ದೊಡ್ಡಬಳ್ಳಾಪುರ: ರಾಷ್ಟ್ರ ಮಟ್ಟದಲ್ಲಿ ಪಕ್ಷ ವೊಂದನ್ನು ಸ್ಥಾಪಿಸಿ ಕೋಮುವಾದಿಗಳಿಂದ ತುಳಿತಕ್ಕೊಳಗಾದ ದಲಿತ ಮತ್ತು ಅಲ್ಪಸಂಖ್ಯಾತರ ಪರ ರಾಜಕೀಯ ಚಳವಳಿ ರೂಪಿಸಿ ಕೋಮುವಾದಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಕಾನ್ಸಿರಾಂ ಅವರು ದೇಶ ಕಂಡ ಅತ್ಯುನ್ನತ ರಾಜಕಾರಣಿ ಎಂದು ಬಿಎಸ್ಪಿ ರಾಜ್ಯ ಕಾಾರ್ಯದರ್ಶಿ ನಂದಿಗುಂದ ಪಿ.ವೆಂಕಟೇಶ್ ಹೇಳಿದರು.
ನಗರದ ಅರ್ಕಾವತಿ ಬಡಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿಯಿಂದ ನಡೆದ ಕಾನ್ಸಿರಾಂ ಅವರ 14ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಬಡವರಿಗಾಗಿ ಸಾವಿರಾರು ಯೋಜನೆಗಳು ಬಂದರೂ ದಲಿತರ ಸ್ಥಿತಿ ಬದಲಾಗದಿರುವುದರಿಂದ ಕಾನ್ಸಿರಾಂ ಅವರು ಇದರ ಬಗ್ಗೆ ಚಳವಳಿಯನ್ನೇ ರೂಪಿಸಿ, ಪಕ್ಷ ಸಂಘಟನೆ ಮಾಡಿದ್ದರು. ತುಳಿತಕ್ಕೊಳಗಾದವರ ಪರ ನಿಂತು ಅವರನ್ನು ಮೇಲೆತ್ತುವ ಪ್ರಯತ್ನದಲ್ಲಿ ತೊಡಗಿದ್ದರು ಎಂದು ತಿಳಿಸಿದರು.
ಈ ವೇಳೆ ರಾಜ್ಯ ಕಾರ್ಯದರ್ಶಿ ಬಸವರಾಜು, ಜಿಲ್ಲಾ ಸಂಯೋಜಕ ಹೆಚ್.ನರಸಿಂಹಯ್ಯ, ತಾಲ್ಲೂಕು ಅಧ್ಯಕ್ಷ ಎನ್.ಎಂ.ದಾಳಪ್ಪ ನೆರಲಘಟ್ಟ, ತಾಲ್ಲೂಕು ಕಾರ್ಯದರ್ಶಿ ಓಬಳೇಶ್, ತಾಲ್ಲೂಕು ಉಪಾಧ್ಯಕ್ಷ ಮುನಿಯಪ್ಪ,ಅಫ್ರೋಜ್ ಪಾಷ ಮತ್ತಿತರಿದ್ದರು.

