ದೊಡ್ಡಬಳ್ಳಾಪುರ: ತಾಲೂಕು ವಕೀಲರ ಸಂಘ ಹಾಗೂ ನ್ಯಾಯಾಂಗ ಇಲಾಖೆಯಿಂದ ವಾರ್ಷಿಕ ಕ್ರೀಡಾಕೂಟ 2026-27ರ (Annual sports event) ಪ್ರಶಸ್ತಿ ವಿತರಣೆ ಕಾರ್ಯಕ್ರಮ (Awards ceremony) ನಗರದ ವಕೀಲರ ಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಡಾ. ಬಿ.ಆರ್. ಅಂಬೇಡ್ಕರ್, ಡಾಕ್ಟರ್ ಬಾಬು ಜಗಜೀವನ್ ರಾಮ್, ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಹಾಗೂ ಬಸವ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ರೇಖಾ ಅವರು ಬಂದು ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರು ದೀನ ದಲಿತರ ಪರ, ಎಲ್ಲಾ ವರ್ಗದವರ ಪರ, ನೊಂದವರ ಪರ ಧ್ವನಿಯಾಗಿ ಸದೃಢ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬುನಾದಿಯನ್ನ ಹಾಕಿಕೊಟ್ಟವರು ಎಂದು ಸ್ಮರಿಸಿದರು.
ಡಾಕ್ಟರ್ ಬಾಬು ಜಗಜೀವನ ರಾಮ್ ಅವರು ರೈತಪರ ಅವರ ಕಾಳಜಿಯನ್ನ ಸ್ಮರಿಸಿದರು.
ಡಾಕ್ಟರ್ ಶ್ರೀ ಶಿವಕುಮಾರ ಸ್ವಾಮೀಜಿಗಳ ಕುರಿತು ಮಾತನಾಡಿ, ಶಿವಕುಮಾರ ಸ್ವಾಮೀಜಿಗಳನ್ನು ನಡೆದಾಡುವ ದೇವರು ಎಂದು ಕರೆಯುತ್ತಿದ್ದರು, ಅನ್ನದಾಸೋಹ ಹಾಗೂ ವಿದ್ಯಾದಾನ ಎಲ್ಲ ವರ್ಗದವರಿಗೂ ತಲುಪುವಂತೆ ನೋಡಿಕೊಂಡವರು.
ಬಸವಣ್ಣನವರು ಕಾಯಕವೇ ಕೈಲಾಸ ಎನ್ನುತ್ತಾ ಜಾತಿ ಮತಗಳ ಭೇದವನ್ನು ತೊಡೆದು ಹಾಕಲು ಅವರ ಕಾಲಘಟ್ಟದಲ್ಲಿ ಪ್ರಾರಂಭಿಸಿದರು ಎಂಬುದನ್ನು ಸ್ಮರಿಸಿದ್ದರು.
ಇದೇ ವೇಳೆ ದೊಡ್ಡಬಳ್ಳಾಪುರ ವಕೀಲರ ಸಂಘದ ಹಾಗೂ ನ್ಯಾಯಾಲಯದ ಮೂಲಭೂತ ಸೌಕರ್ಯಗಳ ಕೊರತೆಯನ್ನು ಬಗೆಹರಿಸಿಕೊಡುವ ನಿಟ್ಟಿನಲ್ಲಿ ಭರವಸೆ ನೀಡಿದರು.
ಬಳಿಕ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪ್ರಶಸ್ತಿಯನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನಿರ್ಮಲಾ ಕೆ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಚ್ ಎ ಶಿಲ್ಪ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರವೀಣ ಜೆ ಎಸ್, ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರಾದ ದಾಸರಿ ಕ್ರಾಂತಿ ಕಿರಣ್, ಒಂದನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೀತಿ ಕೆ, ಸಂಘದ ಅಧ್ಯಕ್ಷ ರೇಣುಕಾ ಮೂರ್ತಿ, ಪ್ರಧಾನ ಕಾರ್ಯದರ್ಶಿ, ಬಿ ಕೆ ಕನಕ ರಾಜ್, ಉಪಾಧ್ಯಕ್ಷರಾದ ಜಗನ್ನಾಥ್ ಕೆ., ಖಜಾಂಚಿ ಗೀತಾ ಆರ್., ಜಂಟಿ ಕಾರ್ಯದರ್ಶಿ ನರಸಿಂಹಮೂರ್ತಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಿರಿಯ ವಕೀಲರುಗಳು ನ್ಯಾಯಾಂಗದ ಸಿಬ್ಬಂದಿ ಹಾಜರಿದ್ದರು.

