾಲೆಗಳು) 98.27 ರಷ್ಟು ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳು ಮೇಲುಗೈ ಸಾಧಿಸಿವೆ.
